×
Ad

ಇರಾನ್: ಶಾಹಿದ್ ರಾಜೀ ಬಂದರಿನಲ್ಲಿ ಸ್ಪೋಟ; 17 ಮಂದಿ ಮೃತ್ಯು

Update: 2025-04-27 08:00 IST
PC: x.com/TehranTimes 

ಟೆಹರಾನ್: ದಕ್ಷಿಣ ಇರಾನ್ ನ ಪ್ರಮುಖ ಶಾಹಿದ್ ರಾಜೀ ಬಂದರಿನಲ್ಲಿ ಶನಿವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದು, ಇತರ 750ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕ್ಷಿಪಣಿ ಇಂಧನ ರಾಸಾಯನಿಕಗಳ ಶಿಪ್‌ಮೆಂಟ್ ವೇಳೆ ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.

ಸರ್ಕಾರಿ ಟೆಲಿವಿಷನ್ ನಲ್ಲಿ ಸಾವು ನೋವಿನ ವಿವರಗಳನ್ನು ದೃಢಪಡಿಸಿರುವ ಪ್ರಾಂತೀಯ ವಿಕೋಪ ನಿರ್ವಹಣೆ ಅಧಿಕಾರಿ ಮೆಹರ್ದಾದ್ ಹಸನ್‌ಝೈದ್, ಆರಂಭದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದರು ಎಂದು ಶಂಕಿಸಲಾಗಿತ್ತು. ಆದರೆ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ ಹಾಗೂ ಕನಿಷ್ಠ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವಿವರಿಸಿದ್ದಾರೆ. ಇರಾನ್ ಮತ್ತು ಅಮೆರಿಕದ ಅಧಿಕಾರಿಗಳು ಒಮಾನ್‌ನಲ್ಲಿ ಮೂರನೇ ಸುತ್ತಿನ ಅಣ್ವಸ್ತ್ರ ಒಪ್ಪಂದ ಮತುಕತೆ ನಡೆಸುತ್ತಿರುವ ನಡುವೆಯೇ ಬಂದರ್ ಅಬ್ಬಾಸ್ ಬಳಿ ಈ ಸ್ಫೋಟ ಸಂಭವಿಸಿದೆ.

ಈ ಸ್ಫೋಟ ದಾಳಿಯ ಕಾರಣದಿಂದ ಸಂಭವಿಸಿದೆ ಎನ್ನುವ ಅಂಶವನ್ನು ಇರಾನ್ ಅಧಿಕಾರಿಗಳು ದೃಢಪಡಿಸಿಲ್ಲ. "ಅಧಿಕೃತ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಉದ್ದೇಶದಿಂದ ಈ ಹಿಂದೆ ನಡೆದಿರುವ ವಿಧ್ವಂಸಕ ತ್ತು ಹತ್ಯೆ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ನಮ್ಮ ಭದ್ರತಾ ಸೇವೆಗಳ ವಿಭಾಗಕ್ಕೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಅಬ್ಬಾಸ್ ಅರಗ್ಚಿ ಹೇಳಿದ್ದಾರೆ.

ಸ್ಫೋಟಕ್ಕೆ ನಿಖರ ಕಾರಣಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ; ಆದರೆ ದೇಶದ ತೈಲ ಉದ್ಯಮಕ್ಕೂ ಈ ಘಟನೆಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಗಾಝಾ ಸಂಘರ್ಷದ ಸಂದರ್ಭದಲ್ಲಿ ಇಸ್ರೇಲ್ ನ ಮೇಲೆ ಇರಾನ್ ನಡೆಸಿದ ದಾಳಿಯ ಬಳಿಕ ಇರಾನ್ ನ ಕ್ಷಿಪಣಿ ಸಂಗ್ರಹವನ್ನು ಮರುಪೂರಣ ಮಾಡುವ ಉದ್ದೇಶದಿಂದ ಕಳೆದ ಮಾರ್ಚ್ ನಲ್ಲಿ ಚೀನಾದಿಂದ ಬಂದರಿಗೆ ಸೋಡಿಯಂ ಪರ್ಕ್ಲೊರೇಟ್ ರಾಕೆಟ್ ಇಂಧನದ ಶಿಪ್‌ಮೆಂಟ್ ಪೂರೈಕೆಯಾಗಿದೆ ಎಂದು ಖಾಸಗಿ ಭದ್ರತಾ ಏಜೆನ್ಸಿ ಆಂಬ್ರೇ ವರದಿ ಮಾಡಿದೆ.

ಇರಾನ್ ನ ಸಿಡಿತಲೆ ಕ್ಷಿಪಣಿಗಳಿಗೆ ಬಳಸಲು ಉದ್ದೇಶಿಸಿದ್ದ ಘನ ಇಂಧನದ ಶಿಪ್‌ಮೆಂಟನ್ನು ಅಸಮರ್ಪಕವಾಗಿ ನಿರ್ವಹಿಸಿದ್ದರ ಪರಿಣಾಮ ಈ ಸ್ಫೋಟ ಸಂಭವಿಸಿದೆ ಎಂದು ಆಂಬ್ರೇ ವಿಶ್ಲೇಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News