×
Ad

ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಸಚಿವ

Update: 2025-05-13 18:11 IST

 Photo |  X/ @SaralVyangya 

ಭೋಪಾಲ್: ಮಧ್ಯಪ್ರದೇಶದ ಸಚಿವ ಕುನ್ವರ್ ವಿಜಯ್ ಶಾ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಕರ್ನಲ್ ಸೋಫಿಯಾ ಖುರೇಷಿ ಅವರನ್ನು ʼಭಯೋತ್ಪಾದಕರ ಸಹೋದರಿʼ ಎಂದು ಮಧ್ಯಪ್ರದೇಶದ ಸಚಿವ, ಬಿಜೆಪಿ ನಾಯಕ ವಿಜಯ್ ಶಾ ಕರೆದಿದ್ದಾರೆ ಎಂದು ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಇಂದೋರ್ ಜಿಲ್ಲೆಯ ಮಾಹುವಿನ ರಾಯ್ಕುಂಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾ ಮಾಡಿರುವ ಭಾಷಣದ ತುಣುಕನ್ನು ಕಾಂಗ್ರೆಸ್ ಹಂಚಿಕೊಂಡಿದೆ. ಅದರಲ್ಲಿ ಅವರು ಹಿಂದಿಯಲ್ಲಿ, ಅವರು (ಭಯೋತ್ಪಾದಕರು) ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದರು. ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಒರೆಸುವ ಮೂಲಕ ಅಗೌರವ ತೋರಿದ್ದರು. ಅವರಿಗೆ ಸೂಕ್ತ ಉತ್ತರ ನೀಡಲು ಮೋದಿಜಿ ಅವರದ್ದೇ ಜಾತಿಯವರಾದ ಅವರ ಸಹೋದರಿಯನ್ನೇ ಕಳುಹಿಸಿ ಅವರ ಬಟ್ಟೆಬಿಚ್ಚಿ ಹೊಡೆದರು ಎಂದು ಹೇಳಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. 

ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಹೆಸರಿಸದೆ ಸಚಿವರು ಕೋಮುವಾದಿ ಮತ್ತು ಅವಹೇಳನಕಾರಿ ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್, ʼಕರ್ನಲ್ ಸೋಫಿಯಾ ಖುರೇಷಿ ಭಯೋತ್ಪಾದಕರ ಸಹೋದರಿ' ಎಂಬ ಹೇಳಿಕೆಯನ್ನು ಮಧ್ಯಪ್ರದೇಶ ಬಿಜೆಪಿ ಸರಕಾರದ ಸಚಿವ ವಿಜಯ್ ಶಾ ಅವರು ನೀಡಿದ್ದಾರೆ. ಪ್ರತಿಯೋರ್ವ ಭಾರತೀಯನೂ ಭಾರತದ ಹೆಮ್ಮೆಯ ಪುತ್ರಿ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಹೆಮ್ಮೆಪಡುತ್ತಾರೆ. ಆದರೆ, ಅವರ ಬಗ್ಗೆ ಅಂತಹ ನಾಚಿಕೆಗೇಡಿನ ಹೇಳಿಕೆಯನ್ನು ನೀಡಲಾಗಿದೆ. ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಹಣೆಪಟ್ಟಿ ಕಟ್ಟಲಾಗಿದೆ. ಇದು ನಮ್ಮ ವೀರ ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಎಂದು ಹೇಳಿದೆ.

ಬಿಜೆಪಿ ಸಚಿವರ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸೇನಾಧಿಕಾರಿಯ ವಿರುದ್ಧ ಅವರು ನೀಡಿದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News