×
Ad

ಈಜಿಪ್ಟ್ ಅಧ್ಯಕ್ಷ ಜೊತೆ ಪ್ರಧಾನಿ ಮೋದಿ ಮಾತುಕತೆ; ಗಾಝಾ ಪರಿಸ್ಥಿತಿ ಬಗ್ಗೆ ಉಭಯ ನಾಯಕರ ಕಳವಳ

Update: 2023-10-29 22:17 IST

Photo- PTI

ಹೊಸದಿಲ್ಲಿ: ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ರವಿವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಪಶ್ಚಿಮ ಏಶ್ಯದ ಸಂಘರ್ಷ ಪೀಡಿತ ಗಾಝಾ ಪ್ರದೇಶದಲ್ಲಿ ಹದಗೆಡುತ್ತಿರುವ ಭದ್ರತೆ ಹಾಗೂ ಮಾನವೀಯ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ದೂರವಾಣಿ ಮಾತುಕತೆಯ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ‘‘ ಭಯೋತ್ಪಾದನೆ, ಹಿಂಸಾಚಾರ ಹಾಗೂ ನಾಗರಿಕ ಜೀವಗಳ ನಷ್ಟ ಕುರಿತು ಆತಂಕಗಳನ್ನು ಪರಸ್ಪರ ಹಂಚಿಕೊಂಡಿದ್ದೇವೆ’’ ಎಂದು ತಿಳಿಸಿದ್ದಾರೆ.

ಭಯೋತ್ಪಾದನೆ, ಹಿಂಸಾಚಾರ ಹಾಗೂ ನಾಗರಿಕ ಜೀವಗಳ ನಷ್ಟದ ಬಗ್ಗೆ ನಾವು ಆತಂಕಗಳನ್ನು ವ್ಯಕ್ತಪಡಿಸಿದ್ದೇವೆ. ಪಶ್ಚಿಮ ಏಶ್ಯದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ತ್ವರಿತವಾಗಿ ಮರುಸ್ಥಾಪಿಸುವುದು ಹಾಗೂ ಮಾನವೀಯ ನೆರವಿಗೆ ಅನುವು ಮಾಡಿಕೊಡುವ ತುರ್ತು ಅವಶ್ಯಕತೆಯ ಬಗ್ಗೆ ಸಹಮತವನ್ನು ವ್ಯಕ್ತಪಡಿಸಿದೆವು ಎಂದು ಮೋದಿ ಹೇಳಿದರು.

ಈ ಮಧ್ಯೆ ಈಜಿಪ್ಟ್ ಹೇಳಿಕೆಯೊಂದನ್ನು ನೀಡಿದ್ದು, ಅಧ್ಯಕ್ಷ ಅಲ್-ಸಿಸಿ ಅವರು ಪ್ರಧಾನಿ ನರೇಂದ್ರ ಮೋದಿಯವರ ದೂರವಾಣಿ ಕರೆಯನ್ನು ಸ್ವೀಕರಿಸಿ ಮಾತುಕತೆ ನಡೆಸಿದರು. ಗಾಝಾಪಟ್ಟಿಯಲ್ಲಿ ಇಸ್ರೇಲ್‌ನ ಸೇನಾ ಕಾರ್ಯಾಚರಣೆಗಳಿಂಆಗಿ ಉಂಟಾಗಿರುವ ನೂತನ ಬೆಳವಣಿಗೆಗಳ ಬಗ್ಗೆ ಉಭಯ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಭಾರತ ಹಾಗೂ ಈಜಿಪ್ಟ್ ನಡುವಿನ ದ್ವಿಪಕ್ಷೀಯ ಬಾಂಧವ್ಯಗಳು ಹಾಗೂ ವ್ಯೂಹಾತ್ಮಕ ಪಾಲುದಾರಿಕೆಯು ಅಸಾಧಾರಣ ಮಟ್ಟವನ್ನು ತಲುಪಿರುವುದಕ್ಕೆ ಪ್ರಧಾನಿ ಮೋದಿ ಹಾಗೂ ಈಜಿಪ್ಟ್ ಅಧ್ಯಕ್ಷ ಅಲ್‌ಸಿಸಿ ತೃಪ್ತಿ ವ್ಯಕ್ತಪಡಿಸಿದ್ದಾರೆಂದು ಈಜಿಪ್ಟ್ ಅಧ್ಯಕ್ಷರ ವಕ್ತಾರ ಅಹ್ಮದ್ ಫಾಹಮಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News