ಮುಂಬೈ-ಗೋವಾ ಹೆದ್ದಾರಿಯಲ್ಲಿ 60 ವರ್ಷದ ವ್ಯಕ್ತಿಯನ್ನು ಎಳೆದೊಯ್ದು ಕೊಂದ ಟ್ಯಾಂಕರ್: ವರದಿ
Photo: Twitter@NDTV
ಥಾಣೆ: ನವಿ ಮುಂಬೈನಲ್ಲಿ ಟ್ಯಾಂಕರ್ ಚಾಲಕನೊಬ್ಬ ಕಾರಿಗೆ ಡಿಕ್ಕಿ ಹೊಡೆದುದ್ದಲ್ಲದೆ 60 ವರ್ಷದ ವ್ಯಕ್ತಿಯೊಬ್ಬರನ್ನು ಎಳೆದೊಯ್ದು ಸಾಯಿಸಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ನವಿ ಮುಂಬೈನ ಮುಂಬೈ-ಗೋವಾ ಹೆದ್ದಾರಿಯಲ್ಲಿರುವ ತಾರಾ ಗ್ರಾಮದ ಸೇತುವೆಯೊಂದರಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪನ್ವೇಲ್ ತಾಲೂಕು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೆರೆಯ ರಾಯಗಡ ಜಿಲ್ಲೆಯ ಖಲಾಪುರದ ಶ್ರೀಕಾಂತ್ ಮೋರೆ ಎಂದು ಗುರುತಿಸಲಾದ ವ್ಯಕ್ತಿಯು ತಮ್ಮ ಕಾರಿನಲ್ಲಿ ಪತ್ನಿಯೊಂದಿಗೆ ಹೋಗುತ್ತಿದ್ದಾಗ ಹಿಂದಿನಿಂದ ಟ್ಯಾಂಕರ್ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಏನಾಯಿತು ಎಂದು ತಿಳಿದುಕೊಳ್ಳಲು ವ್ಯಕ್ತಿ ತನ್ನ ಕಾರಿನಿಂದ ಇಳಿದು ಟ್ಯಾಂಕರ್ ಚಾಲಕನೊಂದಿಗೆ ಮಾತನಾಡುತ್ತಿದ್ದಾಗಲೇ ಆತ ತನ್ನ ವಾಹನವನ್ನು ಚಲಾಯಿಸಿ ವ್ಯಕ್ತಿಯನ್ನು ಸ್ವಲ್ಪ ದೂರಕ್ಕೆ ಎಳೆದುಕೊಂಡು ಹೋಗಿದ್ದಾನೆ. ನಂತರ ಟ್ಯಾಂಕರ್ ಚಾಲಕ ವ್ಯಕ್ತಿಯನ್ನು ರಸ್ತೆಗೆ ತಳ್ಳಿದ್ದಾನೆ. ವ್ಯಕ್ತಿಯು ವಾಹನದಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಮಹಿಳೆ ನೀಡಿರುವ ದೂರನ್ನು ಉಲ್ಲೇಖಿಸಿ ಪೊಲೀಸರು ಹೇಳಿದ್ದಾರೆ.
ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದರು.
ಮೃತ ವ್ಯಕ್ತಿಯ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪನ್ವೇಲ್ ತಾಲೂಕು ಪೊಲೀಸರು ಶನಿವಾರ ಟ್ಯಾಂಕರ್ ಚಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.