×
Ad

ನಿತೀಶ್ ಕುಮಾರ್ ಪದತ್ಯಾಗ: ಬಿಹಾರದಲ್ಲಿ ರಾಜಕೀಯ ಸಂಚಲನ

Update: 2026-03-06 08:30 IST

 ನಿತೀಶ್ ಕುಮಾರ್ | Photo Credit : PTI

 

ಹೊಸದಿಲ್ಲಿ: ಕಳೆದ ಇಪ್ಪತ್ತು ವರ್ಷಗಳಿಂದ ಬಿಹಾರದ ಆಡಳಿತ ಚುಕ್ಕಾಣಿ ಹಿಡಿದಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಾವೇ ಭದ್ರಪಡಿಸಿಕೊಂಡಿದ್ದ ಸ್ಥಾನವನ್ನು ಕೊನೆಗೂ ಬಿಟ್ಟುಕೊಟ್ಟಿರುವುದಕ್ಕೆ ಬೆಂಬಲಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಏತನ್ಮಧ್ಯೆ ವಿರೋಧ ಪಕ್ಷಗಳು ಈ ಅವಕಾಶವನ್ನು ಬಳಸಿಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಹಾರಾಷ್ಟ್ರದಂತೆ ಬಿಹಾರದಲ್ಲೂ ಬಿಜೆಪಿ ತನ್ನ ಮಿತ್ರಪಕ್ಷವನ್ನು ನುಂಗಿರುವ ನಿದರ್ಶನ ಇದಾಗಿದೆ ಎಂದು ಬಣ್ಣಿಸಿವೆ.

ರಾಜಕೀಯ ಕುಶಾಗ್ರಮತಿಯಾಗಿದ್ದ ನಿತೀಶ್, ಅಧಿಕ ಸಂಖ್ಯೆಯ ಶಾಸಕರಿರುವ ಪಕ್ಷದ ಮೈತ್ರಿ ಬೆಳೆಸಿಕೊಂಡು 2005ರಿಂದಲೂ ಸಿಎಂ ಸ್ಥಾನವನ್ನು ಭದ್ರವಾಗಿ ಕಾಪಾಡಿಕೊಂಡು ಬಂದಿದ್ದರು. 2005ರಲ್ಲಿ ಆರ್‌ಜೆಡಿ ಸಾಮ್ರಾಜ್ಯ ಪತನಗೊಳಿಸಿ ಬಹುಮತ ಗಳಿಸಿದರೂ ಬಳಿಕ ಆರ್ಜೆಡಿ ಹಾಗೂ ಕಾಂಗ್ರೆಸ್ ಜತೆಗೇ ಕೈಜೋಡಿಸಿದ್ದರು.

ಬಿಹಾರ ರಾಜಕೀಯದಲ್ಲಿ 'ಪತ್ಲು ರಾಮ್' ಎನಿಸಿಕೊಂಡಿರುವ ನಿತೀಶ್, ಹತ್ತು ವರ್ಷ ಬಳಿಕ ಮಹಾಘಟಬಂಧನ ಮೂಲಕ ಬಿಜೆಪಿಗೆ ಮುಖಭಂಗ ಮಾಡಿದ ಬಳಿಕ ದೆಹಲಿಯಲ್ಲಿ ನರೇಂದ್ರ ಮೋದಿ ಸ್ಥಾನದ ಮೇಲೂ ಕಣ್ಣಿಟ್ಟಿದ್ದರು. 2017ರಲ್ಲಿ ಎನ್ ಡಿಎ ತೆಕ್ಕೆಗೆ ಮರಳಿ, 2022ರಲ್ಲಿ ಮತ್ತೆ ಆರ್‌ಜೆಡಿ-ಕಾಂಗ್ರೆಸ್ ಕೂಟದ ಸಖ್ಯ ಬೆಳೆಸಿದರು. 2025ರ ಜನವರಿಯಲ್ಲಿ ಮತ್ತೆ ಬಿಜೆಪಿ ಮೈತ್ರಿ ಮಾಡಿಕೊಂಡು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

ಉತ್ತರ ಭಾರತದಲ್ಲಿ ಅಪರೂಪದ ಓಬಿಸಿ ನಾಯಕ ಎನಿಸಿಕೊಂಡ ನಿತೀಶ್ ಅಧಿಕಾರಾವಧಿಯುದ್ದಕ್ಕೂ ಸ್ವಚ್ಛ ಆಡಳಿತಕ್ಕೆ ಹೆಸರಾಗಿ, ಯಾವುದೇ ಭಷ್ಟಾಚಾರ ಆರೋಪದ ಕಳಂಕ ಅಂಟಿಸಿಕೊಂಡವರಲ್ಲ. 2025ರ ಚುನಾವಣೆಯಲ್ಲಿ ಭರ್ಜರಿ ಬಹುಮತದ ಮೂಲಕ ಮೋದಿ-ನಿತೀಶ್ ಪಾಲುದಾರಿಕೆ ಶಾಶ್ವತ ಎಂಬ ಸಂದೇಶ ರವಾನಿಸಿದ್ದರು. ಇದೀಗ ನಾಲ್ಕೇ ತಿಂಗಳಲ್ಲಿ ಸಿಎಂ ಸ್ಥಾನ ತೊರೆದು ರಾಜ್ಯಸಭೆಯತ್ತ ಮುಖ ಮಾಡಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News