ಬಿಹಾರ: 'ಗರ್ಭಿಣಿ ಉದ್ಯೋಗ ಏಜೆನ್ಸಿ' ವಂಚನೆ ಜಾಲ ಭೇದಿಸಿದ ಪೊಲೀಸರು
Photo: freepik
ಪಾಟ್ನಾ: ನವಾಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ"ಅಖಿಲ ಭಾರತ ಗರ್ಭಿಣಿ ಉದ್ಯೋಗ ಏಜೆನ್ಸಿ" ಎಂಬ ವಂಚಕರ ಜಾಲವನ್ನು ಭೇದಿಸಿದ ಬಿಹಾರ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.
ವಂಚನೆ ಜಾಲದ ಸೂತ್ರಧಾರ ಮುನ್ನಾ ಕುಮಾರ್ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಬರ್ ಅಪರಾಧಿಗಳು ಜನಸಾಮಾನ್ಯರನ್ನು ವಂಚಿಸಲು ಹಲವು ವಿನೂತನ ತಂತ್ರಗಳನ್ನು ಹೆಣೆಯುತ್ತಾರೆ. ಆದರೆ ಬಿಹಾರದ ಈ ಗ್ಯಾಂಗ್ ಕಂಡುಕೊಂಡ ಮಾರ್ಗ ಕಲ್ಪನೆಗೂ ನಿಲುಕದ್ದು. ಮಹಿಳೆಯರನ್ನು ಗರ್ಭಿಣಿಯರನ್ನಾಗಿ ಮಾಡುವುದಾಗಿ ಆಮಿಷವೊಡ್ಡಿ ಬಲೆಗೆ ಬೀಳುವಂತೆ ಮಾಡಲು ದೊಡ್ಡ ಮೊತ್ತದ ವೇತನದ ಆಶ್ವಾಸನೆ ನೀಡಲಾಗುತ್ತಿತ್ತು.
799 ರೂಪಾಯಿ ಮೊತ್ತವನ್ನು ಠೇವಣಿ ಮಾಡಿ ನೋಂದಾಯಿಸಿದಲ್ಲಿ, ಪತಿ ಅಥವಾ ಸಂಗಾತಿಯಿಂದ ಗರ್ಭ ಧರಿಸುವಲ್ಲಿ ವಿಫಲವಾದ ಮಹಿಳೆಯರಿಗೆ ಯಶಸ್ವಿಯಾಗಿ ಗರ್ಭದಾನ ಮಾಡುವ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಲಾಗುತ್ತಿತ್ತು. ಅಂಥವರಿಗೆ 13 ಲಕ್ಷ ರೂಪಾಯಿ ಪ್ರತಿಫಲವನ್ನು ಪಡೆಯುವ ಆಮಿಷವನ್ನು ಒಡ್ಡಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನೋಂದಣಿ ಬಳಿಕ ಯಾವ ಮಹಿಳೆಗೆ ಗರ್ಭದಾನ ಮಾಡಬಹುದು ಎಂದು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಹಲವು ಮಹಿಳೆಯರ ಫೋಟೊ ಕಳುಹಿಸಲಾಗುತ್ತಿತ್ತು. ಮಹಿಳೆಯರ ಭಾವಚಿತ್ರವನ್ನು ಆಯ್ಕೆ ಮಾಡಿದ ಬಳಿಕ ಭದ್ರತಾ ಠೇವಣಿಯಾಗಿ 5 ರಿಂದ 20 ಸಾವಿರ ರೂಪಾಯಿ ವರೆಗೆ ಠೇವಣಿ ಮಾಡುವಂತೆ ಸೂಚಿಸಲಾಗುತ್ತಿತ್ತು. ಚಂದದ ಮಹಿಳೆಯರನ್ನು ಆಯ್ಕೆ ಮಾಡಿಕೊಂಡಷ್ಟೂ ಅಧಿಕ ಮೊತ್ತ ನಿಗದಿಪಡಿಸಲಾಗುತ್ತಿತ್ತು ಎಂದು ಹೇಳಿದ್ದಾರೆ.
ಯಶಸ್ವಿಯಾಗಿ ಗರ್ಭದಾನ ಮಾಡಿದಲ್ಲಿ 13 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹಾಗೂ ಗರ್ಭದಾನ ವಿಫಲವಾದಲ್ಲಿ 5 ಲಕ್ಷ ರೂಪಾಯಿ ಸಮಾಧಾನಕರ ಬಹುಮಾನವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದಾಗಿ ನಂಬಿಸಲಾಗುತ್ತಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.