×
Ad

ಮಹಾರಾಷ್ಟ್ರ ಚುನಾವಣೆ: ಎನ್‌ ಸಿಪಿ ಕಾರ್ಯಕರ್ತನ ಮೇಲೆ ಹಲ್ಲೆ, ಮತಗಟ್ಟೆ ಧ್ವಂಸ

Update: 2024-11-20 21:10 IST

Photo| X/@NCPspeaks

ಮುಂಬೈ: ಮಹಾರಾಷ್ಟ್ರದಲ್ಲಿ ಬುಧವಾರ ವಿಧಾನಸಭಾ ಚುನಾವಣೆ ನಡೆದಿದ್ದು, ಪರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆಯೊಂದನ್ನು ಧ್ವಂಸಗೊಳಿಸಲಾಗಿದೆ ಮತ್ತು ಶರದ್ ಪವಾರ್ ನೇತೃತ್ವದ ಎನ್ ಸಿಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ.

ಪರ್ಲಿ ಪಟ್ಟಣದ ಬ್ಯಾಂಕ್ ಕಾಲೋನಿ ಪ್ರದೇಶದಲ್ಲಿ ಶರದ್ ಪವಾರ್ ನೇತೃತ್ವದ ಎನ್‌ ಸಿಪಿ ಪಕ್ಷದ ಕಾರ್ಯಕರ್ತ ಮಾಧವ್ ಜಾಧವ್ ಮೇಲೆ ಹಲ್ಲೆ ನಡೆಸಲಾಗಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಲ್ಲದೆ ಘಟನಂದೂರಿನ ಮತಗಟ್ಟೆಗೆ ನುಗ್ಗಿದ ಕೆಲವರು ಇವಿಎಂನ್ನು ನೆಲಕ್ಕೆ ಎಸೆದು ಮತಗಟ್ಟೆಯಲ್ಲಿದ್ದ ಪೀಠೋಪಕರಣಗಳಿಗೆ ಹಾನಿ ಮಾಡಿದ್ದಾರೆ.

ಬೀಡ್ ಜಿಲ್ಲಾಧಿಕಾರಿ ಅವಿನಾಶ್ ಪಾಠಕ್ ಈ ಕುರಿತು ಮಾತನಾಡಿದ್ದು, ಘಟನಂದೂರಿನಲ್ಲಿ ಕೆಲ ವ್ಯಕ್ತಿಗಳು ಇವಿಎಂಗೆ ಹಾನಿ ಮಾಡಲು ಯತ್ನಿಸಿದ ನಂತರ ಇವಿಎಂಗಳನ್ನು ಬದಲಾಯಿಸಿ ಮತದಾನ ಪುನರಾರಂಭಿಸಲಾಗಿದೆ. ಹಿಂದಿನ ಇವಿಎಂಗಳ ಮೂಲಕ ಚಲಾವಣೆಯಾದ ಮತಗಳ ದತ್ತಾಂಶವು ಅವುಗಳ ನಿಯಂತ್ರಣ ಘಟಕಗಳಲ್ಲಿ ಸುರಕ್ಷಿತವಾಗಿದೆ ಮತ್ತು ಎಣಿಕೆ ಸಮಯದಲ್ಲಿ ಅದನ್ನು ಸೇರಿಸಲಾಗುವುದು. ಮತಗಟ್ಟೆಗೆ ನುಗ್ಗಿ ಇವಿಎಂ ಹಾನಿಗೆ ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಪರ್ಲಿ ವಿಧಾನಸಭಾ ಕ್ಷೇತ್ರದ ಎನ್‌ ಸಿಪಿ(ಶರದ್‌ ಬಣ) ಅಭ್ಯರ್ಥಿ ರಾಜಾಸಾಹೇಬ್ ದೇಶಮುಖ್ ಈ ಕುರಿತು ಪ್ರತಿಕ್ರಿಯಿಸಿದ್ದು, ಘಟನೆಯನ್ನು ಖಂಡಿಸಿದ್ದಾರೆ. ಧರ್ಮಪುರಿ ಮತಗಟ್ಟೆಯಲ್ಲಿ ಸಿಸಿಟಿವಿಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News