×
Ad

ಹಿಂದುಜಾ ಗ್ರೂಪ್ ಮುಖ್ಯಸ್ಥ ಗೋಪಿಚಂದ್ ಹಿಂದುಜಾ ನಿಧನ

Update: 2025-11-04 18:21 IST

Photo:ndtv

ಹೊಸದಿಲ್ಲಿ,ನ.4: ಹಿಂದುಜಾ ಗ್ರೂಪ್‌ನ ಅಧ್ಯಕ್ಷ ಗೋಪಿಚಂದ್‌ ಪರಮಾನಂದ ಹಿಂದುಜಾ(85) ಅವರು ಲಂಡನ್‌ನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಅವರು ನಾಲ್ವರು ಹಿಂದುಜಾ ಸೋದರರಲ್ಲಿ ಎರಡನೆಯವರಾಗಿದ್ದರು. ಹಿರಿಯ ಸೋದರ ಶ್ರೀಚಂದ ಹಿಂದುಜಾ 2023ರಲ್ಲಿ ನಿಧನರಾಗಿದ್ದು, ಪ್ರಕಾಶ ಹಿಂದುಜಾ ಮತ್ತು ಅಶೋಕ ಹಿಂದುಜಾ ಇತರ ಇಬ್ಬರು ಸೋದರರಾಗಿದ್ದಾರೆ.

ಉದ್ಯಮ ವಲಯದಲ್ಲಿ ‘ಜಿಪಿ’ ಎಂದೇ ಗುರುತಿಸಿಕೊಂಡಿದ್ದ ಗೋಪಿಚಂದ 1950ರಲ್ಲಿ ಕುಟುಂಬದ ಉದ್ಯಮದೊಂದಿಗೆ ಕೈಜೋಡಿಸಿದ್ದರು ಮತ್ತು ಅದನ್ನು ಭಾರತ-ಮಧ್ಯಪ್ರಾಚ್ಯ ವ್ಯಾಪಾರ ಕಾರ್ಯಾಚರಣೆಯಿಂದ ಅಂತರರಾಷ್ಟ್ರೀಯ ಉದ್ಯಮ ಸಮೂಹವನ್ನಾಗಿ ಪರಿವರ್ತಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಬಾಂಬೆ ಜೈಹಿಂದ್ ಕಾಲೇಜಿನಿಂದ ಪದವಿಯನ್ನು ಪಡೆದಿದ್ದ ಗೋಪಿಚಂದ್‌ ವೆಸ್ಟ್‌ಮಿನ್‌ಸ್ಟರ್ ವಿವಿ ಮತ್ತು ರಿಚ್ಮಂಡ್ ಕಾಲೇಜಿನಿಂದ ಗೌರವ ಡಾಕ್ಟರೇಟ್ ಪದವಿಗಳಿಗೆ ಭಾಜನರಾಗಿದ್ದರು.

ಹಿಂದುಜಾ ಗ್ರೂಪ್ ವಾಹನ, ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ,ಆರೋಗ್ಯ ರಕ್ಷಣೆ, ರಿಯಲ್ ಎಸ್ಟೇಟ್, ವಿದ್ಯುತ್, ಮಾಧ್ಯಮ ಮತ್ತು ಮನೋರಂಜನೆ ಸೇರಿದಂತೆ 11 ವಲಯಗಳಲ್ಲಿ ವ್ಯವಹರಿಸುತ್ತಿದೆ. ಅದರ ಕೆಲವು ಪ್ರಸಿದ್ಧ ಬ್ರ್ಯಾಂಡ್‌ಗಳಲ್ಲಿ ಅಶೋಕ ಲೇಲ್ಯಾಂಡ್,ಇಂಡಸ್‌ಇಂಡ್ ಬ್ಯಾಂಕ್ ಮತ್ತು ಎನ್‌ಎಕ್ಸ್‌ಟಿ ಡಿಜಿಟಲ್ ಲಿ.ಸೇರಿವೆ.

ಇತ್ತೀಚಿಗೆ ಸಂಡೇ ಟೈಮ್ಸ್ ರಿಚ್ ಲಿಸ್ಟ್‌ನ 2025ನೇ ಆವೃತ್ತಿಯು ಗೋಪಿಚಂದ್‌ ಹಿಂದುಜಾ ಕುಟುಂಬವನ್ನು 32.3 ಶತಕೋಟಿ ಪೌಂಡ್ ನಿವ್ವಳ ಸಂಪತ್ತಿನೊಂದಿಗೆ ಬ್ರಿಟನ್‌ನ ಅತ್ಯಂತ ಸಿರಿವಂತ ಕುಟುಂಬ ಎಂದು ಗುರುತಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News