ಮರಾಠಾ ಮೀಸಲಾತಿಗೆ ಆಗ್ರಹಿಸಿ ಶಿಂಧೆ ಬಣದ ಸಂಸದ ಹೇಮಂತ್ ಪಾಟೀಲ್ ರಾಜೀನಾಮೆ
Photo : wikipedia
ಮುಂಬೈ: ಮರಾಠಾ ಮೀಸಲಾತಿಯನ್ನು ತಕ್ಷಣವೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ಶಿವಸೇನಾ (ಶಿಂಧೆ ಬಣ)ದ ಸಂಸದ ಹಿಂಗೋಳಿ ಹೇಮಂತ್ ಪಾಟೀಲ್ ಅವರು ರಾಜೀನಾಮೆ ನೀಡಿದ್ದಾರೆ. ಪರ್ಬಾನಿಕ್ಷೇತ್ರದ ಕಾಂಗ್ರೆಸ್ ಶಾಸಕ ಸುರೇಶ್ ವಾರ್ಪುಡಕರ್ ಹಾಗೂ ಗೆವರಾಯ್ ಕ್ಷೇತ್ರದ ಬಿಜೆಪಿ ಶಾಸಕ ಲಕ್ಷ್ಮಣ ಪವಾರ್ ಮರಾಠ ಮೀಸಲಾತಿಗೆ ಆಗ್ರಹಿಸಿ ರಾಜೀನಾಮೆ ಘೋಷಿಸಿದ್ದಾರೆ.
ಇತ್ತೀಚೆಗೆ ನಾಸಿಕ್ ನ ಹೇಮಂತ್ ಗೋಡ್ಸೆ ಹಾಗೂ ವೈಜಾಪುರದ ಶಾಸಕ ರಮೇಶ್ ಬೊರ್ನಾರೆ ಅವರು ಕೂಡಾ ರಾಜ್ಯ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಈ ನಡುವೆ ಮರಾಠವಾಡದ ಜಲ್ನಾ ಜಿಲ್ಲೆಯ ಅಂತರವಾಲಿ-ಸಾರಟಿಯಲ್ಲಿರುವ ಸಣ್ಣ ಗ್ರಾಮದಲ್ಲಿ ಮರಾಠ ಮೀಸಲಾತಿಗೆ ಆಗ್ರಹಿಸಿ ಮನೋಜ್ ಜರಾಂಗೆ ಪಾಟೀಲ್ ತನ್ನ ನಿರಶನವನ್ನು ಮುಂದುವರಿಸಿದ್ದಾರೆ. ಮರಾಠ ಮೀಸಲಾತಿಯನ್ನು ಜಾರಿಗೊಳಿಸಬೇಕೆಂಬ ತನ್ನ ಬೇಡಿಕೆಯ ಈಡೇರಿಕೆಗಾಗಿ ಏಕನಾಥ ಶಿಂಧೆ ಸರಕಾರಕ್ಕೆ ಇನ್ನೂ ಹೆಚ್ಚಿನ ಕಾಲಾವಕಾಶವನ್ನು ನೀಡಲು ಸಾಧ್ಯವಿಲ್ಲವೆಂದವರು ಹೇಳಿದ್ದಾರೆ.
ಶಿಂಧೆ ಅವರು ದೂರವಾಣಿ ಮೂಲಕ ಪಾಟೀಲ್ ರನ್ನು ಸಂಪರ್ಕಿಸಿ, ನಿರಶನವನ್ನು ಹಿಂತೆಗೆದುಕೊಳ್ಳುವಂತೆ ಅವರ ಮನವೊಲಿಸಲು ಯತ್ನಿಸಿದರು. ಅದರ ತನ್ನ ಜನತೆ ಅರೆಮನಸ್ಸಿನಿಂದ ನೀಡುವ ಯಾವುದೇ ಮೀಸಲಾತಿಯನ್ನು ಒಪ್ಪಲಾರರೆಂದು ಪಾಟೀಲ್ ಮುಖ್ಯಮಂತ್ರಿಗೆ ಸ್ಪಷ್ಟವಾಗಿ ಹೇಳಿದ್ದಾರೆನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ಮರಾಠಾ ಮೀಸಲಾತಿ ಚಳವಳಿಯು ಹಿಂಸಾರೂಪವನ್ನು ತಾಳಿದೆ. ಶಾಸಕರಾದ ಪ್ರಕಾಶ್ ಸೋಲಂಕಿ ಹಾಗೂ ಸಂದೀಪ್ ಕಿಶ್ರಾಸಾಗರ್ ಸೇರಿದಂತೆ ಎನ್ಸಿಪಿ ನಾಯಕರ ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಉದ್ರಿಕ್ತ ಪ್ರತಿಭಟನಕಾರರು ಈ ಇಬ್ಬರು ನಾಯಕರ ನಿವಾಸಗಳ ಹೊರಗೆ ನಿಲ್ಲಿಸಲಾಗಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಮರಾಠಾ ಮೀಸಲಾತಿ ಚಳವಳಿಯು ಉದ್ವಿಗ್ವಾವಸ್ಥೆಯನ್ನು ತಲುಪಿದ್ದರೂ, ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಈವಿಷಯವನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸತ್ ನ ವಿಶೇಷ ಅಧಿವೇಶನಕ್ಕೆ ಕರೆಯಲು ಪ್ರಧಾನಿಗೆ ಮನವಿ ಮಾಡಿ: ಶಿಂಧೆಗೆ ಉದ್ಧವ್ ಆಗ್ರಹ
ಮರಾಠ ಮೀಸಲಾತಿಯ ವಿಷಯಕ್ಕೆ ಸಂಬಂಧಿಸಿ ಸಂಸತ್ನಲ್ಲಿ ವಿಶೇಷ ಅಧಿವೇಶನವನ್ನು ಕರೆಯುವಂತೆಯೂ ಉದ್ಧವ್ ಠಾಕ್ರೆ ಅವರು ಶಿಂಧೆ ಸರಕಾರವನ್ನು ಆಗ್ರಹಿಸಿದ್ದಾರೆ. ‘‘ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಸಿದ್ಧವಾಗಿರುವೆ. ಆದರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಸಂಪುಟ ವಿಸ್ತರಣೆಗಾಗಿ ಆಗಾಗ್ಗೆ ದಿಲ್ಲಿಗೆ ಹೋಗುತ್ತಿದ್ದಾರೆ. ಆದರೆ ಮರಾಠ ಮೀಸಲಾತಿಯ ವಿಷಯವನ್ನು ಯಾಕೆ ಅವರ ಪ್ರಧಾನಿ ಬಳಿ ಪ್ರಸ್ತಾಪಿಸುತ್ತಿಲ್ಲವೆಂದು ಠಾಕ್ರೆ ಪ್ರಶ್ನಿಸಿದ್ದಾರೆ.