ನಟ ಧ್ರುವ ಸರ್ಜಾ ವಿರುದ್ಧ ವಂಚನೆ ಆರೋಪ: ಮುಂಬೈನಲ್ಲಿ ಎಫ್ಐಆರ್ ದಾಖಲು
ಮುಂಬೈ: ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ವಿರುದ್ಧ 9.58 ಕೋಟಿ ರೂ. ವಂಚನೆ ಎಸಗಿದ ಆರೋಪದಲ್ಲಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗಡೆ ಅವರು ನೀಡಿರುವ ದೂರಿನ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಅಂಬೋಲಿ ಪೊಲೀಸ್ ಠಾಣೆಗೆ ಹೇಳಿಕೆ ದಾಖಲಿಸಿರುವ ರಾಘವೇಂದ್ರ ಹೆಗಡೆ, “2016ರಲ್ಲಿ ನನ್ನ ಮೊದಲ ಚಿತ್ರ ಯಶಸ್ಸಾದ ನಂತರ, ನನ್ನ ಕಚೇರಿಗೆ ಆಗಮಿಸಿದ್ದ ಧ್ರುವ ಧ್ರುವ ಸರ್ಜಾ, ನನ್ನೊಂದಿಗೆ ಕೆಲಸ ಮಾಡುವ ಬಯಕೆ ವ್ಯಕ್ತಪಡಿಸಿದ್ದರು. 2016ರಿಂದ 2018ರವರೆಗೆ ನನ್ನೊಂದಿಗೆ ಕೆಲಸ ಮಾಡುವಂತೆ ನನ್ನ ಮೇಲೆ ಒತ್ತಡ ಹೇರಿದ್ದ ಧ್ರುವ ಸರ್ಜಾ, ನನಗೆ ‘ದಿ ಸೋಲ್ಜರ್’ ಚಿತ್ರದ ಚಿತ್ರಕತೆಯನ್ನೂ ನೀಡಿದ್ದರು” ಎಂದು ಆರೋಪಿಸಿದ್ದಾರೆ.
ಧ್ರುವ ಸರ್ಜಾ ನನಗೆ ಪದೇ ಪದೇ ಮನವಿ ಹಾಗೂ ಒತ್ತಡ ಹೇರಿದ್ದರಿಂದ ನಾನು ಜೊತೆಯಾಗಿ ಕೆಲಸ ಮಾಡಲು ಒಪ್ಪಿಗೆ ಸೂಚಿಸಿದ್ದೆ. ನಂತರ, ಒಂದು ದಿನ ನನ್ನೊಂದಿಗೆ ಗುತ್ತಿಗೆ ಕರಾರಿಗೆ ಸಹಿ ಮಾಡುವುದಕ್ಕೂ ಮುನ್ನ, ನನಗೆ 3 ಕೋಟಿ ರೂ. ನೀಡಿ. ನಾನು ಫ್ಲ್ಯಾಟ್ ಒಂದನ್ನು ಖರೀದಿಸಬೇಕಿದೆ ಎಂದು ಮನವಿ ಮಾಡಿದ್ದರು. ಈ ವೇಳೆ, ಮೇಲೆ ತಿಳಿಸಿದ ಚಿತ್ರದಲ್ಲಿ ಆದಷ್ಟೂ ಶೀಘ್ರವಾಗಿ ನಟಿಸುವುದಾಗಿ ಧ್ರುವ ಸರ್ಜಾ ನನಗೆ ಭರವಸೆ ನೀಡಿದ್ದರು” ಎಂದು ರಾಘವೇಂದ್ರ ಹೆಗಡೆ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
“ಧ್ರುವ ಸರ್ಜಾರ ಬದ್ಧತೆಯ ಬಗ್ಗೆ ನಂಬಿಕೆ ಇರಿಸಿದ ನಾನು ದುಬಾರಿ ಬಡ್ಡಿ ದರದಲ್ಲಿ 3.15 ಕೋಟಿ ರೂ. ಸಾಲ ಮಾಡಿ, ಅದನ್ನು ನನ್ನ ನಿರ್ಮಾಣ ಕಂಪನಿಗಳಾದ ಆರ್ಎಚ್ ಎಂಟರ್ ಟೈನ್ ಮೆಂಟ್ ಮತ್ತು ರುಪೀಸ್ 9 ಎಂಟರ್ ಟೈನ್ ಮೆಂಟ್ ಅಲ್ಲದೆ ನನ್ನ ವೈಯಕ್ತಿಕ ಖಾತೆಯ ಮೂಲಕವೂ ಅವರಿಗೆ ವರ್ಗಾಯಿಸಿದ್ದೆ. ಫೆಬ್ರವರಿ 21, 2019ರಂದು ನಮ್ಮಿಬ್ಬರ ನಡುವೆ ಅಧಿಕೃತ ಒಪ್ಪಂದವೇರ್ಪಡುವುದಕ್ಕೂ ಮುನ್ನ ನಾನು ಈ ಮೊತ್ತವನ್ನು ಅವರಿಗೆ ವರ್ಗಾಯಿಸಿದ್ದೆ. ಕರಾರಿನ ಪ್ರಕಾರ, ಈ ಚಿತ್ರ ಜನವರಿ 2020ರಲ್ಲಿ ಪ್ರಾರಂಭಗೊಳ್ಳಬೇಕಿತ್ತು ಹಾಗೂ ಜೂನ್ 2020ರ ವೇಳೆಗೆ ಮುಕ್ತಾಯಗೊಳ್ಳಬೇಕಿತ್ತು” ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ರಾಘವೇಂದ್ರ ಹೆಗಡೆ ನೀಡಿದ ದೂರನ್ನು ಆಧರಿಸಿ ಅಂಬೋಲಿ ಠಾಣೆಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಧ್ರುವ ಸರ್ಜಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ರಾಘವೇಂದ್ರ ಹೆಗಡೆ ಹಾಗೂ ಧ್ರುವ ಸರ್ಜಾ ನಡುವಿನ ಹಣಕಾಸು ದಾಖಲೆಗಳು, ಕರಾರುಗಳು ಹಾಗೂ ರಾಘವೇಂದ್ರ ಹೆಗಡೆ ಸಲ್ಲಿಸಿರುವ ಬ್ಯಾಂಕ್ ವಹಿವಾಟು ಮಾಹಿತಿಗಳ ಕುರಿತು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಶೇ. 18ರಷ್ಟು ಬಡ್ಡಿಯೊಂದಿಗೆ 2018ರಿಂದ ಇಲ್ಲಿಯವರೆಗೆ ನನಗಾಗಿರುವ ನಷ್ಟದ ಪ್ರಮಾಣ 9.58 ಕೋಟಿ ರೂ. ಮೀರಿದೆ ಎಂದು ರಾಘವೇಂದ್ರ ಹೆಗಡೆ ದೂರಿದ್ದಾರೆ.