ಹಿಂಡನ್ ಬರ್ಗ್ ವರದಿ ತೀವ್ರ ಕಳವಳ: ಅದಾನಿ ಪೋರ್ಟ್ಸ್ ಲೆಕ್ಕ ಪರಿಶೋಧಕ ಹುದ್ದೆ ತ್ಯಜಿಸಲಿರುವ ಡೆಲಾಯ್ಟ್ ಸಂಸ್ಥೆ
Photo: PTI
ಹೊಸದಿಲ್ಲಿ: ಹಿಂಡನ್‌ಬರ್ಗ್ ವರದಿಯು ಭಾರತೀಯ ಮೂಲದ ಅದಾನಿ ಪೋರ್ಟ್ಸ್ ನ ಕೆಲವು ನಿರ್ದಿಷ್ಟ ವಹಿವಾಟುಗಳ ಬಗ್ಗೆ ಎಚ್ಚರಿಸಿ, ತೀವ್ರ ಕಳವಳ ವ್ಯಕ್ತಪಡಿಸಿದ್ದರೂ, ಅವುಗಳ ಬಗ್ಗೆ ಸ್ವತಂತ್ರವಾಗಿ ತನಿಖೆ ನಡೆಸಲು ಅದಾನಿ ಪೋರ್ಟ್ಸ್ ಗೆ ಆಸಕ್ತಿ ಇಲ್ಲದೆ ಇರುವುದರಿಂದ ಅದಾನಿ ಪೋರ್ಟ್ ಕಂಪನಿಯ ಲೆಕ್ಕಪರಿಶೋಧಕ ಹುದ್ದೆಗೆ ಡೆಲಾಯ್ಟ್ ಸಂಸ್ಥೆ ರಾಜಿನಾಮೆ ನೀಡಲು ನಿರ್ಧರಿಸಿದೆ ಎಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ reuters.com ವರದಿ ಮಾಡಿದೆ.
ಅಮೆರಿಕಾ ಮೂಲದ ಕಿರು ಅವಧಿಯ ಮಾರಾಟ ಸಂಸ್ಥೆಯಾದ ಹಿಂಡನ್ ಬರ್ಗ್ ವರದಿಯಲ್ಲಿ ಎಚ್ಚರಿಸಲಾಗಿದ್ದ ಕೆಲವು ನಿರ್ದಿಷ್ಟ ವಹಿವಾಟುಗಳತ್ತ ಮೇ ತಿಂಗಳಲ್ಲಿ ಬೊಟ್ಟು ಮಾಡಿದ್ದ ಡೆಲಾಯ್ಟ್, ಕಂಪನಿಯ ಲೆಕ್ಕಪರಿಶೋಧಕರ ಕಳವಳವನ್ನು ಸೂಚಿಸುವ ಅರ್ಹತೆಯುಳ್ಳ ಅಭಿಪ್ರಾಯವನ್ನು ಮಾತ್ರ ನೀಡಿತ್ತು.
ಹಿಂಡನ್ ಬರ್ಗ್ ಸಂಸ್ಥೆಯ ಆರೋಪಗಳ ತೀವ್ರತೆಗೆ ಗುರಿಯಾಗಿದ್ದ ತೆರಿಗೆ ವಿನಾಯಿತಿಯ ಅಸಮರ್ಪಕ ಬಳಕೆ, ವೃತ್ತಾಕಾರದ ಗ್ರಾಹಕರೊಂದಿಗೆ ಸಂಬಂಧ ಹೊಂದಿರುವ ವಹಿವಾಟುಗಳು ಹಾಗೂ ಅದಾನಿ ಸಮೂಹದ ಸಾಲದ ಮೊತ್ತವು ಕಳೆದ ಜನವರಿಯಿಂದ ಅದಾನಿ ಸಮೂಹದ ಆರ್ಥಿಕ ನಿರ್ವಹಣೆಯ ಮೇಲೆ ಕರಿನೆರಳು ಚಾಚಿದೆ. ಈಗ ಲೆಕ್ಕಪರಿಶೋಧಕರ ರಾಜಿನಾಮೆ ನಿರ್ಧಾರವು ಮತ್ತೊಂದು ಸುತ್ತಿನ ಕರಿನೆರಳನ್ನು ಅದಾನಿ ಸಮೂಹದ ಮೇಲೆ ಚಾಚಿದೆ.
ಹಿಂಡನ್ ಬರ್ಗ್ ವರದಿ ಪ್ರಕಟವಾದಾಗಿನಿಂದ ಅದಾನಿ ಸಮೂಹದ ಷೇರು ಮೌಲ್ಯವು ರೂ. 150 ಶತಕೋಟಿ ಡಾಲರ್ ನಷ್ಟು ನಷ್ಟ ಅನುಭವಿಸಿದೆ. ಹೀಗಿದ್ದೂ, ಅದಾನಿ ಸಮೂಹವು ತನ್ನ ಸಾಲವನ್ನು ಮರು ಪಾವತಿ ಮಾಡುವ ಮೂಲಕ ಹೂಡಿಕೆದಾರರ ವಿಶ್ವಾಸವನ್ನು ಮರಳಿ ಗಳಿಸಿದ್ದರಿಂದ ಉದ್ಯಮದಲ್ಲಿ ಒಂದಿಷ್ಟು ನೆಲೆ ಗಳಿಸಿಕೊಂಡಿದೆ ಎಂದು ವರದಿಯಾಗಿದೆ.
ಹಿಂಡನ್ ಬರ್ಗ್ ವರದಿಯು ಎಚ್ಚರಿಸಿದ್ದ ಗ್ರಾಹಕರಿಗೆ ಸಂಬಂಧಿಸಿದ ವಹಿವಾಟುಗಳ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಡೆಲಾಯ್ಟ್ ಸೂಚಿಸಿದರೂ, ಅದಕ್ಕೆ ಅದಾನಿ ಸಮೂಹವು ಒಪ್ಪಿಗೆ ಸೂಚಿಸದ ಕಾರಣ, ಡೆಲಾಯ್ಟ್ ಸಂಸ್ಥೆಯ ರಾಜಿನಾಮೆ ನಿರ್ಧಾರ ಹೊರಬಿದ್ದಿದೆ ಎಂದು ಮೂಲಗಳು ತಿಳಿಸಿವೆ.
reuters.com ಸುದ್ದಿ ಸಂಸ್ಥೆಯ ಮನವಿಗೆ ತಕ್ಷಣದ ಪ್ರತಿಕ್ರಿಯೆ ನೀಡಲು ಡೆಲಾಯ್ಟ್ ಹಾಗೂ ಅದಾನಿ ಪೋರ್ಟ್ಸ್ ನಿರಾಕರಿಸಿವೆ ಎಂದು ವರದಿಯಾಗಿದೆ.