ಗುಜರಾತ್ | ಮೆಹ್ಸಾನಾದ ರಸಗೊಬ್ಬರ ಕಾರ್ಖಾನೆಯಲ್ಲಿ ಅಗ್ನಿದುರಂತ; ಇಬ್ಬರು ಕಾರ್ಮಿಕರ ಸಜೀವ ದಹನ
PC | ANI
ಮೆಹ್ಸಾನ,ಸೆ.14: ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ರಸಗೊಬ್ಬರ ಕಾರ್ಖಾನೆಯೊಂದರಲ್ಲಿ ರವಿವಾರ ನಸುಕಿನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ ಹಾಗೂ ಹಲವಾರು ಮಂದಿಗೆ ಸುಟ್ಟ ಗಾಯಗಳಾಗಿವೆ.
ಸಮೇತ್ರಾ ಗ್ರಾಮದಲ್ಲಿರುವ ರಸಗೊಬ್ಬರ ಕಾರ್ಖಾನೆಯಲ್ಲಿ ನಸುಕಿನಲ್ಲಿ ಮೂರು ಗಂಟೆಯ ವೇಳೆಗೆ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತ್ತೆಂದು ಮೆಹ್ಸಾನಾ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರ್ಖಾನೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಸಜೀವದಹನಗೊಂಡಿದ್ದಾರೆ. ಇತರ ಇಬ್ಬರಿಗೆ ಸುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಅವಘಡಕ್ಕೆ ನಿಖರವಾದ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಘಟನೆಯ ಬಗ್ಗೆ ಮಾಹಿತಿ ತಿಳಿದೊಡನೆ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಯ ತಂಡವೊಂದು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿತೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಕಿಯನ್ನು ನಿಯಂತ್ರಣಕ್ಕೆ ತಂದ ಆನಂತರ ಸಜೀವದಹನಗೊಂಡ ಇಬ್ಬರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿವೆ. ಘಟನೆ ಸಂಭವಿಸಿದ ವೇಳೆ ಸ್ಥಳದಲ್ಲಿ ಆರು ಮಂದಿ ಕಾರ್ಮಿಕರಿದ್ದರೆಂದು ಅವರು ತಿಳಿಸಿದ್ದಾರೆ.ಮೃತರನ್ನು ಮನೀಶ್ ಹಾಗೂ ಪುಲ್‌ಚಾಂದ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕ್ರಮವಾಗಿ ಬಿಹಾರ ಹಾಗೂ ಮಹಾರಾಷ್ಟ್ರದವರೆಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಘಟನೆಯ ಬಗ್ಗೆ ತನಿಖೆ ಮುಂದುವರಿದಿದೆಯೆಂದು ಅವರು ಹೇಳಿದ್ದಾರೆ.