×
Ad

ನಾಲ್ಕು ಈಶಾನ್ಯ ರಾಜ್ಯಗಳಿಂದ ಬಿಜೆಪಿಗೆ ಅರ್ಧಕ್ಕೂ ಹೆಚ್ಚು ಹಣ ಸರಕಾರಿ ಗುತ್ತಿಗೆದಾರರಿಂದ ಬಂದಿತ್ತು!

reporters-collective.in ವರದಿ

Update: 2025-12-15 21:45 IST

credit : reporters-collective

ಗುವಾಹಟಿ (ಅಸ್ಸಾಂ),ಡಿ.15: ಬಿಜೆಪಿ ಹೇಗೆ ವಿವಿಧ ಯೋಜನೆಗಳಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ಗುತ್ತಿಗೆಗಳನ್ನು ಪಡೆದುಕೊಂಡಿದ್ದ ಕಂಪೆನಿಗಳಿಂದ ಕೋಟ್ಯಂತರ ರೂ.ಗಳನ್ನು ಪಡೆದುಕೊಂಡಿತ್ತು ಎಂಬ ಬಗ್ಗೆ ಸ್ವತಂತ್ರ ಮಾಧ್ಯಮ ಗುಂಪು ‘ರಿಪೋರ್ಟರ್ಸ್ ಕಲೆಕ್ಟಿವ್’ ವಿವರವಾದ ವರದಿಯೊಂದನ್ನು ಪ್ರಕಟಿಸಿದೆ.

ಜೂ.4,2023ರಂದು ಬಿಹಾರದ ಸುಲ್ತಾನ್‌ಗಂಜ್ ಪಟ್ಟಣದಲ್ಲಿ ಸೇತುವೆಯೊಂದು ಕುಸಿದುಬಿದ್ದಿತ್ತು. ಇದು ಅಲ್ಲಿಂದ ಸುಮಾರು 700 ಕಿ.ಮೀ.ದೂರದ ಅಸ್ಸಾಮಿನ ರಾಜಕೀಯ ವಲಯದಲ್ಲಿ ತಲ್ಲಣಗಳನ್ನು ಸೃಷ್ಟಿಸಿತ್ತು. ರಾಜಧಾನಿ ಗುವಾಹಟಿ ನಗರದ ಹೃದಯಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ 8.4 ಕಿ.ಮೀ.ಉದ್ದದ ಸೇತುವೆಯ ಕುರಿತು ತನಿಖೆಗೆ ರಾಜ್ಯ ಸರಕಾರವು ಆದೇಶಿಸಿತ್ತು. ಬಿಹಾರದಲ್ಲಿ ಕುಸಿದಿದ್ದ ಸೇತುವೆ ಮತ್ತು ಅಸ್ಸಾಮಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ನಡುವೆ ಸಂಬಂಧವೊಂದಿತ್ತು. ಇವೆರಡೂ ಸೇತುವೆಗಳನ್ನು ಎಸ್‌ಪಿಎಸ್ ಕನ್‌ಸ್ಟ್ರಕ್ಷನ್ ಇಂಡಿಯಾ ಪ್ರೈ.ಲಿ.ನಿರ್ಮಿಸಿತ್ತು. ಎರಡು ವರ್ಷಗಳು ಕಳೆದಿದ್ದರೂ ಆ ತನಿಖಾ ವರದಿ ಇನ್ನೂ ಬಹಿರಂಗಗೊಂಡಿಲ್ಲ. ಅದೇ ವರ್ಷ ಕಂಪೆನಿಯು ಬಿಜೆಪಿಗೆ ಐದು ಕೋಟಿ ರೂ.ಗಳ ದೇಣಿಗೆಯನ್ನು ನೀಡಿತ್ತು ಎನ್ನುವುದನ್ನು ರಿಪೋರ್ಟರ್ಸ್ ಕಲೆಕ್ಟಿವ್ ಪತ್ತೆ ಹಚ್ಚಿದೆ.

ಎಸ್‌ಪಿಎಸ್ ಕನ್‌ಸ್ಟ್ರಕ್ಷನ್ ಈಶಾನ್ಯ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ವಿವಿಧ ರಾಜ್ಯಗಳಲ್ಲಿ ಸರಕಾರಿ ಟೆಂಡರ್‌ ಗಳನ್ನು ಗೆದ್ದ ಮತ್ತು ಪಕ್ಷಕ್ಕೆ ದೇಣಿಗೆ ನೀಡಿದ ಏಕೈಕ ಕಂಪೆನಿಯಲ್ಲ. ಅಂತಹ ಹಲವಾರು ಕಂಪೆನಿಗಳನ್ನು ರಿಪೋರ್ಟರ್ಸ್ ಕಲೆಕ್ಟಿವ್ ಪತ್ತೆ ಹಚ್ಚಿದೆ.

2022-23 ಮತ್ತು 2023-24ರಲ್ಲಿ ಬಿಜೆಪಿಯು ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ತ್ರಿಪುರಾ ರಾಜ್ಯಗಳ ದಾನಿಗಳಿಂದ 77.63 ಕೋ.ರೂ.ಗಳನ್ನು ಸಂಗ್ರಹಿಸಿದ್ದು, ಇದರ ಕನಿಷ್ಠ ಶೇ.54.89ರಷ್ಟು ಮೊತ್ತವು ಈ ನಾಲ್ಕು ರಾಜ್ಯ ಸರಕಾರಗಳು ಅಥವಾ ಕೇಂದ್ರ ಸರಕಾರದಿಂದ ನಿಯಂತ್ರಿತ ಏಜೆನ್ಸಿಗಳಿಂದ ಟೆಂಡರ್‌ ಗಳನ್ನು ಮತ್ತು ನಿಯಂತ್ರಕ ಅನುಮತಿಗಳನ್ನು ಪಡೆದಿದ್ದ ಗುತ್ತಿಗೆದಾರರಿಂದ ಬಂದಿತ್ತು ಎಂದು ರಿಪೋರ್ಟರ್ಸ್ ಕಲೆಕ್ಟಿವ್ ಹೇಳಿದೆ.

ರಾಜಕೀಯ ಪಕ್ಷಗಳು 20,000 ರೂ.ಗಿಂತ ಹೆಚ್ಚಿನ ದೇಣಿಗೆಗಳ ವಿವರಗಳನ್ನು ಬಹಿರಂಗಗೊಳಿಸಬೇಕಾಗುತ್ತದೆ. ರಿಪೋರ್ಟರ್ಸ್ ಕಲೆಕ್ಟಿವ್ 2022-23 ಮತ್ತು 2023-24ರಲ್ಲಿ ಈ ನಾಲ್ಕು ಈಶಾನ್ಯ ರಾಜ್ಯಗಳಿಂದ ಬಿಜೆಪಿಯ ದಾನಿಗಳನ್ನು ವಿಶ್ಲೇಷಿಸಿತ್ತು. ಚುನಾವಣಾ ಆಯೋಗವು 2024-25ನೇ ಸಾಲಿಗೆ ಬಿಜೆಪಿಗೆ ದಾನಿಗಳ ವಿವರಗಳನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ನಂತರ ರಿಪೋರ್ಟರ್ಸ್ ಕಲೆಕ್ಟಿವ್ ಕೇಂದ್ರ ಮತ್ತು ರಾಜ್ಯಗಳ ದತ್ತಾಂಶಗಳನ್ನು ಅಧ್ಯಯನ ಮಾಡಿ ಬಿಜೆಪಿಗೆ ದೇಣಿಗೆ ನೀಡಿದವರು ಮತ್ತು ದೇಣಿಗೆ ಸಮಯದಲ್ಲಿ ಅವರು ಪಡೆದುಕೊಂಡಿದ್ದ ಗುತ್ತಿಗೆಗಳಿಗೂ ಸಂಬಂಧವಿದೆಯೇ ಎನ್ನುವುದನ್ನು ಪರಿಶೀಲಿಸಿತ್ತು.

ಸರಕಾರಗಳೊಂದಿಗೆ ವ್ಯವಹಾರ ನಡೆಸುವ ಕಂಪೆನಿಗಳು ಅಥವಾ ವ್ಯಕ್ತಿಗಳು ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳಿಗೆ ಹೆಚ್ಚಿನ ದೇಣಿಗೆಗಳನ್ನು ನೀಡುವುದು ಕಾನೂನುಬಾಹಿರವಲ್ಲ. ಆದರೆ ಇದು ಒಂದು ಲೋಪವಾಗಿದ್ದು,ಸಂಭಾವ್ಯ ಕ್ರೋನಿ-ಬಂಡವಾಳಶಾಹಿ, ಭ್ರಷ್ಟಾಚಾರ ಮತ್ತು ಕೊಟ್ಟು-ತೆಗೆದುಕೊಳ್ಳುವ ವ್ಯವಸ್ಥೆಗಳನ್ನು ಹೇಗೆ ಮರೆಮಾಚುತ್ತದೆ ಎನ್ನುವುದು ಕಳವಳಗಳನ್ನು ಹುಟ್ಟಿಸುತ್ತದೆ.

ಮೇಘಾಲಯದಲ್ಲಿ ಬಿಜೆಪಿ ಕೇವಲ ಇಬ್ಬರು ಚುನಾಯಿತ ಶಾಸಕರನ್ನು ಹೊಂದಿದ್ದರೂ ಅಲ್ಲಿ ಅದು ಬಲವಾದ ಪ್ರಭಾವವನ್ನು ಹೊಂದಿದೆ. ಸ್ಟಾರ್ ಸಿಮೆಂಟ್ ಮೇಘಾಲಯ ಮೂಲದ ಕಂಪೆನಿಯಾಗಿದ್ದು,2023-24ರಲ್ಲಿ ಬಿಜೆಪಿಗೆ ಐದು ಕೋ.ರೂ.ಗಳ ದೇಣಿಗೆ ನೀಡಿದೆ ಎಂದು ರಿಪೋರ್ಟರ್ಸ್ ಕಲೆಕ್ಟಿವ್ ವರದಿಯಲ್ಲಿ ಹೇಳಿದೆ. ಕಂಪೆನಿಯು ಅದಕ್ಕೂ ಹಿಂದಿನ ಮೂರು ವರ್ಷಗಳಲ್ಲಿ ಬಿಜೆಪಿಗೆ 6.68 ಕೋ.ರೂ.ಗಳ ದೇಣಿಗೆ ನೀಡಿತ್ತು. ಅದು ಈ ವರ್ಷ ಅಸ್ಸಾಂ ಸರಕಾರದೊಂದಿಗೆ 3,200 ಕೋಟಿ ರೂ.ಗಳ ಸಿಮೆಂಟ್ ಕ್ಲಿಂಕರ್ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಿದೆ. 2019ರಿಂದ ಸ್ಟಾರ್ ಸಿಮೆಂಟ್ ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ,ನಾಗಾಲ್ಯಾಂಡ್ ಮತ್ತು ತ್ರಿಪುರಾಗಳಲ್ಲಿನ ಯೋಜನೆಗಳಿಗಾಗಿ ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ಗಡಿ ರಸ್ತೆಗಳ ಸಂಸ್ಥೆ,ಭಾರತೀಯ ತೈಲ ನಿಗಮ, ರಾಷ್ಟ್ರೀಯ ಜಲವಿದ್ಯುತ್ ನಿಗಮ ಹಾಗೂ ರಾಜ್ಯ ಸರಕಾರದ ಇಲಾಖೆಗಳಿಂದ ಕನಿಷ್ಠ 18 ಟೆಂಡರ್‌ಗಳನ್ನು ಪಡೆದುಕೊಂಡಿದೆ.

ರಿಪೋರ್ಟರ್ಸ್ ಕಲೆಕ್ಟಿವ್ ಎತ್ತಿ ತೋರಿಸಿರುವ ಇನ್ನೊಂದು ಪ್ರಕರಣ ನೂತನ ಮೇಘಾಲಯ ವಿಧಾನಸಭಾ ಕಟ್ಟಡದ ಕುಖ್ಯಾತ ಬಿಲ್ಡರ್‌ ಗೆ ಸಂಬಂಧಿಸಿದೆ.

2023-24ರಲ್ಲಿ ಬದ್ರಿ ರಾಯ್ ಆ್ಯಂಡ್ ಕಂಪೆನಿ ಬಿಜೆಪಿಗೆ ಒಂದು ಕೋಟಿ ರೂ.ದೇಣಿಗೆ ನೀಡಿತ್ತು. ಮೇ 2022ರಲ್ಲಿ ನಿರ್ಮಾಣ ಹಂತದಲ್ಲಿದ್ದ ವಿಧಾನಸಭಾ ಕಟ್ಟಡದ ಗುಮ್ಮಟವು ಕುಸಿದು ಬಿದ್ದಿತ್ತು. ಅಂದ ಹಾಗೆ, ಬದ್ರಿ ರಾಯ್ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಪಡೆದಿರಲಿಲ್ಲ,ಅದು ಟೆಂಡರ್ ಸಲ್ಲಿಸಿತ್ತಾದರೂ ಉತ್ತರ ಪ್ರದೇಶ ಸರಕಾರದ ರಾಜಕೀಯ ನಿರ್ಮಾಣ ನಿಗಮ.ಲಿ. ಬಿಡ್‌ ಅನ್ನು ಗೆದ್ದುಕೊಂಡಿತ್ತು. ಆದಾಗ್ಯೂ ಅದು ನಂತರ ಕಾಮಗಾರಿಯನ್ನು ಬದ್ರಿ ರಾಯ್‌ ಗೆ ಉಪಗುತ್ತಿಗೆ ನೀಡಿತ್ತು. ಗುಮ್ಮಟ ಕುಸಿತಕ್ಕಾಗಿ ಬದ್ರಿ ರಾಯ್‌ಗೆ ಯಾವುದೇ ದಂಡವನ್ನು ವಿಧಿಸಲಾಗಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಗೋಡೆಗಳು ಕುಸಿದಿದ್ದ ತುರಾದಲ್ಲಿನ ಪಿ.ಎ.ಸಂಗ್ಮಾ ಕ್ರೀಡಾ ಸಂಕೀರ್ಣದ ನಿರ್ಮಾಣ ಕಾಮಗಾರಿಯೊಂದಿಗೂ ಬದ್ರಿ ರಾಯ್ ಆ್ಯಂಡ್ ಕಂಪೆನಿ ಸಂಬಂಧವನ್ನು ಹೊಂದಿದೆ.

2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಚುನಾವಣಾ ಆಯೋಗದ ಅಧಿಕಾರಿಗಳು ಅರುಣಾಚಲ ಪ್ರದೇಶದಲ್ಲಿ ಬದ್ರಿ ರಾಯ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹರ್ಷವರ್ಧನ ಸಿಂಗ್ ಅವರಿಗೆ ಸೇರಿದ ಕಾರಿನಿಂದ 1.25 ಕೋಟಿ ರೂ.ನಗದು ಹಣವನ್ನು ವಶಪಡಿಸಿಕೊಂಡಿದ್ದರು. ಈ ಕಾರು ಮೇಘಾಲಯದ ಮುಖ್ಯಮಂತ್ರಿಗಳ ಬೆಂಗಾವಲು ವಾಹನಗಳ ಸಾಲಿನ ಹಿಂದೆಯೇ ಚಲಿಸುತ್ತಿತ್ತು!


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News