ವಿದೇಶಗಳಲ್ಲಿ ಖಾಲಿಸ್ತಾನಿ ನಾಯಕರ ನಡುವಿನ ಭಿನ್ನಾಭಿಪ್ರಾಯ ಹತ್ಯೆಗೆ ಕಾರಣ?
Photo: twitter.com/AskAnshul
ಹೊಸದಿಲ್ಲಿ/ಒಟ್ಟಾವ: ಜೂನ್ ತಿಂಗಳಲ್ಲಿ ಭಾರತಕ್ಕೆ ಅತ್ಯಂತ ಅಗತ್ಯವಿದ್ದ ಕೆನಡಾ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಹೌಸ್ ಆಫ್ ಕಾಮನ್ಸ್ ನಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹೇಳಿಕೆ ನೀಡಿದ ನಂತರ ಭಾರತ ಮತ್ತು ಕೆನಡಾ ಸಂಬಂಧ ತೀವ್ರ ಸ್ವರೂಪದಲ್ಲಿ ಬಿಗಡಾಯಿಸಿದೆ. ಆದರೆ, ಕೆನಡಾವನ್ನು ಉಗ್ರ ಚಟುವಟಿಕೆಗಳ ಪಾಲಿನ ಸ್ವರ್ಗ ಎಂದು ಬಣ್ಣಿಸಿರುವ ಭಾರತವು, ಕೆನಡಾ ಯಾವುದೇ ಆಧಾರವಿಲ್ಲದೆ ತನ್ನನ್ನು ದೂರುತ್ತಿದೆ ಎಂದು ಆರೋಪಿಸಿದೆ ಎಂದು indiatoday.in ವರದಿ ಮಾಡಿದೆ.
ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೂ, ವಿದೇಶಗಳಲ್ಲಿನ ಖಾಲಿಸ್ತಾನಿ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಹಾಗೂ ಕಲಹಗಳು ಕಳೆದ ಒಂದು ವರ್ಷದಿಂದ ವಿಶ್ವಾದ್ಯಂತ ನಡೆಯುತ್ತಿರುವ ಖಾಲಿಸ್ತಾನಿ ಪರವಾದ ನಾಯಕರ ಹತ್ಯೆಗೆ ಕಾರಣವಿರಬಹುದು ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಶಂಕಿಸಿವೆ. ಈ ಅವಧಿಯಲ್ಲಿ ಆರು ಮಂದಿ ಕಟ್ಟಾ ಖಾಲಿಸ್ತಾನಿ ನಾಯಕರು ಒಂದೋ ಸಾವಿಗೀಡಾಗಿದ್ದಾರೆ ಅಥವಾ ಹತ್ಯೆಗೀಡಾಗಿದ್ದಾರೆ.
ಇದೆಲ್ಲವೂ 1985ರ ಏರ್ ಇಂಡಿಯಾ ಬಾಂಬ್ ದಾಳಿಯ ಆರೋಪಿಯಾಗಿದ್ದ ಹಾಗೂ 2005ರಲ್ಲಿ ಆರೋಪದಿಂದ ಖುಲಾಸೆಗೊಂಡಿದ್ದ ರಿಪುದಮನ್ ಸಿಂಗ್ ಮಲಿಕ್ ಜುಲೈ ತಿಂಗಳಲ್ಲಿ ಕೆನಡಾದ ಸರ್ರೆಯಲ್ಲಿ ಹತ್ಯೆಗೀಡಾದ ನಂತರ ಪ್ರಾರಂಭವಾಯಿತು. ಈ ಹತ್ಯೆಯ ನಂತರ ತನಿಖೆ ಕೈಗೊಂಡಿದ್ದ ಕೆನಡಾ ಭದ್ರತಾ ಗುಪ್ತಚರ ಸೇವೆಯು, ಸಿಖ್ಖರ ಧಾರ್ಮಿಕ ಶಾಸನವಾದ ಗುರು ಗ್ರಂಥ್ ಸಾಹಿಬ್ ಅನ್ನು ಭಾರತದ ಹೊರಗೆ ಮುದ್ರಿಸುವ ವಿವಾದದಲ್ಲಿ ಮಲಿಕ್ ಸಂಬಂಧ ಹೊಂದಿದ್ದ ಎಂಬುದನ್ನು ಪತ್ತೆ ಹಚ್ಚಿತ್ತು. ಈ ವಿವಾದವು ಖಾಲಿಸ್ತಾನಿ ನಾಯಕರಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು.
ಇದೇ ರೀತಿ, ಕಳೆದ ನವೆಂಬರ್ ತಿಂಗಳಲ್ಲಿ ಭಯೋತ್ಪಾದಕನಾಗಿ ಬದಲಾಗಿದ್ದ ಕುಖ್ಯಾತ ಭೂಗತ ಪಾತಕಿ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಮಾದಕ ದ್ರವ್ಯವನ್ನು ಅತಿಯಾಗಿ ಸೇವಿಸಿದ್ದರಿಂದ ಮೃತಪಟ್ಟಿದ್ದ ಎಂದು ವರದಿಯಾಗಿತ್ತು. ಈತ ಭಯೋತ್ಪಾದಕರು, ಭೂಗತ ಪಾತಕಿಗಳು ಹಾಗೂ ಮಾದಕ ದ್ರವ್ಯ ಕಳ್ಳಸಾಗಣೆದಾರರ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ಭಾವಿಸಲಾಗಿದೆ. ಆತನ ಕುರಿತು ಯಾವುದೇ ಮಾಹಿತಿ ನೀಡಿದರೂ ರೂ. 10 ಲಕ್ಷ ಬಹುಮಾನ ನೀಡಲಾಗುವುದು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಘೋಷಿಸಿತ್ತು.
ಈ ವರ್ಷದ ಮೇ ತಿಂಗಳಲ್ಲಿ, ಉಗ್ರ ಸಂಘಟನೆಯಾದ ಖಾಲಿಸ್ತಾನಿ ಕಮಾಂಡೊ ಪಡೆಯ ಮುಖ್ಯಸ್ಥ ಪರಂಜಿತ್ ಸಿಂಗ್ ಪಂಜ್ವಾರ್ ಲಾಹೋರ್ ನ ಜೋಹರ್ ಪಟ್ಟಣದಲ್ಲಿ ಗುಂಡೇಟಿಗೆ ಬಲಿಯಾಗಿದ್ದ. ಆತ 1995ರಲ್ಲಿ ಪಾಕಿಸ್ತಾನಕ್ಕೆ ಪರಾರಿಯಾಗಿದ್ದ. ಖಾಲಿಸ್ತಾನಿ ಕಮಾಂಡೊ ಪಡೆಯ ಮಾಜಿ ಮುಖ್ಯಸ್ಥ ಹಾಗೂ ತನ್ನ ಸೋದರ ಸಂಬಂಧಿ ಲಾಭ್ ಸಿಂಗ್ ಮೃತಪಟ್ಟ ನಂತರ ಪಂಜ್ವಾರ ಖಾಲಿಸ್ತಾನಿ ಕಮಾಂಡೊ ಪಡೆಯ ನಾಯಕತ್ವವನ್ನು ವಹಿಸಿಕೊಂಡಿದ್ದ.
ಜೂನ್ 15ರಂದು, ಖಾಲಿಸ್ತಾನಿ ವಿಮೋಚನಾ ಪಡೆಯ ಸದಸ್ಯ ಅವತಾರ್ ಸಿಂಗ್ ಖಂಡಾ ಅಮೆರಿಕಾದ ಬರ್ಮಿಂಗ್ ಹ್ಯಾಮ್ ಆಸ್ಪತ್ರೆಯೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ. ಕೆಲವು ವರದಿಗಳ ಪ್ರಕಾರ, ಖಂಡಾ ರಕ್ತದ ಕ್ಯಾನ್ಸರ್ ಗೆ ತುತ್ತಾಗಿದ್ದ. ಆದರೆ, ಆತನಿಗೆ ವಿಷಪ್ರಾಶನ ಮಾಡಿಸಿ ಹತ್ಯೆ ಮಾಡಲಾಗಿದೆ ಎಂದು ಆತನ ಬೆಂಬಲಿಗರು ಆರೋಪಿಸುತ್ತಾರೆ. ಖಂಡಾಗೆ 2012ರಿಂದ ಅಮೆರಿಕಾದಲ್ಲಿ ರಾಜಕೀಯ ಆಶ್ರಯ ಒದಗಿಸಲಾಗಿತ್ತು. ಆತ ಖಾಲಿಸ್ತಾನಿದ ಪರ ಸಹಾನುಭೂತಿ ಹೊಂದಿರುವ ಅಮೃತ್ ಪಾಲ್ ಗೆ ನಿಕಟವಾಗಿದ್ದ ಎಂದು ನಂಬಲಾಗಿದೆ. ಅಮೃತ್ ಪಾಲ್ ನನ್ನು ಅಸ್ಸಾಂನ ದಿಬ್ರುಗಢ್ ಜೈಲಿನಲ್ಲಿ ಇರಿಸಲಾಗಿದ್ದು, ತನ್ನ ವಿರುದ್ಧ ಭಾರತೀಯ ಭದ್ರತಾ ಸಂಸ್ಥೆಗಳು ತೆಗೆದುಕೊಂಡಿರುವ ಕ್ರಮವನ್ನು ವಿರೋಧಿಸಿ ಮಾರ್ಚ್ ತಿಂಗಳಲ್ಲಿ ಲಂಡನ್ ನ ಭಾರತೀಯ ಹೈಕಮಿಷನ್ ಎದುರು ನಡೆದಿದ್ದ ಪ್ರತಿಭಟನೆಯಲ್ಲಿ ಆತ ಪ್ರಮುಖ ಪಾತ್ರ ವಹಿಸಿದ್ದ ಎಂದು ಹೇಳಲಾಗಿದೆ.
ಜೂನ್ 18ರಂದು ನಿಷೇಧಿತ ಖಾಲಿಸ್ತಾನಿ ಟೈಗರ್ ಪಡೆಯ ಮುಖ್ಯಸ್ಥ ನಿಜ್ಜರ್ (45) ಹಾಗೂ ರೂ. 10 ಲಕ್ಷ ಬಹುಮಾನದ ಮೊತ್ತವನ್ನು ಹೊಂದಿದ್ದ ಭಾರತದ ಅತ್ಯಂತ ಅಗತ್ಯವಿದ್ದ ಭಯೋತ್ಪಾದಕನನ್ನು ಬ್ರಿಟಿಶ್ ಕೊಲಂಬಿಯಾದ ಪಶ‍್ಚಿಮ ಕೆನಡಿಯನ್ ಪ್ರಾಂತ್ಯದಲ್ಲಿರುವ ಸರ್ರೆಯ ಗುರುದ್ವಾರವೊಂದರ ಹೊರಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆಗೈದಿದ್ದರು.
ನಿಜ್ಜರ್ ಹತ್ಯೆಯನ್ನು ಕೆನಡಾ ಪ್ರಧಾನಿ ಪ್ರಸ್ತಾಪಿಸಿದ ನಂತರ, ಸೆಪ್ಟೆಂಬರ್ 20ರಂದು ಭೂಗತ ಪಾತಕಿ ಹಾಗೂ ಖಾಲಿಸ್ತಾನಿ ಬೆಂಬಲಿಗ ಸುಖ್ ದೂಲ್ ಸಿಂಗ್ ಗಿಲ್ ಅಲಿಯಾಸ್ ಸುಖಾ ದುನೇಕಾ ಕೆನಡಾದ ವಿನಿಪೆಗ್ ನಲ್ಲಿ ಹತ್ಯೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಪಂಜಾಬ್ ನ ಮೋಗಾ ಜಿಲ್ಲೆಯವನಾದ ಗಿಲ್, ನಕಲಿ ದಾಖಲೆಗಳನ್ನು ಬಳಸಿ 2017ರಲ್ಲಿ ಕೆನಡಾಗೆ ಪರಾರಿಯಾಗಿದ್ದ. ಆತ ರಾಷ್ಟ್ರೀಯ ತನಿಖಾ ತಂಡದ ಅತ್ಯಂತ ಅಗತ್ಯವಿರುವ ಅಪರಾಧಿಗಳ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿದ್ದಾನೆ. ಕೆನಡಾದಲ್ಲಿರುವ ಆತನ ಬೇನಾಮಿ ಆಸ್ತಿಗಳ ಕುರಿತು ಮಾಹಿತಿ ಒದಗಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಕೆನಡಾ ಸರ್ಕಾರವನ್ನು ಕೋರಿದೆ.
ಗೋಲ್ಡಿ ಬ್ರಾರ್ ಹಾಗೂ ಲಾರೆನ್ಸ್ ಬಿಷ್ಣೋಯಿ ಎದುರಾಳಿಯಾದ ಕೆನಡಾ ಮೂಲದ ಭೂಗತ ಪಾತಕಿಯಾದ ಅರ್ಷದೀಪ್ ದಲ್ಲಾಗೆ ಗಿಲ್ ನಿಕಟವಾಗಿದ್ದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಭಾವಿಸಿದೆ. ನಿಜ್ಜರ್ ಹತ್ಯೆಯ ಕುರಿತು ಕೆನಡಾ ಸರ್ಕಾರವು ವಿಶ್ವಾಸಾರ್ಹ ಸಾಕ್ಷಿಗಳೊಂದಿಗೆ ಇನ್ನೂ ಮುಂದೆ ಬರಬೇಕಿದ್ದು, ವಿದೇಶಗಳಲ್ಲಿರುವ ಖಾಲಿಸ್ತಾನಿ ನಾಯಕರ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳು ಈ ಹತ್ಯೆಗಳಿಗೆ ಕಾರಣ ಎಂಬ ಭಾರತೀಯ ಭದ್ರತಾ ಪಡೆಗಳ ಪ್ರತಿಪಾದನೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.
ಸೌಜನ್ಯ: indiatoday.in