×
Ad

2002ರ ಹತ್ಯೆ ಪ್ರಕರಣ | ಡೇರಾ ಮುಖ್ಯಸ್ಥ ಗುರ್ಮಿತ್‌ ಸಿಂಗ್ ಖುಲಾಸೆ

Update: 2024-05-28 14:10 IST

Photo : facebook/derasachasaudha

ಚಂಡೀಗಢ: 2002ರಲ್ಲಿ ನಡೆದಿದ್ದ ಡೇರಾ ಅಧಿಕಾರಿಯೊಬ್ಬರ ಹತ್ಯಾ ಪ್ರಕರಣದಲ್ಲಿ ಡೇರಾ ಮುಖ್ಯಸ್ಥ ಗುರ್ಮಿತ್‌ ಸಿಂಗ್ ಅವರನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಖುಲಾಸೆಗೊಳಿಸಿದೆ. ಡೇರಾದ ರಾಜ್ಯ ಮಟ್ಟ ಸಮಿತಿಯ ಸದಸ್ಯರಾಗಿದ್ದ ರಂಜಿತ್ ಸಿಂಗ್ ಅವರನ್ನು 2002ರಲ್ಲಿ ಗುಂಡಿಟ್ಟು ಹತ್ಯೆಗೈಯ್ಯಲಾಗಿತ್ತು.

ಹರ್ಯಾಣದ ಸಿರ್ಸಾದಲ್ಲಿರುವ ಡೇರಾ ಮುಖ್ಯ ಕಚೇರಿಯಲ್ಲಿ ಮಹಿಳೆಯರನ್ನು ಹೇಗೆ ಲೈಂಗಿಕ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ವಿವರಿಸುವ ಅನಾಮಧೇಯ ಪತ್ರಗಳ ಹಂಚಿಕೆಯ ಹಿಂದೆ ರಂಜಿತ್ ಸಿಂಗ್ ಇದ್ದಾರೆ ಎಂಬ ಶಂಕೆಯ ಮೇರೆಗೆ ಅವರನ್ನು ಹತ್ಯೆಗೈಯ್ಯಲಾಗಿತ್ತು ಎಂದು ಆರೋಪಿಸಲಾಗಿತ್ತು.

2021ರಲ್ಲಿ ಈ ಹತ್ಯಾ ಪ್ರಕರಣದಲ್ಲಿ ಆರೋಪಿಯಾಗಿದ್ದ ಗುರ್ಮಿತ್‌ ಸಿಂಗ್ ಅವರನ್ನು ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿತ್ತು ಹಾಗೂ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅನಾಮಧೇಯ ಪತ್ರಗಳ ಹಂಚಿಕೆಯಿಂದ ಗುರ್ಮಿತ್‌ ಸಿಂಗ್ ಕುಪಿತರಾಗಿದ್ದರು ಹಾಗೂ ರಂಜಿತ್ ಸಿಂಗ್ ರನ್ನು ಹತ್ಯೆಗೈಯ್ಯಲು ಇತರರೊಂದಿಗೆ ಸಂಚು ನಡೆಸಿದ್ದರು ಎಂಬುದು ಸಂಶಯಕ್ಕೆಡೆ ಇಲ್ಲದಂತೆ ಸಾಬೀತಾಗಿದೆ ಎಂದು ವಿಶೇಷ ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು. 56 ವರ್ಷದ ಗುರ್ಮಿತ್‌ ಸಿಂಗ್ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ಅಪರಾಧಿಗಳು ಎಂದು ಘೋಷಿಸಲ್ಪಟ್ಟಿದ್ದ ಇನ್ನಿತರ ನಾಲ್ವರೂ ಇಂದು (ಮಂಗಳವಾರ) ಖುಲಾಸೆಗೊಂಡರು.

ಡೇರಾದಲ್ಲಿನ ಇಬ್ಬರು ಸಾಧ್ವಿಗಳ ಮೇಲೆ ಅತ್ಯಾಚಾರ ನಡೆಸಲಾಗಿದೆ ಹಾಗೂ ಪ್ರಭಾವಿ ಡೇರಾ ಮುಖ್ಯಸ್ಥರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ವ್ಯಾಪಕವಾಗಿ ವರದಿ ಮಾಡಿದ್ದ ಪತ್ರಕರ್ತ ರಾಮ್ ಚಂದರ್ ಪ್ರಜಾಪತಿ ಹತ್ಯೆಯ ಪ್ರಕರಣದಲ್ಲಿ ವಿವಾದಾತ್ಮಕ ಡೇರಾ ಮುಖ್ಯಸ್ಥ ಗುರ್ಮಿತ್‌ ಸಿಂಗ್ ಸದ್ಯ ಜೈಲಿನಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News