×
Ad

ಅಜಿತ್ ಪವಾರ್ ಪುತ್ರನ ಕಂಪೆನಿಗೆ ಭೂಮಿ ಮಾರಾಟ: ತನಿಖೆಗೆ ಮಹಾ ಸರ್ಕಾರ ಆದೇಶ

Update: 2025-11-07 08:21 IST

‌PC: x.com/DeccanHerald

ಪುಣೆ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪುತ್ರ ಪಾರ್ಥ್‌ ಪವಾರ್ ಪಾಲುದಾರರಾಗಿರುವ ಅಮಾದಿಯಾ ಎಂಟರ್ ಪ್ರೈಸಸ್ ಎಲ್ಎಲ್ ಪಿ ಕಂಪೆನಿಗೆ ಪುಣೆಯ ಬಳಿ 40 ಎಕರೆ ಮಹರ್ ವತನ್ ಭೂಮಿಯನ್ನು 300 ಕೋಟಿ ರೂಪಾಯಿಗೆ ಮಾರಾಟ ಮಾಡಿರುವ ಬಗ್ಗೆ ರಾಜಕೀಯ ವಿವಾದ ಸೃಷ್ಟಿಯಾಗಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಹಾಯುತಿ ಸರ್ಕಾರ ಈ ಮಾರಾಟದ ಬಗ್ಗೆ ತನಿಖೆ ನಡೆಸಲು ಐವರು ಸದಸ್ಯರ ಸಮಿತಿ ರಚಿಸಿದ್ದು, ಸಬ್ ರಿಜಿಸ್ಟ್ರಾರ್ ಅವರನ್ನು ಅಮಾನತುಗೊಳಿಸಿದೆ.

ಮೇ ತಿಂಗಳಲ್ಲಿ ಈ ಮಾರಾಟ ಒಪ್ಪಂದ ನೋಂದಣಿಗೆ ಪಾವತಿಸಬೇಕಾದ 21 ಕೋಟಿ ರೂಪಾಯಿ ಮುದ್ರಾಂಕ ಶುಲ್ಕವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದೆ ಎಂದು ಆಪಾದಿಸಲಾಗಿದೆ. ಜತೆಗೆ ಈ ಭೂಮಿಯ ಮಾರಾಟ ದರ 1800 ಕೋಟಿ ರೂಪಾಯಿ ಎಂದು ಹೋರಾಟಗಾರರು ಅಂದಾಜಿಸಿದ್ದಾರೆ.

ಈ ಭೂಮಿ ಮಾರಾಟದ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಮೇಲ್ನೋಟಕ್ಕೆ ಇದು ಗಂಭೀರ ವಿಚಾರ ಎನಿಸಿದೆ. ಭೂದಾಖಲೆಗಳ ಸಂಬಂಧಪಟ್ಟ ಅಧಿಕಾರಿಗಳು, ಐಜಿಆರ್ ಮತ್ತು ಕಂದಾಯ ಅಧಿಕಾರಿಗಳು ಈ ಮಾರಾಟದ ಎಲ್ಲ ವಿವರಗಳನ್ನು ಒದಗಿಸುವಂತೆ ಆದೇಶಿಸಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಮಾರಾಟ ಒಪ್ಪಂದ ಸಂದರ್ಭದಲ್ಲಿ ಅಕ್ರಮ ಎಸಗಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆರೋಪದಲ್ಲಿ ಐಜಿಆರ್ ನ ಹವೇಲಿ 4 ಸಬ್ ರಿಜಿಸ್ಟ್ರಾರ್ ರವೀಂದ್ರ ತರು ಅವರನ್ನು ಸರ್ಕಾರ ಅಮಾನತುಗೊಳಿಸಿದೆ. ಜತೆಗೆ ಅವರ ವಿರುದ್ಧ ಅಪರಾಧ ಪ್ರಕ್ರಿಯೆ ಆರಂಭಿಸುವಂತೆಯೂ ಜಂಟಿ ಜಿಲ್ಲಾ ರಿಜಿಸ್ಟ್ರಾರ್ ಮತ್ತು ಮುದ್ರಾಂಕ ಸಂಗ್ರಾಹಕ ಸಂತೋಷ್ ಹಿಂಗಾನೆ ಅವರಿಗೆ ಸೂಚಿಸಲಾಗಿದೆ. ಶೀತಲ್ ತೇಜ್ವಾನಿ ಮತ್ತು ದಿಗ್ವಿಜಯ ಪಾಟೀಲ್ ವಿರುದ್ಧವೂ ಕ್ರಮಕ್ಕೆ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News