ಪೊಲೀಸ್ ಭದ್ರತೆ ಬಿಡಿ, ಅವರು ನನಗೆ ಜೀವಬೆದರಿಕೆ ಇದ್ದರೂ ಎಫ್‌ಐಆರ್ ಕೂಡ ದಾಖಲಿಸಿಲ್ಲ: ಪತ್ರಕರ್ತೆ ರಾಣಾ ಅಯ್ಯೂಬ್ ಆರೋಪ
Photo: thehindu
ಹೊಸದಿಲ್ಲಿ: ವರ್ಷಗಳಿಂದಲೂ ಆನ್‌ಲೈನ್ ಕಿರುಕುಳಕ್ಕೆ ಒಳಗಾಗಿರುವ ಪತ್ರಕರ್ತೆ ರಾಣಾ ಅಯ್ಯೂಬ್(41) ಈಗ ಖಾಲಿಸ್ತಾನಿಗಳಿಂದ ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ.
ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಕರ್ತೆಯಾಗಿರುವ ಅವರು ಗುಜರಾತ್ ಗಲಭೆಗಳ ಕುರಿತು ತನಿಖಾ ವರದಿಗಾರಿಕೆಯನ್ನು ಮಾಡಿದ್ದಾರೆ, ಮಣಿಪುರ ಗಲಭೆಗಳು, ಭಾರತದ ಮುಸ್ಲಿಮರು ಮತ್ತು ಹಿಂದು ರಾಷ್ಟ್ರೀಯತೆಯ ಬಗ್ಗೆ ಬರೆದಿದ್ದಾರೆ. ತನ್ನ ಗುಜರಾತ್ ಫೈಲ್ಸ್ ಕೃತಿಗಾಗಿ ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದಿದ್ದಾರೆ. ವರ್ಷಗಳಿಂದಲೂ ಆನ್‌ಲೈನ್ ಕಿರುಕುಳವನ್ನು ಎದುರಿಸುತ್ತಿದ್ದಾರೆ. 2022ರಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯ(ಈಡಿ)ವು ಅವರನ್ನು ತನಿಖೆಗೆ ಒಳಪಡಿಸಿತ್ತು. ಆದಾಯ ತೆರಿಗೆ ಇಲಾಖೆಯೂ ಅವರ ಮೇಲೆ ನಿಗಾಯಿರಿಸಿತ್ತು. ಅಯ್ಯೂಬ್ ಹೇಳುವ ಪ್ರಕಾರ ದೇಶದ ವಿವಿಧ ಭಾಗಗಳಲ್ಲಿ ‘ಬಲಪಂಥೀಯ ಟ್ರೋಲ್‌ಗಳಿಂದ’ ಅವರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ.
ಕಳೆದ ಹಲವಾರು ವರ್ಷಗಳಲ್ಲಿ ಅವರು ಕಿರುಕುಳವನ್ನು ಉಲ್ಲೇಖಿಸಿ ಪೋಲಿಸರಿಗೆ ಅನೇಕ ದೂರುಗಳನ್ನು ಸಲ್ಲಿಸಿದ್ದಾರೆ. ಪೋಲಿಸರು ಐದು ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದರಾದರೂ ಅವುಗಳ ಮೇಲೆ ಮುಂದಿನ ಕ್ರಮ ತೆಗೆದುಕೊಂಡಿಲ್ಲ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಬಳಿಕವೇ ಎಚ್ಚೆತ್ತುಕೊಂಡಿದ್ದ ಪೋಲಿಸರು ರಿವಾಲ್ವರ್ ಪರವಾನಿಗೆಯ ಕೊಡುಗೆಯನ್ನು ಅವರ ಮುಂದಿರಿಸಿದ್ದರು.
ನ.2,2025ರಂದು ಅಯ್ಯೂಬ್ ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ 1984ರ ಸಿಖ್ ವಿರೋಧಿ ಹತ್ಯಾಕಾಂಡದ ಬಗ್ಗೆ ಬರೆದಿದ್ದರು.
ಅದೇ ದಿನ ಅವರ ವ್ಯಾಟ್ಸ್‌ಆ್ಯಪ್ ಸಂಖ್ಯೆಗೆ ಕೆನಡಾದ ಸಂಖ್ಯೆಯಿಂದ ನಿರಂತರ ಬೆದರಿಕೆಗಳು ಬಂದಿದ್ದವು. ಇಂದಿರಾ ಗಾಂಧಿಯವರ ಹತ್ಯೆಯನ್ನು ವೈಭವೀಕರಿಸಿ ವಾಷಿಂಗ್ಟನ್ ಪೋಸ್ಟ್‌ನಲ್ಲಿ ಅಭಿಪ್ರಾಯ ಲೇಖನವನ್ನು ಪ್ರಕಟಿಸದಿದ್ದರೆ ಅವರನ್ನು ಮತ್ತು ಅವರ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಲಾಗಿತ್ತು. ರಾಣಾ ಅವರ ಪ್ರಸಕ್ತ ಲೊಕೇಶನ್, ಅವರ ತಂದೆ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ಆ ಕರೆ ಮಾಡಿದ್ದ ವ್ಯಕ್ತಿ ತಿಳಿಸಿದ್ದು, ರಾಣಾ ಅಯ್ಯೂಬ್ ಅವರಿಗೆ ಆಘಾತವಾಗಿತ್ತು.
ಅಯ್ಯೂಬ್ 1984 ರ ಸಿಖ್ ವಿರೋಧಿ ದಂಗೆಗಳ ವಿರುದ್ಧ ಬಹಿರಂಗ ನಿಲುವು ಹೊಂದಿದ್ದಾರೆ,ಇದು ಕಾಂಗ್ರೆಸ್ ನಾಯಕತ್ವಕ್ಕೆ ಅಸಮಾಧಾನವನ್ನೂ ಉಂಟು ಮಾಡಿದೆ. ಆದರೆ ಈಗ ಖಾಲಿಸ್ತಾನಿಗಳಿಂದ ತನಗೆ ಬೆದರಿಕೆಗಳಿಗೆ ಕಾರಣಗಳನ್ನು ಅರ್ಥ ಮಾಡಿಕೊಳ್ಳಲು ಅವರು ವಿಫಲರಾಗಿದ್ದಾರೆ.
ಅಯ್ಯೂಬ್ ಅವರ ಸುರಕ್ಷತೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿರುವ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ ಅವರಿಗೆ ಪೊಲೀಸ್ ಭದ್ರತೆಗಾಗಿ ಆಗ್ರಹಿಸಿದೆ.
ತಾನು ತನಗೆ ಜೀವಬೆದರಿಕೆಗಳ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ. ಅವರು ತನಗೆ ಭದ್ರತೆ ಒದಗಿಸುವುದು ಬಿಡಿ,ಅವರು ಈವರೆಗೆ ಎಫ್‌ಐಆರ್ ಅನ್ನೂ ದಾಖಲಿಸಿಲ್ಲ ಎಂದು ಅಯ್ಯೂಬ್ ಸುದ್ದಿಸಂಸ್ಥೆಗೆ ತಿಳಿಸಿದರು.
ಸೌಜನ್ಯ: thehindu.com