×
Ad

ಕೊಲ್ಕತ್ತಾ: ಭಾರೀ ಮಳೆಗೆ 11 ಬಲಿ; ನವರಾತ್ರಿಯ ಸಂಭ್ರಮಕ್ಕೆ ಸೂತಕದ ಛಾಯೆ

Update: 2025-09-24 09:55 IST

PC: x.com/CNNnews18

ಕೊಲ್ಕತ್ತಾ: ಪಶ್ಚಿಮ ಬಂಗಾಳ ರಾಜಧಾನಿಯಲ್ಲಿ ಒಂದೇ ದಿನ ನಾಲ್ಕು ದಶಕಗಳಲ್ಲೇ ಗರಿಷ್ಠ ಮಳೆ ಬಿದ್ದು ಸಂಭವಿಸಿದ ಅನಾಹುತಗಳಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೇರಿದ್ದು, ನವರಾತ್ರಿ ದುರ್ಗಾಪೂಜೆಯ ಸಂಭ್ರಮದಲ್ಲಿದ್ದ ನಗರದಲ್ಲಿ ಸೂತಕದ ಛಾಯೆ ಆವರಿಸಿದೆ.

ನಗರದಲ್ಲಿ 24 ಗಂಟೆ ಅವಧಿಯಲ್ಲಿ 251.4 ಮಿಲಿಮೀಟರ್ ಮಳೆ ಬಿದ್ದಿದ್ದು, ಇದು 1986ರ ಬಳಿಕ ಒಂದೇ ದಿನದಲ್ಲಿ ಬಿದ್ದ ಗರಿಷ್ಠ ಮಳೆಯಾಗಿದೆ. 137 ವರ್ಷಗಳ ಅವಧಿಯಲ್ಲಿ ಒಂದೇ ದಿನ ಬಿದ್ದ ಆರನೇ ಗರಿಷ್ಠ ಮಳೆ ಪ್ರಮಾಣ ಇದಾಗಿದೆ. ಗಂಟೆಗೆ 98 ಮಿಲಿಮೀಟರ್ ನಂತೆ ಮಳೆ ಬಿದ್ದಿದ್ದು, ಇದು ಗರಿಷ್ಠ ಮೇಘಸ್ಫೋಟದ ಮಟ್ಟ (ಗಂಟೆಗೆ 100 ಮಿ.ಮೀ)ಕ್ಕಿಂತ ತುಸು ಕಡಿಮೆ. ಆದಾಗ್ಯೂ ಆರು ಗಂಟೆ ಕಾಲ ಬಿದ್ದ ವ್ಯಾಪಕ ಮಳೆ ಈ ಮಹಾನಗರದ 1.5 ಕೋಟಿ ಮಂದಿಯ ಜೀವನವನ್ನು ದುಸ್ತರವಾಗಿಸಿದೆ.

ಅಕ್ಕಪಕ್ಕದ ಪ್ರದೇಶಗಳು ಕೂಡಾ ಸಂಪರ್ಕ ಕಡಿದುಕೊಂಡಿದ್ದು, ರೈಲು ಹಾಗೂ ವಿಮಾನ ಸೇವೆಗಳು ಅಸ್ತವ್ಯಸ್ತಗೊಂಡಿವೆ. ಭೀಕರ ಪ್ರವಾಹ ಪರಿಸ್ಥಿತಿಯಿಂದ ಹಲವು ವಾಹನಗಳು ಕೊಚ್ಚಿಕೊಂಡು ಹೋಗಿವೆ. ಮನೆ ಹಾಗೂ ಅಪಾರ್ಟ್ಮೆಂಟ್ ಗಳು ಜಲಾವೃತವಾಗಿವೆ.

ಪ್ರಮುಖ ರಸ್ತೆಗಳು ನದಿಗಳಾಗಿ ಪರಿವರ್ತನೆಗೊಂಡಿದ್ದು, ಮೆಟ್ರೋ ಹಾಗೂ ಸ್ಥಳೀಯ ರೈಲು ಸಂಚಾರ ಅಸ್ತವ್ಯಸ್ತವಾಗಿದೆ. ಕೊಲ್ಕತ್ತಾದ ಪ್ರಸಿದ್ಧ ದುರ್ಗಾಪೂಜಾ ಪೆಂಡಾಲ್ ಗಳಿಗೆ ಹಾನಿಯಾಗಿದ್ದು, ವಾರಾಂತ್ಯದಲ್ಲಿ ನಡೆಯುವ ದುರ್ಗಾಪೂಜೆಯ ಸಂಭ್ರಮಕ್ಕೆ ಕರಾಳ ಛಾಯೆ ಆವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News