×
Ad

ಯಾವುದೇ ರಾಜಕಾರಣಿಗಳನ್ನು ಕೀಳಾಗಿ ಕಾಣುವ ಉದ್ದೇಶವಿರಲಿಲ್ಲ: ಶಿಕ್ಷಣದ ಕುರಿತ ಹೇಳಿಕೆಗೆ ನಟಿ ಕಾಜೋಲ್‌ ಸ್ಪಷ್ಟನೆ

Update: 2023-07-09 11:18 IST

ನಟಿ ಕಾಜೋಲ್‌ (Photo: PTI)

ಹೊಸದಿಲ್ಲಿ: ರಾಜಕೀಯ ನಾಯಕರ ಬಗ್ಗೆ ಮತ್ತು ಅವರ ಶೈಕ್ಷಣಿಕ ಕೊರತೆಯ ಬಗ್ಗೆ ತಾನು ಮಾಡಿರುವ ಪ್ರತಿಕ್ರಿಯೆಗಳು ರಾಜಕಾರಣಿಗಳನ್ನು ಕೀಳಾಗಿ ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ನಟಿ ಕಾಜೋಲ್ ಸ್ಪಷ್ಟಪಡಿಸಿದ್ದಾರೆ.

"ನಮ್ಮ ದೇಶದಲ್ಲಿ ಬದಲಾವಣೆಯು ನಿಧಾನಗತಿಯಲ್ಲಾಗುತ್ತಿದೆ. ಯಾಕೆಂದರೆ ನಮ್ಮ ಆಲೋಚನೆಗಳಲ್ಲಿ ಹಿಂದೆ ಉಳಿದಿದ್ದೇವೆ. ಶಿಕ್ಷಣವೂ ಇದಕ್ಕೆ ಕಾರಣವಾಗಿದೆ. ಶೈಕ್ಷಣಿಕ ಹಿನ್ನೆಲೆಯೇ ಇಲ್ಲದ ರಾಜಕೀಯ ನಾಯಕರು ನಮ್ಮ ದೇಶದಲ್ಲಿದ್ದಾರೆ. ದೃಷ್ಟಿಕೋನವೇ ಇಲ್ಲದ ಹಲವು ರಾಜಕಾರಣಿಗಳು ನಮ್ಮನ್ನು ಆಳುತ್ತಿದ್ದಾರೆ. ಶಿಕ್ಷಣವು ಕನಿಷ್ಠ ಪಕ್ಷ ಇಂತಹ ದೃಷ್ಟಿಕೋನಗಳತ್ತ ನಿಮ್ಮನ್ನು ತೆರೆದಿಡುತ್ತದೆ” ಎಂದು ಕಾಜೋಲ್ ಟಾಕ್ ಶೋನಲ್ಲಿ ಹೇಳಿದ್ದರು. ‌

ಕಾಜೋಲ್ ಹೇಳಿಕೆ ನೀಡಿದ ಬೆನ್ನಲ್ಲೇ ಬಲಪಂಥೀಯ ಟ್ರೋಲ್‌ ಪಡೆಗಳು ನಟಿಯ ವಿರುದ್ಧ ಆನ್‌ಲೈನ್‌ ದಾಳಿ ನಡೆಸಿದ್ದವು. ಆದಾಗ್ಯೂ, ಹಲವರು ಕಾಜೋಲ್ ಹೇಳಿಕೆಯನ್ನು ಬೆಂಬಲಿಸಿದ್ದು, ಶಿಕ್ಷಣವು ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ.

ಬಳಿಕ ಪ್ರತಿಕ್ರಿಯಿಸಿದ ಕಾಜೋಲ್ "ಯಾವುದೇ ರಾಜಕೀಯ ನಾಯಕರನ್ನು ಕೀಳಾಗಿ ಕಾಣುವುದು (ನನ್ನ) ಉದ್ದೇಶವಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

"ನಾನು ಶಿಕ್ಷಣ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಕೇವಲ ಒಂದು ಅಂಶವನ್ನು ಹೇಳುತ್ತಿದ್ದೆ. ನನ್ನ ಉದ್ದೇಶವು ಯಾವುದೇ ರಾಜಕೀಯ ನಾಯಕರನ್ನು ಕೀಳಾಗಿಸುವುದಲ್ಲ; ದೇಶವನ್ನು ಸರಿಯಾದ ಮಾರ್ಗದಲ್ಲಿ ಮಾರ್ಗದರ್ಶನ ಮಾಡುವ ಕೆಲವು ಮಹಾನ್ ನಾಯಕರನ್ನು ನಾವು ಹೊಂದಿದ್ದೇವೆ" ಎಂದು ಕಾಜೋಲ್ ಟ್ವೀಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News