×
Ad

ಅಮೆರಿಕದಲ್ಲಿ ಜಾತಿ ತಾರತಮ್ಯ : ದಲಿತ ಹೋರಾಟಗಾರ್ತಿ ತೆನ್ಮೋಳಿ ಸೌಂದರ್ ರಾಜನ್‌ರ ಸಮೀಕ್ಷೆಯಲ್ಲಿ ಸ್ಫೋಟಕ ಸತ್ಯ ಬಹಿರಂಗ

Update: 2025-11-27 10:47 IST

Photo: timesofindia

ವಾಷಿಂಗ್ಟನ್ : 21ನೇ ಶತಮಾನದಲ್ಲೂ ಅಮೆರಿಕದಲ್ಲಿ ಜಾತಿ ತಾರತಮ್ಯ, ದಲಿತರ ಮೇಲಿನ ದೌರ್ಜನ್ಯ ಅಸ್ತಿತ್ವದಲ್ಲಿರುವುದು ದಲಿತ ಹೋರಾಟಗಾರ್ತಿ ನಡೆಸಿರುವ ದೇಶವ್ಯಾಪಿ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ಯುವ ಹೋರಾಟಗಾರ್ತಿ ಹಾಗೂ ದಲಿತರ ನಾಗರಿಕ ಹಕ್ಕುಗಳ ಸಂಘಟನೆ ಈಕ್ವಾಲಿಟಿ ಲ್ಯಾಬ್ಸ್ ನ ಸಹ ಸಂಸ್ಥಾಪಕಿ ತೆನ್ಮೋಳಿ ಸೌಂದರ್ ರಾಜನ್ 2015ರಲ್ಲಿ ಅಮೆರಿಕದಲ್ಲಿರುವ ಜಾತಿ ತಾರತಮ್ಯದ ಕುರಿತು ದೇಶವ್ಯಾಪಿ ಸಮೀಕ್ಷೆ ನಡೆಸಿದ್ದರು.

ಈ ಸಮೀಕ್ಷೆಯಲ್ಲಿ ಪ್ರತಿ ನಾಲ್ವರು ದಲಿತರ ಪೈಕಿ ಓರ್ವ ದಲಿತ ದೈಹಿಕ ಅಥವಾ ಮೌಖಿಕ ಹಲ್ಲೆಗೆ ಗುರಿಯಾಗುವುದು, ಶಿಕ್ಷಣ ಕ್ಷೇತ್ರದಲ್ಲಿ ಪ್ರತಿ ಮೂವರು ದಲಿತರ ಪೈಕಿ ಓರ್ವ ದಲಿತ ಜಾತಿ ತಾರತಮ್ಯಕ್ಕೆ ಗುರಿಯಾಗುವುದು, ಪ್ರತಿ ಮೂವರು ದಲಿತರ ಪೈಕಿ ಇಬ್ಬರು ಉದ್ಯೋಗ ಸ್ಥಳಗಳಲ್ಲಿ ಜಾತಿ ಪಕ್ಷಪಾತ ಧೋರಣೆಗೆ ಗುರಿಯಾಗುವುದು ಹಾಗೂ ದಲಿತರ ಜನಸಂಖ್ಯೆಯ ಅರ್ಧದಷ್ಟು ಮಂದಿ ತಮ್ಮನ್ನು ಸಮಾಜದಿಂದ ಹೊರಹಾಕಬಹುದು ಎಂಬ ಭಯದಿಂದ ಜೀವಿಸುತ್ತಿರುವುದು ಕಂಡು ಬಂದಿದೆ. ದಕ್ಷಿಣ ಏಶ್ಯದ ಜಾತಿ ಬಾಹುಳ್ಯ ಹೊಂದಿರುವ ಜನರು ಜಾತಿ ಒಂದು ಸಮಸ್ಯೆಯಲ್ಲ ಎಂದು ಒತ್ತಿ ಹೇಳುತ್ತಿದ್ದರೂ, ದಲಿತ ಅಮೆರಿಕನ್ನರು ಜಾತಿ ತಾರತಮ್ಯ ಎದುರಿಸುತ್ತಿರುವುದು ಪದೇ ಪದೇ ಸಾಬೀತಾಗುತ್ತಿದೆ.

ಈ ಸಮೀಕ್ಷೆಯಲ್ಲಿನ ಅಂಕಿ-ಸಂಖ್ಯೆಗಳು ಜಾತಿ ಕೇವಲ ದಕ್ಷಿಣ ಏಶ್ಯಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಎತ್ತಿ ತೋರಿಸುತ್ತಿವೆ.

“ಜಾತಿ ತಾರತಮ್ಯ 21ನೇ ಶತಮಾನದ ಅಮೆರಿಕದಲ್ಲಿ ಅಸ್ತಿತ್ವದಲ್ಲಿದೆ” ಎಂದು ಹೇಳುವ ತೆನ್ಮೋಳಿ ಸೌಂದರ್ ರಾಜನ್, ದಲಿತರ ಪರ ನ್ಯಾಯ ಮತ್ತು ದಲಿತರ ನಾಗರಿಕ ಹಕ್ಕುಗಳ ಸಂರಕ್ಷಣೆಗೆ ನೀಡಿದ ಕೊಡುಗೆಗಾಗಿ ಕಳೆದ ತಿಂಗಳು ಪ್ರತಿಷ್ಠಿತ ವೈಕಂ ಪ್ರಶಸ್ತಿಗೆ ಭಾಜನರಾಗಿದ್ದರು.

2022ರಲ್ಲಿ ಪ್ರಕಟವಾಗಿರುವ ‘The trauma of caste’ ಕೃತಿಯಲ್ಲಿ ಈ ಸಂಗತಿಯನ್ನು ಉಲ್ಲೇಖಿಸಿರುವ ತೆನ್ಮೋಳಿ ಸೌಂದರ್ ರಾಜನ್, “ಜಾತಿ ತಾರತಮ್ಯದ ಕುರಿತು ನಾವು ಪ್ರಶ್ನೆಗಳನ್ನು ಕೇಳಬಾರದು ಎಂದು ಬಯಸುವ ಜನರಿಂದಲೇ ದಲಿತರು ಬೈಗುಳಗಳು, ದೈಹಿಕ ಬೆದರಿಕೆ ಹಾಗೂ ಸಾಂಸ್ಥಿಕ ಕಿರುಕುಳಗಳನ್ನೂ ಎದುರಿಸುತ್ತಿದ್ದಾರೆ” ಎಂಬುದರತ್ತಲೂ ಬೊಟ್ಟು ಮಾಡಿದ್ದಾರೆ.

ಕೊಯಂಬತ್ತೂರು ನಿವಾಸಿಯಾಗಿರುವ ದಂಪತಿಗಳಿಗೆ ಜನಿಸಿದ ತೆನ್ಮೋಳಿ ಸೌಂದರ್ ರಾಜನ್, ಬಳಿಕ ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದರು. “ನಾನು ಜಾತಿ ದಬ್ಬಾಳಿಕೆಗೆ ಗುರಿಯಾಗಿರುವ ಸಮುದಾಯಗಳು ಹಾಗೂ ನನ್ನ ಕುಟುಂಬ ಸಾಕ್ಷಿಯಾದ ಜಾತಿ ಆಧಾರಿತ ಸಮಸ್ಯೆಗಳಿಂದ ಪ್ರೇರಿತಳಾಗಿದ್ದಾನೆ” ಎಂದು ಅವರು ಹೇಳಿದ್ದಾರೆ.  

“ಇದು ಕೇವಲ ಒಂದು ಕ್ಷಣವಲ್ಲ. ಇದು ಅಂತರ್ ತಲೆಮಾರಿನ ಮೇಲೆ ಹೇರಲಾಗಿರುವ ಆಘಾತವಾಗಿದ್ದು, ಜಾತಿ ಕಿರುಕುಳಕ್ಕೆ ಅವಕಾಶ ನೀಡಲು ನಮ್ಮ ಮನೆಗಳಲ್ಲಿ, ಶಾಲೆಗಳಲ್ಲಿ ಹಾಗೂ ಉದ್ಯೋಗ ಸ್ಥಳಗಳಲ್ಲಿ ಮರು ಸೃಷ್ಟಿಸಲಾಗಿರುವ ಮೌನವಾಗಿದೆ” ಎನ್ನುತ್ತಾರೆ ಅಮೆರಿಕ ಮೂಲದ ಹೋರಾಟಗಾರ್ತಿ ತೆನ್ಮೋಳಿ ಸೌಂದರ್ ರಾಜನ್. ಅವರು ಜಾಗತಿಕವಾಗಿ ಆಚರಿಸಲಾಗುವ ‘ದಲಿತರ ಇತಿಹಾಸ ಮಾಸ’ದ ಸಹ ಸಂಸ್ಥಾಪಕಿಯೂ ಆಗಿದ್ದಾರೆ.

2000 ಇಸವಿಯ ಆರಂಭದಲ್ಲಿ ಬರ್ಕಲೆಯಲ್ಲಿ ನಡೆದ ಲಾಕಿರೆಡ್ಡಿ ಬಾಲಿ ರೆಡ್ಡಿ ಪ್ರಕರಣ ನನ್ನನ್ನು ನಡುಗಿಸಿತ್ತು. ಭಾರತದಿಂದ ನಕಲಿ ವೀಸಾ ಮೂಲಕ ದಲಿತ ಮಹಿಳೆಯರು ಹಾಗೂ ಬಾಲಕಿಯರನ್ನು ಕರೆ ತಂದಿದ್ದ ಶ್ರೀಮಂತ ಭೂ ಮಾಲಕ ರೆಡ್ಡಿ ಅವರನ್ನು ಕೆಲಸಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದ ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಆತನ ಕಟ್ಟಡದಲ್ಲಿ 13 ವರ್ಷದ ಸಂತ್ರಸ್ತ ಬಾಲಕಿ ಮೃತಪಟ್ಟ ಬಳಿಕ, ಆತನ ಅಪರಾಧ ಕೃತ್ಯಗಳು ಬೆಳಕಿಗೆ ಬಂದಿದ್ದವು. ನಂತರ, ಆತನ ಮೇಲೆ ದೋಷಾರೋಪ ಹೊರಿಸಿದ್ದ ಫೆಡರಲ್ ಪೊಲೀಸರು, ಆತನಿಗೆ ಜೈಲು ಶಿಕ್ಷೆ ವಿಧಿಸಿದ್ದರು. ಇದು ಕ್ಯಾಲಿಫೋರ್ನಿಯಾದಲ್ಲಿ ಮಾನವ ಕಳ್ಳ ಸಾಗಣೆ ಕಾನೂನುಗಳಲ್ಲಿ ಸುಧಾರಣೆಗೆ ಕಾರಣವಾಗಿತ್ತು.

“ಈ ವೇಳೆ ಅಪರಾಧಿ ರೆಡ್ಡಿಯ ಬಗ್ಗೆ ಮೃದು ಧೋರಣೆ ತಳೆಯಬೇಕು ಎಂದು ಪ್ರಬಲ ಜಾತಿ ಬೆಂಬಲಿಗರು ಪತ್ರ ಬರೆದಿದದ್ದು ನನಗೆ ನೆನಪಾಗುತ್ತಿದೆ. ಈ ನಿರ್ಭೀತಿ ಭಯಾನಕವಾಗಿತ್ತು. ನಮಗೆ ಒಟ್ಟಾಗಿ ಸಮಾಧಾನಿಸುವ, ಬದುಕುಳಿದಿರುವವರ ಬೆನ್ನಿಗೆ ನಿಲ್ಲುವ ನಾವು ಪರಂಪರಾಗತವಾಗಿ ಅನುಭವಿಸುತ್ತಿರುವ ಅನ್ಯಾಯವನ್ನು ನಿರಾಕರಿಸುವ ಅನಿವಾಸಿ ಭಾರತೀಯರನ್ನು ಹೊಂದಲು ಅರ್ಹರಾಗಿದ್ದೇವೆ” ಎಂದು ಹೇಳುತ್ತಾರೆ.

ನಾವು ತಂತ್ರಜ್ಞಾನದ ಬ್ರಾಹ್ಮಣೀಕರಣವನ್ನು ತೊಡೆದು ಹಾಕಬೇಕು ಹಾಗೂ ಡಿಜಿಟಲ್ ವರ್ಣಭೇದವನ್ನು ತಡೆಯಬೇಕು ಎಂದು ತೆನ್ಮೋಳಿ ಸೌಂದರ್ ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿನ ಜಾತಿ ತಾರತಮ್ಯದ ಕುರಿತು ತೆನ್ಮೋಳಿ ಸೌಂದರ್ ರಾಜನ್ ರೊಂದಿಗೆ ನಡೆಸಿರುವ ಸಂದರ್ಶನದ ಆಯ್ದ ಭಾಗ ಈ ಕೆಳಗಿನಂತಿದೆ:

• ಅಮೆರಿಕದಲ್ಲಿನ ಜಾತಿಯ ಕುರಿತು ನಿಮ್ಮ ಇನ್ನೂ ಕೆಲವು ಸತ್ಯ ಶೋಧನೆಗಳೇನು?

 ಶೇ. 60ರಷ್ಟು ಮಂದಿ ಜಾತ್ಯಾಧಾರಿತ ಬೈಗುಳ ಹಾಗೂ ಅವಹೇಳನಕಾರಿ ನಿಂದನೆಗಳನ್ನು ಅನುಭವಿಸಿರುವುದು, ಶೇ. 40ರಷ್ಟು ಮಂದಿ ತಮ್ಮ ಪ್ರಾರ್ಥನಾ ಸ್ಥಳಗಳಲ್ಲಿ ತಿರಸ್ಕಾರದ ಅನುಭವ ಎದುರಿಸಿರುವುದನ್ನು ನಾವು ಪತ್ತೆ ಹಚ್ಚಿದ್ದೇವೆ. ಶೇ. 20ರಷ್ಟು ಮಂದಿ ವ್ಯಾಪಾರ ಸ್ಥಳಗಳಲ್ಲಿ ತಾರತಮ್ಯವನ್ನು ಅನುಭವಿಸಿದ್ದಾರೆ. ಜಾತಿಯ ಕಾರಣಕ್ಕೆ ನಾವು ಪ್ರೇಮ ಸಂಬಂಧಗಳಿಂದ ತಿರಸ್ಕೃತಗೊಂಡಿದ್ದೇವೆ ಎಂದು ಶೇ. 40ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.

2015ರಲ್ಲಿ ಬಹುತೇಕ ಅಮೆರಿಕ ಶಿಕ್ಷಣ ತಜ್ಞರು ಇದಕ್ಕೆ ಬೆಂಬಲ ಸೂಚಿಸಿರಲಿಲ್ಲ. ನಾವು ಈ ವರದಿಯನ್ನು ಸಿದ್ಧಪಡಿಸುವಾಗ, ನಾವು ಜಾತಿ ನಿಂದನೆಗಳನ್ನು ಅನುಭವಿಸಿದೆವು. ನಮ್ಮ ಸಮೀಕ್ಷಾ ವರದಿಯನ್ನು ಹಂಚಿಕೊಳ್ಳುವುದರಿಂದ, ಸಮದಾಯ ವಿಭಜನೆಯಾಗುತ್ತದೆಯೇ ಎಂಬ ಕುರಿತು ಸಂಘಟನೆಯೊಂದು ಆಡಳಿತ ಮಂಡಳಿ ಸಭೆಯನ್ನು ನಡೆಸಿತ್ತು. ವಾಸ್ತವವೆಂದರೆ, ನಮ್ಮ ಸಮುದಾಯವು ಜಾತಿಯಿಂದ ವಿಭಜನೆಯಾಗಿದೆ. ದೀರ್ಘ ಕಾಲದಿಂದ ಏನನ್ನು ಬಚ್ಚಿಡಲಾಗಿತ್ತು ಅದನ್ನು ನಮ್ಮ ಸಮೀಕ್ಷೆ ಬಯಲು ಮಾಡಿದೆ.

• ನಿಮ್ಮ ವಕಾಲತ್ತಿನಿಂದಾಗಿ ಅಮೆರಿಕ ನಗರದಾದ್ಯಂತ ಜಾತಿ ನಿಗ್ರಹ ಕಾಯ್ದೆಗೆ ಕಾರಣವಾಯಿತೇ?

 ನಮ್ಮ ಜಾತಿ ವರದಿಯನ್ನು ಮೊದಲಿಗೆ ಬಹುತೇಕ ಶಿಕ್ಷಣ ತಜ್ಞರು, ಪ್ರಮುಖವಾಗಿ ಪ್ರಬಲ ಜಾತಿಗಳ ಶಿಕ್ಷಣ ತಜ್ಞರು ತಿರಸ್ಕರಿಸಿದ್ದರು. ಆದರೆ, ಬಳಿಕ ಈ ವರದಿಯು ಕಾಂಗ್ರೆಸ್ ನಿರೂಪಣೆಗೆ ಬುನಾದಿಯಾಯಿತು. ಇದರಿಂದಾಗಿ, ಸಾಂಸ್ಥಿಕ ಸುಧಾರಣೆಗಳು ಜಾರಿಗೆ ಬಂದವು. ಈ ವರದಿಯು ಕ್ಯಾಲಿಫೋರ್ನಿಯಾದಲ್ಲಿ ಜಾತಿ ತಾರತಮ್ಯವನ್ನು ನಿಷೇಧಿಸುವ ಎಸ್ಬಿ 403 ಮಸೂದೆಯ ಶಾಸನಾತ್ಮಕ ಹೋರಾಟಕ್ಕೆ ಕಾರಣವಾಯಿತು. 2023ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಅಸ್ತಿತ್ವದಲ್ಲಿರುವ ತಾರತಮ್ಯ ಕಾಯ್ದೆಗಳಿಗೆ ಜಾತಿಯನ್ನು ಸೇರ್ಪಡೆ ಮಾಡಲು ಕಾರಣವಾದ ಕಾಂಗ್ರೆಸ್ ಸೆನೆಟರ್ ಐಶಾ ವಹಾಬ್ ಮಂಡಿಸಿದ ಎಸ್ಬಿ 403 ಮಸೂದೆಗೆ ಇದು ಪ್ರೇರಣೆಯಾಯಿತು. ಇದರಿಂದಾಗಿ, ಜಾತಿಯ ಕಾರಣಕ್ಕಾಗಿ ವಸತಿ, ಉದ್ಯೋಗ ಅಥವಾ ಶೈಕ್ಷಣಿಕ ಅವಕಾಶಗಳನ್ನು ನಿರಾಕರಿಸುವುದು ಕಾನೂನುಬಾಹಿರ ಎಂದು ಘೋಷಿತವಾಯಿತು. ಎರಡೂ ಸದನಗಳಿಂದ ಎಸ್ಬಿ 403 ಮಸೂದೆ ಅಂಗೀಕಾರಗೊಂಡರೂ, ಪ್ರಬಲ ಹಿಂದೂ ಜಾತಿಗಳ ಒತ್ತಡಕ್ಕೊಳಗಾಗಿದ್ದ ಗವರ್ನರ್, ತಮ್ಮ ಪರಮಾಧಿಕಾರವನ್ನು ಬಳಸಿ ಆ ಮಸೂದೆಯನ್ನು ತಿರಸ್ಕರಿಸಿದರು. ಆದರೆ, ಈ ಮಸೂದೆಯನ್ನು ತಿರಸ್ಕರಿಸುವಾಗಲೂ ಕೂಡಾ, ಕಾನೂನಿನ್ವಯ ಜಾತಿ ತಾರತಮ್ಯ ಈಗಾಗಲೇ ಕಾನೂನುಬಾಹಿರ ಎಂದು ಅವರು ದೃಢಪಡಿಸಿದ್ದರು. ಆ ಮೂಲಕ, ನಾವು ಆಗಲೂ ಗೆಲುವು ಸಾಧಿಸಿದ್ದೆವು. ಜಾತಿ ಕಾರಣಕ್ಕಾಗಿ ವಸತಿ ನಿರಾಕರಣೆಗೊಳಗಾಗುತ್ತಿದ್ದ, ಉದ್ಯೋಗ ಸ್ಥಳಗಳಲ್ಲಿ ಕಿರುಕುಳ ಅನುಭವಿಸುತ್ತಿದ್ದ ಅಥವಾ ದೈಹಿಕ ಅಥವಾ ಮೌಖಿಕ ದೌರ್ಜನ್ಯಕ್ಕೀಡಾಗುತ್ತಿದ್ದ ಕ್ಯಾಲಿಫೋರ್ನಿಯಾ ಪ್ರಜೆಗಳಿಗೆ ಪರಿಹಾರ ಪಡೆಯಲು ಇದರಿಂದ ಸ್ಪಷ್ಟ ರಹದಾರಿ ದೊರೆತಂತಾಯಿತು. ಇದರಿಂದಾಗಿ ನಮ್ಮ ಸಮುದಾಯಗಳು ಒಟ್ಟಾಗಿ ಗೌರವದಿಂದ ಜೀವಿಸಲು ಇದು ಸಾಧನವಾಯಿತು.

• ನಿಮ್ಮ ಕೆಲಸವು ತಂತ್ರಜ್ಞಾನ ಉದ್ಯಮಗಳತ್ತ ಗಮನ ಹರಿಸಿದೆಯೇ?

 ತಂತ್ರಜ್ಞಾನ ಕಂಪೆನಿಗಳು ತಟಸ್ಥ ಅರ್ಹತಾ ತಾಣಗಳಲ್ಲ. ಅವು ಬಲಿಷ್ಠ ಕಾರ್ಪೊರೇಟ್ ಸಂಸ್ಥೆಗಳಾಗಿದ್ದು, ಅವು ಪ್ರಬಲ ಜಾತಿ ಜಾಲಗಳನ್ನು ಪದೇ ಪದೇ ರಕ್ಷಿಸುತ್ತವೆ. ಅವು ಸಾರ್ವಜನಿಕ ಸಹಾಯ ಧನದಿಂದ ಲಾಭ ಪಡೆಯುತ್ತಿದ್ದರೂ, ಪ್ರಜಾಸತ್ತಾತ್ಮಕ ವಿರೋಧಿ ರಾಜಕೀಯ ಕಾರ್ಯಸೂಚಿಗಳಿಗೆ ನೆರವು ಒದಗಿಸುತ್ತಿವೆ. ನಾವು ತಂತ್ರಜ್ಞಾನವನ್ನು ನಿರ್ಬಂಧಿಸಬೇಕೇ ಹೊರತು, ಅದನ್ನು ಪೂಜಿಸಬಾರದು. ಕಂಪೆನಿಗಳು ತಾರತಮ್ಯ ವಿರೋಧಿ ನೀತಿಗಳು, ವರ್ತಕ ಮತ್ತು ಕಿರುಕುಳ ನೀತಿಗಳಲ್ಲಿ ಜಾತಿಯನ್ನು ವಿಶೇಷವಾಗಿ ಸೇರ್ಪಡೆಗೊಳಿಸಬೇಕು. ಮಾನವ ಸಂಪನ್ಮೂಲಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಜಾತಿ ಜಾಗೃತಿ ತರಬೇತಿಯನ್ನು ನೀಡಬೇಕು ಹಾಗೂ ಜಾತಿ ಕೇಂದ್ರಿತ ಪಕ್ಷಪಾತವನ್ನು ಪತ್ತೆ ಹಚ್ಚಲು ದತ್ತಾಂಶಗಳು ಹಾಗೂ ಅಲ್ಗರಿದಂಗಳನ್ನು ಪರಿಶೋಧನೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶದ ಅವಕಾಶ ಪಡೆಯಲು ಈ ಹಿಂದಿನ ತಲೆಮಾರು ಹೇಗೆ ಬ್ರಾಹ್ಮಣೀಕರಣವನ್ನು ತೊಡೆದು ಹಾಕಲು ಹೋರಾಟ ನಡೆಸಿತೊ, ಅದೇ ರೀತಿ ನಾವು ಡಿಜಿಟಲ್ ವರ್ಣಭೇದವನ್ನು ತಡೆಯಲು ತಂತ್ರಜ್ಞಾವನ್ನು ಬ್ರಾಹ್ಮಣೀಕರಣದಿಂದ ಮುಕ್ತಗೊಳಿಸಲು ಹೋರಾಟ ನಡೆಸಲೇಬೇಕಿದೆ.

ಸೌಜನ್ಯ: TOI

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News