×
Ad

ಒಡಿಶಾ | ಪುರಿ ಕಾಲ್ತುಳಿತ ಘಟನೆಯ ವಿರುದ್ಧ ಬಿಜೆಡಿ ವಾಗ್ದಾಳಿ: ಕ್ಷಮೆಯಾಚಿಸಿದ ಸಿಎಂ ಮೋಹನ್ ಚರಣ್ ಮಾಝಿ

Update: 2025-06-29 16:06 IST

Photo credit: PTI

ಭುವನೇಶ್ವರ: ಪುರಿಯಲ್ಲಿ ನಡೆದ ಜಗನ್ನಾಥ ರಥಯಾತ್ರೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮೃತಪಟ್ಟ ಘಟನೆಯ ಹೊಣೆ ಹೊತ್ತುಕೊಂಡಿರುವ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಈ ದುರ್ಘಟನೆಗೆ ಭಕ್ತಾದಿಗಳ ಕ್ಷಮೆ ಕೋರಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋಹನ್ ಚರಣ್ ಮಾಝಿ, “ಈ ಘಟನೆಯು ಕ್ಷಮಿಸಲಾಗದ ನಿರ್ಲಕ್ಷ್ಯದ ಫಲಿತಾಂಶ” ಎಂದು ಬಣ್ಣಿಸಿದ್ದು, ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ. ಈ ಘಟನೆಗೆ ಜವಾಬ್ದಾರರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಹೇಳಿದ್ದಾರೆ.

“ಶಾರದಾಬಾಲಿಯಲ್ಲಿ ಮಹಾಪ್ರಭುಗಳ ದೃಶ್ಯವನ್ನು ಕಣ್ತುಂಬಿಕೊಳ್ಳಲು ಭಕ್ತಾದಿಗಳು ಅತೀವ ಉತ್ಸುಕತೆ ತೋರಿದ್ದರಿಂದಾಗಿ ಉಂಟಾದ ನೂಕುನುಗ್ಗಲು ಹಾಗೂ ಅವ್ಯವಸ್ಥೆಯಿಂದಾಗಿ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ವೈಯಕ್ತಿಕವಾಗಿ ನಾನು ಹಾಗೂ ನನ್ನ ಸರಕಾರ ಜಗನ್ನಾಥನ ಭಕ್ತಾದಿಗಳಲ್ಲಿ ಕ್ಷಮೆ ಕೋರುತ್ತೇವೆ. ಶಾರದಾಬಾಲಿಯಲ್ಲಿ ತಮ್ಮ ಜೀವಗಳನ್ನು ಕಳೆದುಕೊಂಡ ಭಕ್ತಾದಿಗಳ ಕುಟುಂಬಗಳ ಸದಸ್ಯರಿಗೆ ನಾವು ಸಂತಾಪ ಸೂಚಿಸುತ್ತೇವೆ ಹಾಗೂ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಅವರಿಗೆ ನೀಡುವಂತೆ ಮಹಾಪ್ರಭು ಜಗನ್ನಾಥರನ್ನು ಕೋರುತ್ತೇನೆ” ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಪುರಿಯಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯ ಕುರಿತು ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಡಿ ಪಕ್ಷದ ಮುಖ್ಯಸ್ಥ ನವೀನ್ ಪಟ್ನಾಯಕ್, ಜಗನ್ನಾಥ ಶ್ರೀ , ಬಾಲಭದ್ರ ಶ್ರೀ ಹಾಗೂ ಶುಭದ್ರ ದೇವತೆಯನ್ನು ಕಣ್ತುಂಬಿಕೊಳ್ಳಲು ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳ ಜನಸಂದಣಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೂ, ಅದನ್ನು ನಿಯಂತ್ರಿಸಲು ಸ್ಥಳದಲ್ಲಿ ವ್ಯವಸ್ಥೆ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದರ ಬೆನ್ನಿಗೇ, ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿಯಿಂದ ಈ ಕ್ಷಮಾಪಣೆ ಕೋರಿಕೆ ಹೊರ ಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News