ಇತಿಹಾಸ ಓದಿದರೆ ಕುಂಭಮೇಳ, ಅಯೋಧ್ಯೆಗೆ ಹೋಗಲಾರಿರಿ: ವಿವಾದಕ್ಕೊಳಗಾದ ಎಸ್‌ಪಿ ಶಾಸಕನ ಹೇಳಿಕೆ
ಅಯೋಧ್ಯೆ , ಕುಂಭಮೇಳ | Photo Credit : PTI
ಲಕ್ನೋ, ಅ. 9: ಇತಿಹಾಸ ಓದಿದರೆ ನೀವು ಕುಂಭಮೇಳ ಅಥವಾ ಅಯೋಧ್ಯೆಗೆ ಹೋಗಲಾರರಿ ಎಂದು ಸಮಾಜವಾದಿ ಪಕ್ಷದ ಶಾಸಕ ಹಾಗೂ ಕೇಂದ್ರದೆ ಮಾಜಿ ಸಹಾಯಕ ಸಚಿವ ರಾಮ್ ಅಚಲ್ ರಾಜ್‌ಭರ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಸಾಮಾಜಿಕ ಮಾದ್ಯಮದಲ್ಲಿ ಕಂಡು ಬಂದ 27 ಸೆಕೆಂಡ್ ಗಳ ವೀಡಿಯೊದಲ್ಲಿ ರಾಜ್‌ಭರ್ ಸನಾತನ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿರುವುದು ಹಾಗೂ ರಾಮಾಯಣವನ್ನು ದಹಿಸಿದವರನ್ನು ಪ್ರಶಂಸಿಸುತ್ತಿರುವುದು ಕಂಡು ಬಂದಿದೆ ಎಂದು ಆರೋಪಿಸಲಾಗಿದೆ.
ವೀಡಿಯೊದಲ್ಲಿ ರಾಜ್‌ಭರ್, ‘‘ದಕ್ಷಿಣ ಭಾರತದಲ್ಲಿ ರಾಮಾಯಣವನ್ನು ಸುಟ್ಟ ಸಂತ ಗಾಡ್ಗಿಲ್ ಅಥವಾ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಇರಲಿ, ಮಾತನಾಡಲು ಹಲವು ವಿಷಯಗಳಿವೆ’’ ಎಂದು ಹೇಳಿದ್ದಾರೆ.
ಪೆರಿಯಾರ್ ಲಾಲಾಯಿ ಯಾದವ್ ‘ಸಚ್ಚಿ ರಾಮಾಯಣ’ (ನಿಜ ರಾಮಾಯಣ) ಬರೆದಿದ್ದಾರೆ. ಸಂತರು, ಶ್ರೇಷ್ಟ ವ್ಯಕ್ತಿಗಳು ಹಾಗೂ ಗುರುಗಳ ಬಗೆಗಿನ ಚರಿತ್ರೆ ಓದಿ. ನೀವು ಸಂಕುಚಿತ ಮನಸ್ಥಿತಿ ಬಿಟ್ಟು, ಮುಕ್ತ ಮನಸ್ಸಿನವರಾಗುವಿರಿ. ಅನಂತರ ನೀವು ಕುಂಭಮೇಳಕ್ಕೆ, ಅಯೋಧ್ಯೆಗೆ ಹೋಗಲಾರಿರಿ. ಬದಲಾಗಿ, ನಿಮ್ಮ ಮಕ್ಕಳನ್ನು ಶಾಲೆಗೆ, ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸುತ್ತೀರಿ. ಆದುದರಿಂದ ಅವರು ಐಎಎಸ್ ಅಧಿಕಾರಿಗಳಾಗುತ್ತಾರೆ ಎಂದಿದ್ದಾರೆ.
ಹಿನ್ನೆಲೆಯಲ್ಲಿ ‘ಪಿಡಿಎ ಕಾರ್ಯಗಾರ’ ಎಂಬ ಪೋಸ್ಟರ್ ಇದೆ. ಆದರೆ, ಸಭೆ ನಡೆದ ಸ್ಥಳ ಹಾಗೂ ಸಮಯ ದೃಢಪಟ್ಟಿಲ್ಲ.
ರಾಜ್‌ಭರ್ ಅವರ ಹೇಳಿಕೆಯನ್ನು ಬಿಜೆಪಿ ಹಾಗೂ ಬಲಪಂಥೀಯ ಗುಂಪುಗಳು ತೀವ್ರವಾಗಿ ಖಂಡಿಸಿವೆ. ರಾಜ್‌ಭರ್ ಅವರು ರಾಜೀನಾಮೆ ನೀಡುವಂತೆ ಹಾಗೂ ಅವರನ್ನು ಎಸ್‌ಪಿಯಿಂದ ಉಚ್ಛಾಟಿಸುವಂತೆ ಆಗ್ರಹಿಸಿವೆ.