ಸರಕಾರಿ ಯೋಜನೆಗಳ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿದ ಬಿಜೆಪಿ; ಆರ್‌ಟಿಐ ಮಾಹಿತಿಯಿಂದ ಬಹಿರಂಗ
ಸ್ವಚ್ಛ ಭಾರತ ಮಿಷನ್‌ಗೆ ಹಣ ಪಾವತಿಸಿದರೆ ರಸೀದಿ ಮಾತ್ರ ಬಿಜೆಪಿಯಿಂದ ಬರುತ್ತದೆ!
Photos: Official X and PTI
ಹೊಸದಿಲ್ಲಿ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ, ಬೇಟಿ ಬಚಾವೋ ಬೇಟಿ ಪಡಾವೋ ಮತ್ತು ಕಿಸಾನ್ ಸೇವಾ ಯೋಜನೆಗಳ ಹೆಸರಿನಲ್ಲಿ, ಭಾರತೀಯ ಜನತಾ ಪಕ್ಷವು 2021–22ರಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದೆ ಎಂಬ ಗಂಭೀರ ವಿಚಾರ ಆರ್‌ಟಿಐ ದಾಖಲೆಗಳ ಮೂಲಕ ಬಹಿರಂಗವಾಗಿದೆ.
ಈ ಯೋಜನೆಗಳಿಗೆ ಹಣ ಸಂಗ್ರಹಿಸಲು ಬಿಜೆಪಿ ಅಥವಾ ಅದರ ವೇದಿಕೆಗಳಿಗೆ ಯಾವುದೇ ರೀತಿಯ ಅಧಿಕೃತ ಅನುಮತಿ ನೀಡಿಲ್ಲವೆಂದು ಮೂರು ಪ್ರಮುಖ ಸಚಿವಾಲಯಗಳು ಸ್ಪಷ್ಟಪಡಿಸಿರುವುದರಿಂದ, ವಿಷಯವು ಹೊಸ ತಿರುವು ಪಡೆದಿದೆ.
ಚೆನ್ನೈ ಮೂಲದ ಹಿರಿಯ ಪತ್ರಕರ್ತ ಮತ್ತು ಸತ್ಯಂ ಟಿವಿ ಚಾನೆಲ್‌ನ ಸುದ್ದಿ ಸಂಪಾದಕರಾದ ಬಿ.ಆರ್. ಅರವಿಂದಕ್ಷನ್ ಅವರು ಸಲ್ಲಿಸಿದ ಹಲವಾರು ಆರ್‌ಟಿಐ ಅರ್ಜಿಗಳಿಗೆ ಬಂದ ಉತ್ತರಗಳಲ್ಲಿ, ಬಿಜೆಪಿಯ NaMo App ಮತ್ತು narendramodi.in ಪೋರ್ಟಲ್ ಗಳು 2021ರ ಡಿಸೆಂಬರ್‌ರಿಂದ 2022ರ ಫೆಬ್ರವರಿವರೆಗೆ ಸರ್ಕಾರದ ಯೋಜನೆಗಳ ಹೆಸರಿನಲ್ಲಿ ಹಣ ಸಂಗ್ರಹಿಸಿದ್ದು, ಇದಕ್ಕೆ ಯಾವುದೇ ಸಚಿವಾಲಯದಿಂದ ಅನುಮತಿ ನೀಡಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಡಿಸೆಂಬರ್ 25, 2021ರಂದು ‘ಮೈಕ್ರೋ ಡೊನೇಷನ್’ ಅಭಿಯಾನವನ್ನು ಪ್ರಾರಂಭಿಸಿದ್ದರು. ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ದೇಣಿಗೆ ಸಂಗ್ರಹಿಸಲಾಗುವುದು ಎಂದು ಘೋಷಿಸಿದರೂ, ದೇಣಿಗೆ ನೀಡಲು ವೇದಿಕೆಗೆ ಪ್ರವೇಶಿಸಿದ ನಾಗರಿಕರು ಸ್ವಚ್ಛ ಭಾರತ, ಬೇಟಿ ಬಚಾವೋ ಬೇಟಿ ಪಡಾವೋ ಮತ್ತು ಕಿಸಾನ್ ಸೇವಾ ಈ ಮೂರು ಸರ್ಕಾರಿ ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಸೂಚಿಸಲಾಗಿತ್ತು. ಇದು ಪಕ್ಷದ ನಿಧಿಗೆ ದೇಣಿಗೆ ನೀಡುವುದಾಗಿ ಭಾವಿಸಿದ ದಾನಿಗಳಿಗೆ ಗೊಂದಲ ಮೂಡಿಸಿತು.
ಅದೇ ದಿನ, ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಿಂದ ಅಭಿಯಾನವನ್ನು ಪ್ರೋತ್ಸಾಹಿಸಿ, ತಾವೇ 1,000 ರೂ. ದೇಣಿಗೆ ನೀಡಿದ್ದಾಗಿ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದರು. ನಂತರ, ಅನೇಕ ಬೆಂಬಲಿಗರು ಸಹ ‘ಸರ್ಕಾರಿ ಯೋಜನೆಗಳಿಗೆ ದೇಣಿಗೆ ಕೊಡುತ್ತಿದ್ದೇವೆ’ ಎಂಬ ನಂಬಿ ಹಣ ಪಾವತಿಸಿದರು.
ಈ ವೇಳೆ, ಅರವಿಂದಕ್ಷನ್ ಅವರು ಸ್ವತಃ ಈ ಮೂರು ಯೋಜನೆಗಳಿಗೆ ತಲಾ 100 ರೂ. ನೀಡಿದ ನಂತರ, ಅವರಿಗೆ BJP ಕೇಂದ್ರ ಕಚೇರಿಯಿಂದ ರಸೀದಿಗಳು ಬಂದವು! ಇದರಿಂದ ದೇಣಿಗೆ ಹಣ ನಿಜವಾಗಿ ಸರ್ಕಾರಕ್ಕೆ ತಲುಪಿತೇ ಅಥವಾ ಪಕ್ಷದ ನಿಧಿಗೆ ಸೇರಿತೇ ಎಂಬ ಅನುಮಾನ ಉಂಟಾಯಿತು. ಈ ಹಿನ್ನೆಲೆಯಲ್ಲಿ ಅವರು ಸಂಬಂಧಿಸಿದ ಸಚಿವಾಲಯಗಳಿಗೆ ಆರ್‌ಟಿಐ ಅರ್ಜಿಗಳನ್ನು ಕಳುಹಿಸಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಸ್ವಚ್ಛ ಭಾರತ ಮಿಷನ್-ಗ್ರಾಮೀಣ) ತನ್ನ ಉತ್ತರದಲ್ಲಿ, ಸ್ವಚ್ಛ ಭಾರತ ಯೋಜನೆಗೆ ಯಾವುದೇ ಎನ್‌ಜಿಒ ಅಥವಾ ವ್ಯಕ್ತಿ ಹಣ ಸಂಗ್ರಹಿಸುವಂತಿಲ್ಲವೆಂದು ಸ್ಪಷ್ಟಪಡಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವೂ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗಾಗಿ NaMo App ಮೂಲಕ ನಿಧಿ ಸಂಗ್ರಹಣೆಗೆ ಅನುಮತಿ ನೀಡಿಲ್ಲವೆಂದು ತಿಳಿಸಿದೆ.
ಕೃಷಿ ಸಚಿವಾಲಯಕ್ಕೆ ಸಲ್ಲಿಸಿದ ಅರ್ಜಿಗೆ ಆರಂಭದಲ್ಲಿ ಸ್ಪಷ್ಟ ಉತ್ತರ ಸಿಗದಿದ್ದರೂ, ಮೇಲ್ಮನವಿಯ ನಂತರ ಅರ್ಜಿಯ ವಿಷಯ ಸಂಬಂಧಿಸಿಲ್ಲ ಎಂದು ಅದನ್ನು ವಿಲೇವಾರಿ ಮಾಡಲಾಯಿತು. ಕೃಷಿಗೆ ಹಣ ಸಂಗ್ರಹಿಸುವಂತೆ ಯಾವುದೇ ಯೋಜನೆ ಅಥವಾ ಅನುಮತಿ ಕೇಂದ್ರ ಸರ್ಕಾರ ನೀಡಿಲ್ಲವೆಂದೂ ಉತ್ತರ ಸ್ಪಷ್ಟಪಡಿಸಿತು.
ನಮೋ ಆಪ್ ಮತ್ತು narendramodi.in ಕುರಿತ ಪ್ರಶ್ನೆಗಳನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ PMOಗೆ ವರ್ಗಾಯಿಸಿದಾಗ, ಪPMO ತನ್ನ ಉತ್ತರದಲ್ಲಿ “ಪ್ರಧಾನ ಮಂತ್ರಿಯ ಹೆಸರಿನಲ್ಲಿ ಯಾವುದೇ ಅಧಿಕೃತ ಅಪ್ಲಿಕೇಶನ್ ಅಸ್ತಿತ್ವದಲ್ಲಿಲ್ಲ” ಎಂದು ಹೇಳಿಕೆಯೊಂದನ್ನು ನೀಡಿತು. NaMo App ಮತ್ತು PMO ನಡುವೆ ಯಾವುದೇ ಅಧಿಕೃತ ಸಂಪರ್ಕದ ದಾಖಲೆಗಳಿಲ್ಲವೆಂದೂ ಅದು ತಿಳಿಸಿತು.
ಇದರೊಂದಿಗೆ ಬಿಜೆಪಿಯ “ಮೈಕ್ರೋ ಡೊನೇಷನ್” ಅಭಿಯಾನವು ಯಾವುದೇ ಸರ್ಕಾರಿ ಅನುಮತಿ ಇಲ್ಲದೆ, ಸರ್ಕಾರದ ಯೋಜನೆಗಳ ಹೆಸರನ್ನು ಬಳಸಿಕೊಂಡು ನಡೆಸಲ್ಪಟ್ಟಿತು ಎಂದು ದಾಖಲೆಗಳಲ್ಲಿರುವ ಆಧಾರಗಳೊಂದಿಗೆ ಸ್ಪಷ್ಟವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅರವಿಂದಕ್ಷನ್ ಅವರು ಚೆನ್ನೈ ಪೊಲೀಸ್ ಆಯುಕ್ತರು ಮತ್ತು ಸಿಬಿಐ ಪ್ರಾದೇಶಿಕ ನಿರ್ದೇಶಕರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ವಿನಂತಿಸಿದ್ದಾರೆ. ಅವರು ತಮ್ಮ ದೂರುಗಳಲ್ಲಿ ವಂಚನೆ, ಕ್ರಿಮಿನಲ್ ಪಿತೂರಿ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವು ಕಲಂಗಳು, ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಜನಪ್ರತಿನಿಧಿಗಳ ಪ್ರತಿನಿಧಿತ್ವ ಕಾಯ್ದೆಯ ಉಲ್ಲಂಘನೆಯ ಆರೋಪ ಮಾಡಿದ್ದಾರೆ.
ಅವರು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ದೇಣಿಗೆ ಅಭಿಯಾನದ ಮೂಲಕ ಸಂಗ್ರಹಿಸಿದ ಮೊತ್ತ ಹಾಗೂ ಅದು ಸರ್ಕಾರಕ್ಕೆ ವರ್ಗಾಯಿಸಲಾಯಿತೇ ಎಂಬ ಪ್ರಶ್ನೆಗಳನ್ನು ಒಳಗೊಂಡ ಪತ್ರ ಬರೆದಿದ್ದರೂ, ಇದುವರೆಗೆ ಯಾವುದೇ ಉತ್ತರ ಬಂದಿಲ್ಲ.
“ನಾನು ಸೇರಿದಂತೆ ಅನೇಕ ನಾಗರಿಕರು ಸರ್ಕಾರಿ ಯೋಜನೆಗಳಿಗೆ ದೇಣಿಗೆ ಕೊಡುತ್ತಿದ್ದೇವೆ ಎಂದು ನಂಬಿ ಹಣ ಪಾವತಿಸಿದ್ದೇವೆ. ಆದರೆ ರಸೀದಿಗಳು ಬಿಜೆಪಿಯಿಂದ ಬಂದಿರುವುದು, ಮತ್ತು ಸಚಿವಾಲಯಗಳು ಯಾವುದೂ ಅನುಮತಿ ನೀಡಿಲ್ಲವೆಂದು ಹೇಳಿರುವುದು, ದೊಡ್ಡ ಮಟ್ಟದ ತಪ್ಪು ನಿರೂಪಣೆಯಾಗಿದೆ” ಎಂದು ಅರವಿಂದಕ್ಷನ್ ಹೇಳಿದ್ದಾರೆ. “ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯಕ್ಕೆ ಹೋಗುವುದನ್ನು ನಾನು ಹಿಂಜರಿಯುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.
ಈ ವಿಚಾರವಾಗಿ ‘thewire.in' ಬಿಜೆಪಿ ಕೇಂದ್ರ ಕಚೇರಿಗೆ ಮತ್ತು ನಡ್ಡಾ ಅವರಿಗೆ ಕಳುಹಿಸಿದ ಪ್ರಶ್ನಾವಳಿಗೆ ಇನ್ನೂ ಉತ್ತರ ಬಂದಿಲ್ಲ.