×
Ad

ಅಯೋಧ್ಯೆ| ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಣೆ: ತಂದೆಯ ಮಡಿಲಿನಲ್ಲೇ ಮೃತಪಟ್ಟ ಬಾಲಕ; ವೈದ್ಯರ ಅಮಾನತು

Update: 2025-08-21 18:28 IST

PC : timesofindia.indiatimes.com

ಅಯೋಧ್ಯೆ: ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದ ವ್ಯಕ್ತಿಯೊಬ್ಬರಿಗೆ, ಆಸ್ಪತ್ರೆಯಲ್ಲಿ ಹಾಸಿಗೆಗಳು ಹಾಗೂ ಆಮ್ಲಜನಕವಿಲ್ಲ ಎಂಬ ಕಾರಣ ನೀಡಿ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಬಾಲಕನಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಏರ್ಪಾಡು ಮಾಡದಿದ್ದರಿಂದ, ಆ ಬಾಲಕ ಮೃತಪಟ್ಟಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಸರಕಾರಿ ಆಸ್ಪತ್ರೆಯಲ್ಲಿ ತನ್ನ ಪುತ್ರನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ, ಹತಾಶ ತಂದೆಯು ತನ್ನ 12 ವರ್ಷದ ಪುತ್ರನನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಬಾಲಕನನ್ನು ಪರೀಕ್ಷಿಸಿದ ವೈದ್ಯರು, ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಈ ಘಟನೆಯು ಸೋಮವಾರ ಅಯೋಧ್ಯೆಯ ರಾಜಶ್ರೀ ದಶರಥ್ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ಈ ಘಟನೆಗೆ ಕಾರಣರಾದ ಮೂವರು ವೈದ್ಯರನ್ನು ಅಮಾನತುಗೊಳಿಸಿರುವ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಸತ್ಯಜೀತ್ ವರ್ಮ, ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, “ತುರ್ತು ಚಿಕಿತ್ಸಾ ವಿಭಾಗದಲ್ಲಿ ಇಬ್ಬರು ಹೆಚ್ಚುವರಿ ವೈದ್ಯರನ್ನು ನಿಯೋಜಿಸಿದ್ದರೂ, ಇದು ಬಹುದೊಡ್ಡ ನಿರ್ಲಕ್ಷ್ಯದ ಘಟನೆಯಾಗಿದೆ. ನಾನು ನನ್ನ ರೌಂಡ್ಸ್ ವೇಳೆ ಇಂತಹುದೇ ನಿರ್ಲಕ್ಷ್ಯದ ಘಟನೆಗಳನ್ನು ಗಮನಿಸಿ, ಅಂತಹ ಮಕ್ಕಳಿಗೆ ಚಿಕಿತ್ಸೆ ಒದಗಿಸಿದ್ದೆ. ಆಸ್ಪತ್ರೆಯಲ್ಲಿ ಸಾಕಷ್ಟು ಹಾಸಿಗೆಗಳು ಹಾಗೂ ಆಮ್ಲಜನಕ ಸೌಲಭ್ಯವಿದೆ. ಘಟನೆಗೆ ಕಾರಣರಾಗಿರುವ ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.

ಅಯೋಧ್ಯೆಯಲ್ಲಿನ ಹರಿಂಗ್ತೊಂಗಂಜ್ ಗ್ರಾಮದ ಮುಹಮ್ಮದ್ ಮುನೀರ್ ಎಂಬುವವರು ಎರಡು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ತಮ್ಮ ಪುತ್ರ ಮುಹಮ್ಮದ್ ಆರಿಫ್ ನನ್ನು ನಕಲಿ ವೈದ್ಯರೊಬ್ಬರ ಬಳಿ ಕರೆದೊಯ್ದಿದ್ದಾರೆ. ಆದರೆ, ಆರಿಫ್ ನ ಜ್ವರ ಮತ್ತು ಕೆಮ್ಮು ಮತ್ತಷ್ಟು ವಿಷಮಿಸಿದೆ. ಕೂಡಲೇ ಆತನನ್ನು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಅಲ್ಲಿಯ ವೈದ್ಯರು ವೈದ್ಯಕೀಯ ಕಾಲೇಜಿಗೆ ಬಾಲಕನನ್ನು ಕರೆದೊಯ್ಯುವಂತೆ ಶಿಫಾರಸು ಮಾಡಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದ ಬಾಲಕನಿಗೆ ವೈದ್ಯಕೀಯ ಕಾಲೇಜಿನ ವೈದ್ಯರು ಸೂಕ್ತ ಚಿಕಿತ್ಸೆ ನೀಡದೆ ಇದ್ದುದರಿಂದ, ಆತ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News