×
Ad

ಮಧ್ಯಪ್ರದೇಶ : ಸಿಎಂ ಆಗಿ ಆಯ್ಕೆಯಾದ ಮೋಹನ್ ಯಾದವ್ ಬಗ್ಗೆ ನಿರ್ಗಮಿತ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದೇನು?

Update: 2023-12-11 19:26 IST

 ಶಿವರಾಜ್ ಸಿಂಗ್ ಚೌಹಾಣ್ | Photo: @ChouhanShivraj \ X 

ಭೋಪಾಲ್ : ನಾಲ್ಕು ಬಾರಿ ಸಿಎಂ ಆಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರ ಬದಲಿಗೆ ಮೋಹನ್ ಯಾದವ್ ಅವರನ್ನು ಭಾರತೀಯ ಜನತಾ ಪಕ್ಷ ಮಧ್ಯಪ್ರದೇಶದ ಹೊಸ ಮುಖ್ಯಮಂತ್ರಿಯಾಗಿ ನಿಯೋಜಿಸಿ ಅಚ್ಚರಿ ಮೂಡಿಸಿದೆ.

ಭಾರತೀಯ ಜನತಾ ಪಕ್ಷದದ ಶಾಸಕಾಂಗ ನಾಯಕರಾಗಿ ಆಯ್ಕೆಯಾದ ನಂತರ, ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಮೋಹನ್ ಯಾದವ್ ಅವರನ್ನು ನಿರ್ಗಮಿತ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ಅಭಿನಂದಿಸಿದ್ದಾರೆ.

“ನನ್ನ ಸಹೋದ್ಯೋಗಿ ಡಾ. ಮೋಹನ್ ಯಾದವ್ ಅವರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಹೆಸರಿಸುವುದಕ್ಕೆ ನಾನು ಅಭಿನಂದಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನೀವು ಮಧ್ಯಪ್ರದೇಶವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೀರಿ ಎಂದು ನನಗೆ ಭರವಸೆಯಿದೆ. ಈ ಹೊಸ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಕ್ಕಾಗಿ ನಾನು ನಿಮಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ" ಎಂದು ಚೌಹಾಣ್ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಒಬಿಸಿ ನಾಯಕ ಮತ್ತು ಉಜ್ಜಯಿನಿಯಿಂದ ಮೂರು ಬಾರಿ ಶಾಸಕರಾಗಿದ್ದ ಯಾದವ್, ಚೌಹಾಣ್ ಅವರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ಉಜ್ಜಯಿನಿ ದಕ್ಷಿಣ ಕ್ಷೇತ್ರದಿಂದ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಚೇತನ್ ಯಾದವ್ ಅವರನ್ನು ಸುಮಾರು 13,000 ಮತಗಳಿಂದ ಸೋಲಿಸಿದ್ದರು.

ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಯಾದವ್ ಅವರ ಹೆಸರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವುದರೊಂದಿಗೆ ಬಿಜೆಪಿ ಹತ್ತು ದಿನಗಳ ರಾಜಕೀಯ ಬೆಳವಣಿಗೆಗೆ ಅಂತ್ಯ ಹಾಡಿದೆ.

"ನನಗೆ ಇಷ್ಟು ದೊಡ್ಡ ಜವಾಬ್ದಾರಿ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ವಿಡಿ ಶರ್ಮಾ ಅವರಿಗೆ ಧನ್ಯವಾದ ಹೇಳುತ್ತೇನೆ. ನನ್ನಂತಹ ಸಣ್ಣ ಕಾರ್ಯಕರ್ತನಿಗೆ ಇಷ್ಟು ದೊಡ್ಡ ಜವಾಬ್ದಾರಿ ನೀಡುವುದು ಬಿಜೆಪಿ ಪಕ್ಷಕ್ಕೆ ಮಾತ್ರ ಸಾಧ್ಯ. ನಾನು ರಾಜ್ಯವನ್ನು ಅಭಿವೃದ್ಧಿ ಪಯಣದತ್ತ ಕೊಂಡೊಯ್ಯುತ್ತೇನೆ” ಎಂದು ಯಾದವ್ ಅವರು ರಾಜಭವನಕ್ಕೆ ತೆರಳುವ ಮೊದಲು ಸುದ್ದಿಗಾರರಿಗೆ ತಿಳಿಸಿದರು. ರಾಜಭವನಕ್ಕೆ ತೆರಳಿದ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲರನ್ನು ಭೇಟಿ ಮಾಡಿದರು.

ಕಳೆದ 20 ವರ್ಷಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸದೇ ಬಿಜೆಪಿ ಇದೇ ಮೊದಲ ಬಾರಿ ವಿಧಾನಸಭಾ ಚುನಾವಣೆ ಎದುರಿಸಿತ್ತು. ಚುನಾವಣೆಯಲ್ಲಿ 230 ಸ್ಥಾನಗಳಲ್ಲಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿತು. 66 ಸ್ಥಾನ ಪಡೆದ ಕಾಂಗ್ರೆಸ್ ರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ 14 ಚುನವಣಾ ಪ್ರಚಾರ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News