×
Ad

ಯುವಜನರು ರೀಲ್ಸ್‌ಗಳನ್ನು ಮಾಡುವುದರಲ್ಲಿ ನಿರತರಾಗಬೇಕೆಂಬುದು ಪ್ರಧಾನಿ ಮೋದಿಯ ಬಯಕೆ : ರಾಹುಲ್ ಗಾಂಧಿ ಆಕ್ರೋಶ

Update: 2025-11-04 21:23 IST

Photo | PTI

ಔರಂಗಾಬಾದ್‌, ನ. 4: ಯುವಜನರು ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್‌ಗಳನ್ನು ಮಾಡುವುದರಲ್ಲಿ ನಿರತರಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಾರೆ. ಇದರಿಂದ ಯುವಜನರು ಶಿಕ್ಷಣ ಮತ್ತು ಉದ್ಯೋಗದಂತಹ ಪ್ರಮುಖ ವಿಷಯಗಳ ಕುರಿತು ಪ್ರಶ್ನೆಗಳನ್ನು ಎತ್ತುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.

ಬಿಹಾರದ ಔರಂಗಾಬಾದ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಸಾಮಾಜಿಕ ಮಾಧ್ಯಮದ ವ್ಯಸನವನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ಪ್ರಧಾನಿ ಅವರನ್ನು ತರಾಟೆಗೆ ತೆಗೆದುಕೊಂಡರು.

‘‘ನೀವು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ರೀಲ್ಸ್‌ನ ವ್ಯಸನಿಯಾಗಬೇಕು ಎಂದು ಮೋದಿ ಬಯಸುತ್ತಾರೆ. ಇದು 21ನೇ ಶತಮಾನದ ವ್ಯಸನವಾಗಿದೆ. ಅವರು ಈ ಸನ್ನಿವೇಶವನ್ನು ಬಯಸುತ್ತಾರೆ. ಯಾಕೆಂದರೆ, ಇದರಿಂದ ನೀವು ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಕ್ಷೇತ್ರಗಳ ಸಮಸ್ಯೆಗಳಿಗೆ ಸರಕಾರವನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ’’ ಎಂದು ಅವರು ಹೇಳಿದರು.

ಬಿಹಾರ ವಿಧಾನ ಸಭೆ ಚುನಾವಣೆಯಲ್ಲಿ ಎನ್‌ಡಿಎ ಜಯ ಗಳಿಸುವುದಿಲ್ಲ ಎಂದು ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿದಿದೆ. ಆದುದರಿಂದ ಅವರು ಮತಗಳ್ಳತನದಲ್ಲಿ ತೊಡಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಬಿಹಾರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಜಯ ಗಳಿಸಿ ಸರಕಾರ ರಚನೆಯಾದರೆ, ಅದು ಹಿಂದುಳಿದವರ, ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟವರ ಹಾಗೂ ದಲಿತರ ಸರಕಾರವಾಗಲಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿರುವ ಎನ್‌ಡಿಎ ಸರಕಾರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ ಯುವ ಜನರನ್ನು ಕಾರ್ಮಿಕರನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News