×
Ad

ಜಿ20 ಶೃಂಗಸಭೆ ಮುಗಿದಿದೆ, ಮೋದಿ ಸರಕಾರವೀಗ ದೇಶಿಯ ಸಮಸ್ಯೆಗಳತ್ತ ಗಮನ ಹರಿಸಬೇಕು:ಖರ್ಗೆ

Update: 2023-09-11 22:28 IST

ಮಲ್ಲಿಕಾರ್ಜುನ ಖರ್ಗೆ | Photo: twitter \ @INCIndia

ಹೊಸದಿಲ್ಲಿ: ಜಿ20 ಶೃಂಗಸಭೆಯು ಮುಗಿದಿದ್ದು,ಮೋದಿ ಸರಕಾರವು ಈಗ ಹಣದುಬ್ಬರ, ನಿರುದ್ಯೋಗ ಮತ್ತು ಮಣಿಪುರ ಹಿಂಸಾಚಾರಗಳಂತಹ ದೇಶಿಯ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸೋಮವಾರ ಹೇಳಿದ್ದಾರೆ.

Xನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಅವರು ಮೋದಿ ಆಡಳಿತವು ಇದನ್ನು ಎಚ್ಚರಿಕೆಯಿಂದ ಆಲಿಸಬೇಕು. 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಸರಕಾರದ ನಿರ್ಗಮನಕ್ಕೆ ದಾರಿ ಮಾಡಿಕೊಡಲು ಜನರು ಆರಂಭಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ. ತನ್ನ ಪೋಸ್ಟಿನಲ್ಲಿ ಅಗತ್ಯ ಸಾಮಗ್ರಿಗಳ ಬೆಲೆಯೇರಿಕೆ ಮತ್ತು ನಿರುದ್ಯೋಗ ಹೆಚ್ಚಳ ಕುರಿತು ಸರಕಾರವನ್ನು ತರಾಟೆಗೆತ್ತಿಕೊಂಡಿರುವ ಖರ್ಗೆ, ಪ್ರಧಾನಿ ನರೇಂದ್ರ ಮೋದಿಯವರು ಸತ್ಯವನ್ನು ಬಚ್ಚಿಡಲು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕರು ಗಮನವನ್ನು ಬೇರೆಡೆಗೆ ಸೆಳೆಯುವ ವಿಷಯಗಳ ಬದಲು ಸತ್ಯವನ್ನು ಕೇಳಲು ಮತ್ತು ನೋಡಲು ಬಯಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

‘ಈಗ ಜಿ20 ಸಭೆಯು ಮುಗಿದಿದೆ. ಮೋದಿ ಸರಕಾರವು ದೇಶಿಯ ಸಮಸ್ಯೆಗಳತ್ತ ಗಮನವನ್ನು ಹರಿಸಬೇಕು. ಆಗಸ್ಟ್ ನಲ್ಲಿ ಸಾಮಾನ್ಯ ಊಟದ ಬೆಲೆ ಶೇ.24ರಷ್ಟು ಏರಿಕೆಯಾಗಿದೆ. ದೇಶದಲ್ಲಿ ನಿರುದ್ಯೋಗ ದರವು ಶೇ.8ರಷ್ಟಿದೆ. ಯುವಜನರ ಭವಿಷ್ಯ ಮಂಕಾಗಿದೆ ’ಎಂದು ಅವರು ಹೇಳಿದ್ದಾರೆ.

ಮೋದಿ ಸರಕಾರದ ದುರಾಡಳಿತದಡಿ ಭ್ರಷ್ಟಾಚಾರದ ಮಹಾಪೂರವೇ ಹರಿಯುತ್ತಿದೆ ಎಂದು ಆರೋಪಿಸಿರುವ ಖರ್ಗೆ, ಸಿಎಜಿ ತನ್ನ ಹಲವಾರು ವರದಿಗಳಲ್ಲಿ ಬಿಜೆಪಿಯನ್ನು ಬಯಲಿಗೆಳೆದಿದೆ. ಜಮ್ಮು-ಕಾಶ್ಮೀರದಲ್ಲಿ 13,000 ಕೋ.ರೂ.ಗಳ ಜಲಜೀವನ್ ಹಗರಣವು ಬೆಳಕಿಗೆ ಬಂದಿದೆ. ಹಗರಣದಲ್ಲಿ ಭ್ರಷ್ಟಾಚಾರವನ್ನು ಬಯಲುಗೊಳಿಸಿದ್ದಕ್ಕಾಗಿ ದಲಿತ ಐಎಎಸ್ ಅಧಿಕಾರಿಯೋರ್ವರಿಗೆ ಕಿರುಕುಳ ನೀಡಲಾಗಿದೆ ಎಂದು ಹೇಳಿದ್ದಾರೆ. ಪ್ರಧಾನಿಯವರ ಆತ್ಮೀಯ ಸ್ನೇಹಿತ (ಗೌತಮ್ ಅದಾನಿ)ನ ಲೂಟಿ ಮತ್ತೊಮ್ಮೆ ಬೆಳಕಿಗೆ ಬಂದಿದೆ ಎಂದಿರುವ ಅವರು,2019ರ ಚುನಾವಣೆಗಳಿಗೆ ಮುನ್ನ ಆರ್ ಬಿ ಐ ಖಜಾನೆಯಿಂದ ಮೂರು ಲ.ಕೋ.ರೂ.ಗಳನ್ನು ಮೋದಿ ಸರಕಾರಕ್ಕೆ ವರ್ಗಾಯಿಸಲು ಕೇಂದ್ರದ ಒತ್ತಡವನ್ನು ಆಗಿನ ಆರ್ ಬಿ ಐ ಡೆಪ್ಯೂಟಿ ಗವರ್ನರ್ ವಿರಲ್ ಆಚಾರ್ಯ ವಿರೋಧಿಸಿದ್ದರು ಎನ್ನುವುದು ಈಗ ಬಹಿರಂಗಗೊಂಡಿದೆ ಎಂದಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಆರಂಭಗೊಂಡಿದೆ ಎಂದಿರುವ ಖರ್ಗೆ, ಹಿಮಾಚಲ ಪ್ರದೇಶವು ನೈಸರ್ಗಿಕ ವಿಕೋಪಗಳಿಂದ ತತ್ತರಿಸುತ್ತಿದೆ. ಆದರೆ ದುರಹಂಕಾರಿ ಮೋದಿ ಸರಕಾರವು ಅದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವುದರಿಂದ ನುಣುಚಿಕೊಳ್ಳುತ್ತಿದೆ ಎಂದು ತನ್ನ ಸುದೀರ್ಘ ಪೋಸ್ಟ್ ನಲ್ಲಿ ಆರೋಪಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News