ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಹೊಸ್ತಿಲಿನಲ್ಲಿರುವ ದೇಶಗಳು ಇವು
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ನವಂಬರ್ 2024ರಲ್ಲಿ ʼಫೇರ್ ಅಬ್ಸರ್ವರ್ʼನ ಸಮಗ್ರ ವರದಿ ಬಿಡುಗಡೆಯಾದ ಬಳಿಕ ಜಾಗತಿಕ ಅಣ್ವಸ್ತ್ರಗಳ ಸಂಗ್ರಹದಲ್ಲಿ ಗಮನಾರ್ಹ ಏರಿಕೆಯಾಗಿದೆ. ಜೂನ್ 23, 2025ರ ವೇಳೆಗೆ ಹಲವಾರು ದೇಶಗಳು ತಮ್ಮ ಪರಮಾಣು ಕಾರ್ಯಕ್ರಮಗಳನ್ನು ಮುಂದುವರಿಸಿವೆ ಅಥವಾ ಅಣ್ವಸ್ತ್ರಗಳನ್ನು ಹೊಂದುವ ಬಗ್ಗೆ ಚರ್ಚೆಗಳಿಗೆ ಮರುಜೀವ ನೀಡಿವೆ. ಇದು ಜಗತ್ತನ್ನು ಹೊಸ ಶಸ್ತ್ರಾಸ್ತ್ರ ಪೈಪೋಟಿಗೆ ನಿಕಟವಾಗಿಸಿದೆ.
ಅಣ್ವಸ್ತ್ರ ಶಕ್ತ ದೇಶವಾಗಲು ಸಜ್ಜಾಗುತ್ತಿರುವ ಇರಾನ್:
ಅಕ್ಟೋಬರ್ 2024ರಲ್ಲಿ ತನ್ನ ಇಂಧನ ಸ್ಥಾವರಗಳ ಮೇಲೆ ಇಸ್ರೇಲ್ ದಾಳಿಗಳ ಬಳಿಕ ಇರಾನ್ ‘ಲಭ್ಯವಿರುವ ಎಲ್ಲ ಸಾಧನಗಳನ್ನು’ ಬಳಸಿಕೊಂಡು ಪ್ರತೀಕಾರದ ಪಣ ತೊಟ್ಟಿದ್ದು, ಇದು ಅದರ ಪರಮಾಣು ಮಹತ್ವಾಕಾಂಕ್ಷೆಗಳ ಬಗ್ಗೆ ಎಚ್ಚರಿಕೆಯನ್ನು ನೀಡಿತ್ತು. ಹಲವು ಗುಪ್ತಚರ ವರದಿಗಳ ಪ್ರಕಾರ ಇರಾನ್ ಕೆಲವೇ ದಿನಗಳಲ್ಲಿ ಅಥವಾ ವಾರಗಳಲ್ಲಿ ಅಣ್ವಸ್ತ್ರವನ್ನು ಅಭಿವೃದ್ಧಿಗೊಳಿಸಬಹುದು ಎಂದು ಅಂದಾಜಿಸಲಾಗಿದೆ. ಇರಾನ್ ತನ್ನ ಬಳಿಯಿರುವ ವಿಕಿರಣಶೀಲ ಸಾಮಗ್ರಿಯನ್ನು ಅಧಿಕೃತವಾಗಿ ಶಸ್ತ್ರಾಸ್ತ್ರವನ್ನಾಗಿ ಪರಿವರ್ತಿಸಿರದಿದ್ದರೂ, ಅದರ ಪರಮಾಣು ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಪಾರದರ್ಶಕತೆಯಲ್ಲಿ ಗಂಭೀರ ಅಂತರಗಳನ್ನು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ(ಐಎಇಎ)ಯು ಗಮನಿಸಿದೆ.
ಇರಾನ್ ಸುಮಾರು ಒಂಭತ್ತು ಟನ್‌ಗಳಷ್ಟು ಶೇ.60ರಷ್ಟು ಶುದ್ಧತೆಯ ಸಂಸ್ಕರಿತ ಯುರೇನಿಯಂ ಅನ್ನು ಹೊಂದಿದೆ ಎನ್ನಲಾಗಿದ್ದು, ಇರಾನ್ ಬಯಸಿದರೆ ಇದರಿಂದ ಹಲವಾರು ಅಣ್ವಸ್ತ್ರಗಳನ್ನು ತಯಾರಿಸಬಹುದು. ಜೂನ್ 2025ರಲ್ಲಿ ಇಸ್ರೇಲ್ ನಟಾಂಜ್ ಮತ್ತು ಅರಕ್‌ನಲ್ಲಿಯ ಪರಮಾಣು ಸ್ಥಾವರಗಳನ್ನು ಗುರಿಯಾಗಿಸಿಕೊಂಡು ಕೆಲವು ದಾಳಿಗಳನ್ನು ನಡೆಸಿದ್ದು ಪ್ರಗತಿಯನ್ನು ತಾತ್ಕಾಲಿಕವಾಗಿ ನಿಧಾನಗೊಳಿಸಿದ್ದರೂ ಅಮೆರಿಕ ಮತ್ತು ಇಸ್ರೇಲ್‌ನ ಗುಪ್ತಚರ ವರದಿಗಳು ಈಗಲೂ ಇರಾನ್ ನಿರ್ಧಾರವನ್ನು ತೆಗೆದುಕೊಂಡರೆ ಎರಡರಿಂದ ನಾಲ್ಕು ವಾರಗಳಲ್ಲಿ ಪರಮಾಣು ಬಾಂಬ್ ಉತ್ಪಾದಿಸಬಹುದು ಎಂದು ಸೂಚಿಸಿವೆ.
ಅಮೆರಿಕ ಮತ್ತು ನ್ಯಾಟೋ:
ಅಮೆರಿಕವು ತನ್ನ ಪರಮಾಣು ಆಧುನೀಕರಣ ಕಾರ್ಯಕ್ರಮವನ್ನು ಮುಂದುವರಿಸಿದ್ದು,ನ್ಯಾಟೋ ಪ್ರದೇಶಗಳಲ್ಲಿ ನಿಯೋಜನೆಯನ್ನು ಹೆಚ್ಚಿಸುತ್ತಿದೆ. ಚೀನಾದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಅದು ತೈವಾನ್‌ನಂತಹ ದೇಶಗಳಿಗೂ ತನ್ನ ವ್ಯೆಹಾತ್ಮಕ ಪರಮಾಣು ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ ಎಂದು ವರದಿಗಳು ಸೂಚಿಸಿವೆ. 2024ರ ವರ್ಷವೊಂದರಲ್ಲೇ ಅಣ್ವಸ್ತ್ರ ಶಕ್ತ ರಾಷ್ಟ್ರಗಳು ಶಸ್ತ್ರಾಗಾರಗಳ ನಿರ್ವಹಣೆ ಮತ್ತು ನವೀಕರಣಕ್ಕೆ ಒಟ್ಟಾರೆಯಾಗಿ 100 ಶತಕೋಟಿ ಡಾಲರ್ ಗಿಂತ ಅಧಿಕ ಮೊತ್ತವನ್ನು ವ್ಯಯಿಸಿದ್ದು,ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.11ರಷ್ಟು ಹೆಚ್ಚಾಗಿದೆ.
ತನ್ನ ಶಸ್ತ್ರಾಗಾರವನ್ನು ವಿಸ್ತರಿಸಿಕೊಳ್ಳುತ್ತಿರುವ ರಶ್ಯಾ:
ರಶ್ಯಾ ಅಂದಾಜು 5,459 ಪರಮಾಣು ಸಿಡಿತಲೆಗಳನ್ನು ಹೊಂದಿದ್ದು, ಅವುಗಳ ಪೈಕಿ ಸುಮಾರು 1,718ನ್ನು ತನ್ನ ವ್ಯೂಹಾತ್ಮಕ ರಕ್ಷಣಾ ವ್ಯವಸ್ಥೆಗಳಲ್ಲಿ ನಿಯೋಜಿಸಿದೆ. 2023ರಲ್ಲಿ ಹೊಸ ವ್ಯೂಹಾತ್ಮಕ ಶಸ್ತ್ರಾಸ್ತ್ರಗಳ ಕಡಿತ ಒಪ್ಪಂದದಿಂದ ಹೊರಬಿದ್ದ ಬಳಿಕ ರಶ್ಯಾ ಬೆಲಾರೂಸ್ ಜೊತೆ ತನ್ನ ಪರಮಾಣು ಪಾಲುದಾರಿಕೆಯನ್ನು ಹೆಚ್ಚಿಸಿದ್ದು, ಆ ದೇಶದಲ್ಲಿ ತನ್ನ ಕೆಲವು ಸಿಡಿತಲೆಗಳನ್ನು ಇರಿಸಿದೆ.
ಚೀನಾದ ತ್ವರಿತ ಪರಮಾಣು ವಿಸ್ತರಣೆ:
ಚೀನಾ ತನ್ನ ಪರಮಾಣು ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ದಾಪುಗಾಲನ್ನಿಡುತ್ತಿದೆ. ಸದ್ಯ ಅದು 600ರಿಂದ 660ರಷ್ಟು ಸಿಡಿತಲೆಗಳನ್ನು ಹೊಂದಿದ್ದು,2030ರ ವೇಳೆಗೆ ಒಂದು ಸಾವಿರದ ಗಡಿಯನ್ನು ದಾಟುವ ನಿರೀಕ್ಷೆಯಿದೆ. ರಷ್ಯಾದೊಂದಿಗೆ ಅದರ ಪರಮಾಣು ಸಹಕಾರ ಮತ್ತು ಇರಾನ್ ಜೊತೆ ಸದ್ದಿಲ್ಲದೆ ತೊಡಗಿಸಿಕೊಂಡಿರುವುದು ಅಮೆರಿಕದ ಪ್ರಾಬಲ್ಯವನ್ನು ಪ್ರಶ್ನಿಸಲು ವ್ಯಾಪಕ ಕಾರ್ಯತಂತ್ರವನ್ನು ಸೂಚಿಸುತ್ತಿವೆ.
ಇತರ ಘೋಷಿತ ಪರಮಾಣು ದೇಶಗಳು:
ಬ್ರಿಟನ್: ಅಂದಾಜು 225ರಿಂದ 260 ಸಿಡಿತಲೆಗಳನ್ನು ಹೊಂದಿದೆ.
ಫ್ರಾನ್ಸ್:ಸುಮಾರು 290 ಸಿಡಿತಲೆಗಳು
ಭಾರತ: 90ರಿಂದ 110 ಸಿಡಿತಲೆಗಳು, ಮುಂಬರುವ ವರ್ಷಗಳಲ್ಲಿ ಇದು 150-270ಕ್ಕೇರುವ ನಿರೀಕ್ಷೆಯಿದೆ.
ಪಾಕಿಸ್ತಾನ: ಸುಮಾರು 170 ಸಿಡಿತಲೆಗಳು
ಇಸ್ರೇಲ್: ಅಧಿಕೃತವಾಗಿ ಘೋಷಿಸಿಲ್ಲ, ಆದರೆ 80ರಿಂದ 90 ಅಣ್ವಸ್ತ್ರಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.
ಉತ್ತರ ಕೊರಿಯಾ: 50ಕ್ಕಿಂತ ಕಡಿಮೆ ಸಿಡಿತಲೆಗಳು
ಪರಮಾಣು ಕ್ಷೇತ್ರ ಪ್ರವೇಶಕ್ಕೆ ಸಜ್ಜಾಗುತ್ತಿರುವ ದೇಶಗಳು
ಇರಾನ್ ಸಾಧಿಸಿರುವ ಪ್ರಗತಿಯು ಪ್ರದೇಶದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಪೈಪೋಟಿಯ ಭೀತಿಯನ್ನು ಹುಟ್ಟುಹಾಕಿದೆ. ಸೌದಿ ಅರೆಬಿಯ ದೀರ್ಘ ಕಾಲದಿಂದ ಪಾಕಿಸ್ತಾನದ ಜೊತೆ ಭದ್ರತಾ ಪಾಲುದಾರಿಕೆಯನ್ನು ಹೊಂದಿದ್ದು,ಇರಾನ್ ತನ್ನ ಪ್ರಯತ್ನದಲ್ಲಿ ಯಶಸ್ವಿಯಾದರೆ ತಾನೂ ಬಾಂಬ್‌ಗಳನ್ನು ಹೊಂದಬಹುದು ಎಂದು ಅಧಿಕಾರಿಗಳು ಸುಳಿವು ನೀಡಿದ್ದಾರೆ. ನ್ಯಾಟೋದಡಿ ಈಗಾಗಲೇ ಅಮೆರಿಕದ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಟರ್ಕಿ ಕೂಡ ತನ್ನ ಸ್ವಂತ ಶಸ್ತ್ರಾಗಾರವನ್ನು ಹೊಂದಲು ಆಸಕ್ತಿಯನ್ನು ವ್ಯಕ್ತಪಡಿಸಿದೆ.
ಪೂರ್ವ ಏಶ್ಯಾ:
ದಕ್ಷಿಣ ಕೊರಿಯಾ ಅಣ್ವಸ್ತ್ರಗಳನ್ನು ಅಭಿವೃದ್ಧಿಗೊಳಿಸಲು ಸಾರ್ವಜನಿಕ ಬೆಂಬಲವು ಈಗ ಶೇ.70ನ್ನು ಮೀರಿದೆ. ಹಿರೋಶಿಮಾ ಮತ್ತು ನಾಗಾಸಾಕಿ ದುರಂತದ ಹಿನ್ನೆಲೆಯಲ್ಲಿ ಅಣ್ವಸ್ತ್ರಗಳ ವಿರುದ್ಧ ಬಲವಾದ ಸಾರ್ವಜನಿಕ ಅಭಿಪ್ರಾಯದಿಂದಾಗಿ ಜಪಾನ್ ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದರೂ ಒಂದೇ ತಿಂಗಳಲ್ಲಿ ಅಣ್ವಸ್ತ್ರಗಳನ್ನು ಅಭಿವೃದ್ಧಿಗೊಳಿಸಲು ಅದು ಸಮರ್ಥವಾಗಿದೆ. ತೈವಾನಿನ ಅಧಿಕೃತ ನೀತಿಯು ಅಣ್ವಸ್ತ್ರಗಳ ವಿರುದ್ಧವಾಗಿದ್ದರೂ ಪ್ರಾದೇಶಿಕ ಸಮತೋಲನದಲ್ಲಿ ಯಾವುದೇ ಬದಲಾವಣೆಯು ಅದು ತನ್ನ ನೀತಿಯನ್ನೂ ಬದಲಿಸಿಕೊಳ್ಳಲು ಕಾರಣವಾಗಬಹುದು.
ಯುರೋಪ್:
ರಶ್ಯಾದೊಂದಿಗೆ ಉಕ್ರೇನ್ ಯುದ್ಧವು ಯುರೋಪಿನಲ್ಲಿ ಪರಮಾಣು ಪ್ರಸರಣ ತಡೆಗಟ್ಟುವಿಕೆ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ. ನ್ಯಾಟೋ ಸದಸ್ಯತ್ವವು ಅಲಭ್ಯವಾದರೆ ಅಣ್ವಸ್ತ್ರಗಳನ್ನು ಹೊಂದುವ ಪರಿಕಲ್ಪನೆಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಇತ್ತೀಚೆಗೆ ಹರಿಬಿಟ್ಟಿದ್ದರು. ನಂತರ ಅದನ್ನು ಹಿಂದೆಗೆದುಕೊಳ್ಳಲಾಗಿದ್ದರೂ,ಈ ಪರಿಕಲ್ಪನೆಯು ಉಕ್ರೇನ್ ನಾಯಕತ್ವದಲ್ಲಿ ಮನೆ ಮಾಡಿರುವ ಹತಾಶೆಯನ್ನು ಸೂಚಿಸುತ್ತದೆ. ವಿಶೇಷವಾಗಿ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರ ಪುನರಾಯ್ಕೆ ಮತ್ತು ನ್ಯಾಟೋದ ಭವಿಷ್ಯದ ಏಕತೆಯ ಕುರಿತು ಕಳವಳಗಳ ಹಿನ್ನೆಲೆಯಲ್ಲಿ ಐರೋಪ್ಯ ನಾಯಕರು, ವಿಶೇಷವಾಗಿ ಜರ್ಮನಿ ಮತ್ತು ಫ್ರಾನ್ಸ್ ನಾಯಕರು ಯುರೋಪ್ ಖಂಡಕ್ಕೆ ಪ್ರತ್ಯೇಕವಾದ, ಹೆಚ್ಚು ಸ್ವತಂತ್ರ ಪರಮಾಣು ಪ್ರಸರಣ ತಡೆ ನಿಯಮಗಳನ್ನು ಹೊಂದುವ ಬಗ್ಗೆ ಚರ್ಚಿಸುತ್ತಿದ್ದಾರೆ.