ಬಿಎಸ್‌ಎಫ್ ಸಿಬ್ಬಂದಿಗಳ ಪ್ರಯಾಣಕ್ಕೆ ಕೊಳಕು ಬೋಗಿಗಳಿರುವ ರೈಲು ವ್ಯವಸ್ಥೆ : ವಿವಾದದ ಬೆನ್ನಲ್ಲೇ ನಾಲ್ವರು ಅಧಿಕಾರಿಗಳು ಅಮಾನತು
ಅಶ್ವಿನಿ ಯಾದವ್ | PC : PTI
ಹೊಸದಿಲ್ಲಿ: ಕಾಶ್ಮೀರದಲ್ಲಿ ಅಮರನಾಥ ಯಾತ್ರೆಯ ಭದ್ರತೆಗೆ ನಿಯೋಜಿತ ಬಿಎಸ್‌ಎಫ್ ಸಿಬ್ಬಂದಿಗಳನ್ನು ತ್ರಿಪುರಾದಿಂದ ಸಾಗಿಸಲು ಶಿಥಿಲಗೊಂಡಿದ್ದ, ಕೊಳಕು ಬೋಗಿಗಳಿದ್ದ ರೈಲನ್ನು ಒದಗಿಸಿದ್ದು ವಿವಾದವನ್ನು ಸೃಷ್ಟಿಸಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ವಿಚಾರಣೆಗೆ ಆದೇಶಿಸಿದ್ದಾರೆ.
ಬುಧವಾರ ರೈಲ್ವೆ ಸಚಿವಾಲಯ ಹೊರಡಿಸಿರುವ ಹೇಳಿಕೆಯ ಪ್ರಕಾರ, ಭದ್ರತಾ ಪಡೆಗಳ ಘನತೆ ಅತ್ಯುನ್ನತವಾಗಿದೆ ಮತ್ತು ಯಾವುದೇ ಮಟ್ಟದಲ್ಲಿ ಇಂತಹ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.
ರೈಲಿನ ವೀಡಿಯೊಗಳು ಆನ್‌ಲೈನ್‌ನಲ್ಲಿ ಹರಿದಾಡಿದ ಬಳಿಕ ಬೋಗಿಗಳ ದುರವಸ್ಥೆಯ ಕುರಿತು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ರೈಲ್ವೆಯನ್ನು ಟೀಕಿಸಿದ್ದರು. ಈಶಾನ್ಯ ಗಡಿನಾಡು ರೈಲ್ವೆ ವಲಯವು ಮಂಗಳವಾರ ಎಕ್ಸ್ ಪೋಸ್ಟ್‌ನಲ್ಲಿ ಆರೋಪಗಳನ್ನು ನಿರಾಕರಿಸಿತ್ತು.
13 ಕಂಪೆನಿಗಳಿಗೆ ಸೇರಿದ ಸುಮಾರು 1,200 ಬಿಎಸ್‌ಎಫ್ ಸಿಬ್ಬಂದಿಗಳು ಜೂ.6ರಂದು ವಿಶೇಷ ರೈಲಿನಲ್ಲಿ ತ್ರಿಪುರಾದ ಉದಯಪುರದಿಂದ ಜಮ್ಮು ತಾವಿಗೆ ಪ್ರಯಾಣಿಸಬೇಕಿತ್ತು. ರೈಲು ತ್ರಿಪುರಾ, ಅಸ್ಸಾಂ ಮತ್ತು ಪ.ಬಂಗಾಳಗಳಲ್ಲಿ ನಾಲ್ಕು ಸ್ಥಳಗಳಲ್ಲಿ ನಿಂತು ಇನ್ನಷ್ಟು ಯೋಧರನ್ನು ಹತ್ತಿಸಿಕೊಳ್ಳಬೇಕಿತ್ತು.
ಆದರೆ ಇಲಾಖೆಯು ಜೂ.9ರಂದು ರೈಲನ್ನು ಒದಗಿಸಿತ್ತು. ರೈಲಿನಲ್ಲಿ ಶಿಥಿಲಗೊಂಡಿದ್ದ ಹಳೆಯ ಬೋಗಿಗಳು ಮತ್ತು ಅನೈರ್ಮಲ್ಯವನ್ನು ಕಂಡ ಯೋಧರು ವೀಡಿಯೊಗಳನ್ನು ಚಿತ್ರೀಕರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದರು.
ಬೋಗಿಗಳ ದುರವಸ್ಥೆಯನ್ನು ತೋರಿಸಿದ ವೀಡಿಯೊಗಳು ವೈರಲ್ ಆಗುತ್ತಿದ್ದಂತೆ ವಿವಿಧ ವಲಯಗಳಿಂದ ರೈಲ್ವೆಯ ವಿರುದ್ಧ ಟೀಕೆಗಳ ಮಹಾಪೂರವೇ ಹರಿದುಬಂದ ಬಳಿಕ ಇದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿತ್ತು.
ಸರಕಾರದ ಸಂಪೂರ್ಣ ಗಮನವು ಕೆಲವು ಆಕರ್ಷಕ ರೈಲುಗಳ ಬಗ್ಗೆ ಪ್ರಚಾರವನ್ನು ಪಡೆದುಕೊಳ್ಳುವಲ್ಲೇ ಕೇಂದ್ರೀಕೃತಗೊಂಡಾಗ ಜನರು ಹೀಗೆ ಪ್ರಾಣಿಗಳಂತೆ ಪ್ರಯಾಣಿಸುವುದು ಅನಿವಾರ್ಯವಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರೆ ಶಮಾ ಮುಹಮ್ಮದ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಕುಟುಕಿದ್ದಾರೆ.