ಅಸ್ಸಾಂ| ರೈಲ್ವೆ ಹಳಿಯಲ್ಲಿ ಐಇಡಿ ಸ್ಫೋಟ: ರೈಲು ಸೇವೆಯಲ್ಲಿ ವ್ಯತ್ಯಯ
Photo Credit : PTI
ಗುವಾಹಟಿ,ಅ.23: ಗುರುವಾರ ಬೆಳಗಿನ ಜಾವ ಅಸ್ಸಾಮಿನ ಕೊಕ್ರಜಾರ್ ಮತ್ತು ಸಲಾಕಾಟಿ ನಡುವೆ ರೈಲ್ವೆ ಮಾರ್ಗದಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಹಳಿಗಳಿಗೆ ಭಾಗಶಃ ಹಾನಿಯಾಗಿದ್ದು,ರೈಲುಗಳ ಸಂಚಾರ ಗಂಟೆಗಟ್ಟಲೆ ಸ್ಥಗಿತಗೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದರು.
ಮಧ್ಯರಾತ್ರಿಯ ನಂತರ ಸಂಭವಿಸಿದ ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದಿಂದಾಗಿ ರೈಲ್ವೆ ಮಾರ್ಗದಲ್ಲಿ ಸಣ್ಣ ಕುಳಿ ಸೃಷ್ಟಿಯಾಗಿದ್ದು, ಹಲವಾರು ಗಂಟೆಗಳ ಕಾಲ ರೈಲುಗಳನ್ನು ನಿಲ್ಲಿಸುವಂತಾಗಿತ್ತು.
ಸ್ಫೋಟ ಸಂಭವಿಸಿದ ಬೆನ್ನಿಗೇ ಸುರಕ್ಷತಾ ಸಿಬ್ಬಂದಿಗಳು ಮತ್ತು ರೈಲ್ವೆ ಇಂಜಿನಿಯರ್‌ಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಶಂಕಿತ ಬಾಂಬ್‌ಸ್ಫೋಟದಿಂದಾಗಿ ಹಳಿಗಳು ಮತ್ತು ಸ್ಲೀಪರ್‌ಗಳಿಗೆ ಹಾನಿಯುಂಟಾಗಿತ್ತು. ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎಂಟು ರೈಲುಗಳ ಸಂಚಾರವನ್ನು ನಿಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.
ಬೆಳಿಗ್ಗೆ 5:30ರ ಸುಮಾರಿಗೆ ರೈಲುಗಳ ಸಂಚಾರ ಪುನರಾರಂಭಗೊಂಡಿದೆ.