×
Ad

ನಾನು ಸರ್ಕಾರವನ್ನು ನಡೆಸುತ್ತಿಲ್ಲ, ಬದಲಿಗೆ ಕುಟುಂಬವನ್ನು ನಡೆಸುತ್ತಿದ್ದೇನೆ: ಶಿವರಾಜ್ ಸಿಂಗ್ ಚೌಹಾಣ್

Update: 2023-11-05 22:09 IST

ಶಿವರಾಜ್ ಸಿಂಗ್ ಚೌಹಾಣ್  Photo- PTI

ಭೋಪಾಲ್: ನಾನು ಸರ್ಕಾರವನ್ನು ನಡೆಸುತ್ತಿಲ್ಲ, ಬದಲಿಗೆ ಕುಟುಂಬವನ್ನು ನಡೆಸುತ್ತಿದ್ದೇನೆ ಎಂದು ರವಿವಾರ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, “ನಾನು ಸರ್ಕಾರವನ್ನು ನಡೆಸುತ್ತಿಲ್ಲ, ಬದಲಿಗೆ ಕುಟುಂಬವನ್ನು ನಡೆಸುತ್ತಿದ್ದೇನೆ. ಮಕ್ಕಳು ನನ್ನನ್ನು ಮಾಮ ಎಂದು ಕರೆಯುತ್ತಾರೆ. ಅವರಿಗೆ ಮುಖ್ಯಮಂತ್ರಿ ಎಂದರೆ ಏನೆಂದು ತಿಳಿದಿಲ್ಲ. ಅವರಿಗೆ ನಾನು ಮಾಮನಾಗಿ ಮಾತ್ರ ಪರಿಚಿತನಿದ್ದೇನೆ” ಎಂದಿದ್ದಾರೆ.

ರಾಜ್ಯ ಸರ್ಕಾರದ ‘ಲಾಡ್ಲಿ ಬೆಹ್ನಾ’ ಯೋಜನೆಯ ಕುರಿತು ಮಾತನಾಡಿದ ಅವರು, “ನಾನು ನನ್ನ ಸಹೋದರಿಯರ ಕುರಿತು ಯೋಚಿಸಿದಾಗ ನನಗೆ ಅವರನ್ನು ಸ್ವತಂತ್ರರನ್ನಾಗಿಸಬೇಕು ಅನ್ನಿಸಿತು. ಹೀಗಾಗಿ, ನಾನು ಅವರ ಖಾತೆಗಳಿಗೆ ನೇರವಾಗಿ ರೂ. 1,250 ಮೊತ್ತವನ್ನು ಹಾಕಲು ಪ್ರಾರಂಭಿಸಿದೆ” ಎಂದು ತಿಳಿಸಿದ್ದಾರೆ.

“ಈ ಯೋಜನೆಯಡಿ ವಿವಾಹವಾಗಿರಲಿ ಅಥವಾ ಆಗದೆ ಇರಲಿ 21 ವರ್ಷ ವಯಸ್ಸಿನ ಯುವತಿಯರಿಗೆ ಹಣ ನೀಡಲಾಗುತ್ತಿದೆ” ಎಂದು ಹೇಳಿದ್ದಾರೆ.

“ನಾನು ನನ್ನ ಸಹೋದರಿಯರನ್ನು ಲಕ್ಷಾಧಿಪತಿಯರನ್ನಾಗಿಸುತ್ತೇನೆ. ಸದ್ಯ, ನಮ್ಮ ಸರ್ಕಾರವು ಎಲ್ಲ ಮಹಿಳೆಯರಿಗೂ ಮಾಸಿಕದ ಆಧಾರದಲ್ಲಿ ಹಣವನ್ನು ಒದಗಿಸುತ್ತಿದೆ. ಆದರೆ, ಈ ಮೊತ್ತವು ಕ್ರಮೇಣ ಏರಿಕೆಯಾಗಲಿದೆ. ನಾನು ತಮಾಷೆ ಮಾಡುತ್ತಿಲ್ಲ. ಇದು ನನ್ನ ದೂರದೃಷ್ಟಿಯಾಗಿದೆ” ಎಂದು ಅವರು ಭರವಸೆ ನೀಡಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಚೌಹಾಣ್, “ಬಡವರನ್ನು ಕೊಲ್ಲುವ ಮಾದರಿಯು ಕಮಲ್ ನಾಥ್ ಮಾದರಿಯಾಗಿದೆ. ಅವರ ಅವಧಿಯಲ್ಲಿ ಎಲ್ಲ ಯೋಜನೆಗಳೂ ಸ್ಥಗಿತಗೊಂಡಿದ್ದವು. ಪುಣ್ಯ ಯಾತ್ರೆ ಯೋಜನೆಯೂ ಸ್ಥಗಿತಗೊಂಡಿತ್ತು. ಆದರೆ, ಈಗ ಈ ಯೋಜನೆಯು ಪುನಾರಂಭಗೊಂಡಿದ್ದು, ಎಲ್ಲರೂ ಯೋಜಿತವಾಗಿ ಈ ಯೋಜನೆಯನ್ನು ಬಳಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.

“ರೈತರಿಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ಯಾವುದಾದರೂ ಒಂದು ಹಂತದಲ್ಲಿ ಸ್ಥಗಿತಗೊಳಿಸಬೇಕು ಎಂಬುದು ನನ್ನ ಅನಿಸಿಕೆಯಾಗಿದೆ. ಕೆಲವು ಸಮಯ ಈ ಸಬ್ಸಿಡಿ ತಲುಪುತ್ತದೆ, ಕೆಲ ಸಮಯ ತಲುಪುವುದಿಲ್ಲ. ಹೀಗಾಗಿ ಹಣವನ್ನು ಅವರ ಖಾತೆಗಳಿಗೆ ನೇರವಾಗಿ ಜಮಾ ಮಾಡಬೇಕು” ಎಂದೂ ಅವರು ಪ್ರತಿಪಾದಿಸಿದ್ದಾರೆ.

ಸದ್ಯದಲ್ಲೇ ನಡೆಯಲಿರುವ ಪಂಚರಾಜ್ಯಗಳ ಚುನಾವಣೆ ಪೈಕಿ 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೂ ನ. 17ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಡಿ.3ರಂದು ಫಲಿತಾಂಶ ಪ್ರಕಟವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News