ಕರ್ನಾಟಕದಲ್ಲಿ ನಾಯಕತ್ವ ಸಂಕಷ್ಟ | ಸೋನಿಯಾ ಗಾಂಧಿಯೊಂದಿಗೆ ಕಾಂಗ್ರೆಸ್ ನ ಉನ್ನತ ನಾಯಕರಿಂದ ಚರ್ಚೆ; ಜನವರಿಯಲ್ಲಿ ಮತ್ತೊಂದು ಸಭೆ ಸಾಧ್ಯತೆ
Credit: PTI Photo
ಹೊಸದಿಲ್ಲಿ: ರಾಜ್ಯ ಕಾಂಗ್ರೆಸ್ ನಲ್ಲಿ ಉಂಟಾಗಿರುವ ನಾಯಕತ್ವ ಬಿಕ್ಕಟ್ಟನ್ನು ಶಮನಗೊಳಿಸಲು ಪಕ್ಷದ ಉನ್ನತ ನಾಯಕತ್ವ ಶನಿವಾರ ತುರ್ತು ಸಮಾಲೋಚನೆ ನಡೆಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಸಮಾಧಾನ ಹೆಚ್ಚುತ್ತಿರುವ ವಿಚಾರವಾಗಿ ನಡೆದ ಸಭೆಯಲ್ಲಿ ಈ ಬಾರಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಸ್ವತಃ ಚರ್ಚೆಯಲ್ಲಿ ಭಾಗವಹಿಸಿದ್ದರು.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು 10-ಜನಪಥ್ ನಿವಾಸಕ್ಕೆ ತೆರಳಿ ಸೋನಿಯಾ ಮತ್ತು ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ “ಪ್ರಸ್ತುತ ರಾಜಕೀಯ ಪರಿಸ್ಥಿತಿ” ಕುರಿತು ಚರ್ಚಿಸಿದರು.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವೇಣುಗೋಪಾಲ್, “ಸಾಮಾನ್ಯ ರಾಜಕೀಯ ಚರ್ಚೆಯ ಜೊತೆಗೆ ಕರ್ನಾಟಕದ ವಿಷಯವೂ ಪ್ರಸ್ತಾಪವಾಯಿತು. ಯಾವುದೇ ನಿರ್ಧಾರ ಹೊರಬರಲಿಲ್ಲ. ಈ ವಿಚಾರವಾಗಿ ಮತ್ತೊಂದು ಸುತ್ತಿನ ಚರ್ಚೆಯೂ ನಡೆಯಲಿದೆ,” ಎಂದು ಸ್ಪಷ್ಟಪಡಿಸಿದರು.
ಸೋನಿಯಾ ಗಾಂಧಿ ಕೆಲಕಾಲದಿಂದ ಇಂತಹ ರಾಜಕೀಯ ಸಮಾಲೋಚನೆಗಳಿಂದ ದೂರವಿದ್ದರು. ಆದರೆ ಕರ್ನಾಟಕದ ನಾಯಕತ್ವದ ಕುರಿತ ಚರ್ಚೆಯಲ್ಲಿ ಅವರು ಭಾಗವಹಿಸಿರುವುದು ಕರ್ನಾಟಕದ ವಿಚಾರದಲ್ಲಿ ಹೈಕಮಾಂಡ್ ಗಂಭೀರವಾಗಿದೆ ಎಂಬ ಸೂಚನೆ ನೀಡಿದೆ. ಪಕ್ಷದ ಮೂಲಗಳ ಪ್ರಕಾರ, ಸಂಸತ್ತಿನ ಚಳಿಗಾಲದ ಅಧಿವೇಶನದ ನಂತರ, ಸಾಧ್ಯವಾದರೆ ಜನವರಿ ಮೊದಲ ವಾರದಲ್ಲೇ ಮತ್ತೊಂದು ಸುತ್ತಿನ ಸಭೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ–ಶಿವಕುಮಾರ್ ಬಣಗಳ ನಡುವಿನ ಅಧಿಕಾರ ಹಂಚಿಕೆ ಸೂತ್ರದ ವಿಷಯವೇ ವಿವಾದದ ಮೂಲವಾಗಿದ್ದು, ಈ ಕುರಿತಂತೆ ಹೈಕಮಾಂಡ್ ಎರಡೂ ಬಣಗಳಿಗೆ ಸಾರ್ವಜನಿಕವಾಗಿ ಮಾತನಾಡದಂತೆ ಸೂಚನೆ ನೀಡಲಿದೆ. ಅಂತಿಮ ನಿರ್ಧಾರ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚನೆಯ ಬಳಿಕವೇ ಹೊರಬೀಳಲಿದೆ ಎಂದು ಖರ್ಗೆ ಈ ಮೊದಲು ಹೇಳಿದ್ದರು.
ಇದೇ ಸಂದರ್ಭದಲ್ಲಿ, ಇಬ್ಬರು ನಾಯಕರು ಬ್ರೇಕ್ ಫಾಸ್ಟ್ ಮತ್ತು ಲಂಚ್ ಮೀಟಿಂಗ್ ಮೂಲಕ ಸಭೆಗಳನ್ನು ನಡೆಸಿ ಐಕ್ಯತೆಯನ್ನು ಸಾಧಿಸಲು ನಡೆಸಿದ ಪ್ರಯತ್ನಗಳ ಬಗ್ಗೆ ವೇಣುಗೋಪಾಲ್ ಸೋನಿಯಾ ಅವರಿಗೆ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಮಸ್ಯೆಗಳನ್ನು ಪಕ್ಷದ ಒಳಾಂಗಣದಲ್ಲಿ ಚರ್ಚಿಸಬೇಕೆಂಬ ಸೂಚನೆಯನ್ನೂ ಇಬ್ಬರಿಗೂ ನೀಡಲಾಗಿದೆ.
ಕೇಂದ್ರದ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಇಬ್ಬರೂ ಹೈಕಮಾಂಡ್‌ಗೆ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ನಡುವೆ ನಡೆದ ಮಾತುಕತೆಯೂ ನಡೆದಿದೆ. ಮಲ್ಲಿಕಾರ್ಜುನ ಖರ್ಗೆಯವರೂ ಇಬ್ಬರು ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸೌಜನ್ಯ: deccanherald.com