×
Ad

ಕ್ಯಾಲಿಕಟ್ ವಿವಿಯ ಸೆಮಿಸ್ಟರ್‌ ಪರೀಕ್ಷೆಯಲ್ಲಿ ಕಳೆದ ವರ್ಷದ ಪ್ರಶ್ನೆ ಪತ್ರಿಕೆಯೇ ಪುನರಾವರ್ತನೆ!

Update: 2025-11-27 17:49 IST

Credit: uoc.ac.in/

ಕೋಝಿಕ್ಕೋಡ್ (ಕೇರಳ): ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ನಡೆದ ಮಲ್ಟಿ ಡಿಸಿಪ್ಲಿನರಿ ಕೋರ್ಸ್ (ಎಂಡಿಸಿ) ಪದವಿಯ ಸೆಮಿಸ್ಟರ್‌ ಪರೀಕ್ಷೆಯಲ್ಲಿ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಯೇ ಪುನರಾವರ್ತನೆಯಾದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯು ಪರೀಕ್ಷೆಯ ವಿಶ್ವಾಸಾರ್ಹತೆ ಕುರಿತು ವಿದ್ಯಾರ್ಥಿ–ಶಿಕ್ಷಕ ವಲಯದಲ್ಲಿ ತೀವ್ರ ಚರ್ಚೆಗೊಳಗಾಗಿದೆ.

ನ.25ರಂದು ನಡೆದ ಎಂಡಿಸಿ ಸೈಕಾಲಜಿಯ ಮೊದಲ ಸೆಮಿಸ್ಟರ್ ನ ‘ಆರ್ಟ್ ಆಫ್ ಸ್ಟ್ರೆಸ್ ಮ್ಯಾನೇಜ್‌ಮೆಂಟ್’ ಪರೀಕ್ಷೆಯಲ್ಲಿ ಬಳಸಲಾದ ಪ್ರಶ್ನೆ ಪತ್ರಿಕೆ, ಕಳೆದ ವರ್ಷದ ಪ್ರಶ್ನೆಗಳನ್ನೇ ಮತ್ತೆ ನೀಡಿದ್ದಾಗಿ ಪರೀಕ್ಷಾ ನಿಯಂತ್ರಣ ಕಚೇರಿ ಗುರುವಾರ ದೃಢಪಡಿಸಿದೆ.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪುನರಾವರ್ತನೆಯನ್ನು ಗಮನಕ್ಕೆ ತಂದ ನಂತರ ಈ ವಿಚಾರ ಅಧಿಕೃತವಾಗಿ ವಿಶ್ವವಿದ್ಯಾಲಯದ ಗಮನಕ್ಕೆ ಬಂದಿದೆ. ಹೊಸ ಪರೀಕ್ಷೆ ನಡೆಸಬೇಕೇ ಅಥವಾ ಯಾವ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಅಧ್ಯಯನ ಮಂಡಳಿ ನಿರ್ಧಾರ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಹೇಳಿಕೆಯ ಪ್ರಕಾರ, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ವೇಳೆ ಶಿಕ್ಷಕರು ಸಾಮಾನ್ಯವಾಗಿ ಮೂರು ಸೆಟ್‌ಗಳನ್ನು ಸಲ್ಲಿಸುತ್ತಾರೆ. ಆದರೆ ಈ ಬಾರಿ ಸಲ್ಲಿಸಲಾದ ಸೆಟ್‌ಗಳಲ್ಲಿ ಒಂದು ಕಳೆದ ವರ್ಷದ ನಕಲು ಆಗಿದ್ದು, ಕ್ರಾಸ್-ಚೆಕಿಂಗ್ ಪ್ರಕ್ರಿಯೆಯಲ್ಲಿ ಇದು ಪತ್ತೆಯಾಗದೇ ಉಳಿದಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಈ ಪ್ರಕರಣದ ಕುರಿತು ಇಂದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News