×
Ad

ದಲಿತ ಯುವತಿಯ ಕೊಲೆ ಪ್ರಕರಣ: ಮಾಧ್ಯಮಗಳ ಮುಂದೆ ಗದ್ಗದಿತರಾದ ಅಯೋಧ್ಯೆ ಸಂಸದ ಅವಧೇಶ್ ಪ್ರಸಾದ್

Update: 2025-02-02 14:28 IST

ಸಂಸದ ಅವಧೇಶ್ ಪ್ರಸಾದ್ (X/@Awadheshprasad_)

ಅಯೋಧ್ಯೆ : ಉತ್ತರಪ್ರದೇಶದ ಅಯೋಧ್ಯೆಯ ಫೈಝಾಬಾದ್ ಗ್ರಾಮದ ಬಳಿಯ ನಿರ್ಜನ ಕಾಲುವೆಯಲ್ಲಿ ನಾಪತ್ತೆಯಾಗಿದ್ದ ದಲಿತ ಯುವತಿಯ ಬೆತ್ತಲೆ ಮೃತದೇಹ ಪತ್ತೆ ಬೆನ್ನಲ್ಲೇ ಸಂಸದ ಅವಧೇಶ್ ಪ್ರಸಾದ್ ಮಾಧ್ಯಮದ ಮುಂದೆ ಗದ್ಗದಿತರಾಗಿ ಅಳುತ್ತಿರುವುದು ಕಂಡುಬಂದಿದೆ.

ಫೈಝಾಬಾದ್ ಗ್ರಾಮದಲ್ಲಿ ಬಾಲಕಿಯೋರ್ವಳು ನಾಪತ್ತೆಯಾಗಿದ್ದಳು. ನಾಪತ್ತೆಯಾಗಿದ್ದ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ, ಆಕೆಯ ಕಣ್ಣುಗಳನ್ನು ಕಿತ್ತು ಹಾಕಲಾಗಿದೆ, ಮೃತದೇಹದ ಮೇಲೆ ಆಳವಾದ ಗಾಯಗಳು ಕಂಡು ಬಂದಿದೆ ಎಂದು ಮೃತ ಯುವತಿಯ ಕುಟುಂಬ ಆರೋಪಿಸಿದೆ.

ಘಟನೆಯ ಬಗ್ಗೆ ಅಯೋಧ್ಯೆಯ ಸಂಸದ ಅವಧೇಶ್ ಪ್ರಸಾದ್ ಮಾಧ್ಯಮದ ಮುಂದೆ ಮಾತನಾಡುತ್ತಾ ದುಃಖವನ್ನು ವ್ಯಕ್ತಪಡಿಸಿದ್ದಾರೆ. "ನಾನು ದಿಲ್ಲಿಗೆ ಹೋಗುತ್ತೇನೆ, ಪ್ರಧಾನಿ ಮೋದಿ ಬಳಿ ವಿಷಯವನ್ನು ಪ್ರಸ್ತಾಪಿಸುತ್ತೇನೆ, ನಮಗೆ ನ್ಯಾಯ ಸಿಗದಿದ್ದರೆ, ನಾನು ರಾಜೀನಾಮೆ ನೀಡುತ್ತೇನೆ. ಆ ಯುವತಿಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ರಾಮ ಎಲ್ಲಿದ್ದೀಯಾ, ಸೀತಾ ತಾಯಿ ಎಲ್ಲಿದ್ದೀಯಾ?" ಎಂದು ಗದ್ಗದಿತರಾಗಿ ಪ್ರಶ್ನಿಸಿದ್ದಾರೆ.

ಈ ವೇಳೆ ಅಲ್ಲಿದ್ದವರು ಜನರಿಗಾಗಿ ಹೋರಾಡಲು ನಿಮ್ಮನ್ನು ಸಂಸದರನ್ನಾಗಿ ಮಾಡಲಾಗಿದೆ. ಆದ್ದರಿಂದ ನೀವು ಹೋರಾಡಿ ನ್ಯಾಯ ಪಡೆಯುತ್ತೀರಿ ಎಂದು ಅವರಿಗೆ ಸಮಾಧಾನ ಪಡಿಸುತ್ತಿರುವುದು ಕಂಡು ಬಂದಿದೆ.

"ಗುರುವಾರ ರಾತ್ರಿಯಿಂದ ಯುವತಿ ನಾಪತ್ತೆಯಾಗಿದ್ದಾಳೆ, ನಂತರ ಗ್ರಾಮದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಸಣ್ಣ ಕಾಲುವೆಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಆಕೆಯ ಕೈಗಳು ಮತ್ತು ಕಾಲುಗಳನ್ನು ಹಗ್ಗಗಳಿಂದ ಕಟ್ಟಿ ಹಾಕಲಾಗಿತ್ತು, ಆಕೆಯ ದೇಹದ ಮೇಲೆ ತೀವ್ರವಾದ ಗಾಯಗಳು ಕಂಡು ಬಂದಿದೆ, ಆಕೆಯ ಕಾಲು ಮುರಿದಿತ್ತು" ಎಂದು ಯುವತಿಯ ಸೋದರ ಮಾವ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸರ್ಕಲ್ ಆಫೀಸರ್ ಅಶುತೋಷ್ ತಿವಾರಿ, ಶುಕ್ರವಾರ ಯುವತಿಯ ನಾಪತ್ತೆ ಕುರಿತು ಪ್ರಕರಣ ದಾಖಲಾಗಿತ್ತು. ಯುವತಿಯ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಳಿಕ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News