ಬಿಹಾರ: ಯುವಕನ ಹತ್ಯೆಗೆ ಯುಟ್ಯೂಬ್ ಜನಪ್ರಿಯತೆ ಕಾರಣ: ಸಹೋದರಿ ಆರೋಪ
ನಲಂದಾ: ಮನೆಯಲ್ಲಿ ಮಲಗಿದ್ದ 19 ವರ್ಷದ ಯುವಕನೋರ್ವನನ್ನು ದುಷ್ಕರ್ಮಿಗಳ ಗುಂಪೊಂದು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ಬಿಹಾರದ ನಲಂದಾದಲ್ಲಿ ನಡೆದಿದೆ.
ಹತ್ಯೆಯಾದ ಯುವಕನನ್ನು ಹರಧನ್ ಎಂದು ಗುರುತಿಸಲಾಗಿದೆ. ಈತ ಟ್ಯೂಷನ್ ನೀಡುತ್ತಿದ್ದ ಹಾಗೂ ರೀಲ್ಸ್ ಗಳನ್ನು ಮಾಡುತ್ತಿದ್ದ. ತಂದೆ ನಿಧನರಾದ ಬಳಿಕ ತಾಯಿ ಹಾಗೂ ಇಬ್ಬರು ಸಹೋದರಿಯರಿಗೆ ಇದರಿಂದ ಬರುತ್ತಿದ್ದ ಹಣದಿಂದ ನೆರವಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿಗಳ ಗುಂಪು ಹರಧನ್ ನ ಮನೆಗೆ ನುಗ್ಗಿ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದೆ. ಗಂಭೀರ ಗಾಯಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹತ್ಯೆಗೆ ನಿಜವಾದ ಕಾರಣ ಏನು ಎಂಬುದು ತಿಳಿದು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಆದರೆ, ಹರಧನ್ ಹತ್ಯೆಗೆ ಯುಟ್ಯೂಬ್ ನಲ್ಲಿ ಆತನ ಜನಪ್ರಿಯತೆ ಹೆಚ್ಚಾಗಿರುವುದೇ ಕಾರಣ ಎಂದು ಆತನ ಸಹೋದರಿ ಆರೋಪಿಸಿದಾರೆ.
ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.