×
Ad

ಬಿಹಾರ: ಜಾತಿ ಕೇಳಿ, ಉಗುಳು ನೆಕ್ಕಿಸಿದ ಪೊಲೀಸ್ ಅಧಿಕಾರಿ

Update: 2025-07-02 20:43 IST

ಪ್ರವೀಣ್ ಚಂದ್ರ ದಿವಾಕರ್ | PC : NDTV

ಶೇಖ್‌ಪುರ (ಬಿಹಾರ): ಪೊಲೀಸ್ ಅಧಿಕಾರಿಯೊಬ್ಬ ಇ-ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿದ ಹಾಗೂ ಆತನ ಜಾತಿ ಕೇಳಿದ ಬಳಿಕ ಉಗುಳು ನೆಕ್ಕಿಸಿದ ಘಟನೆ ಬಿಹಾರದಲ್ಲಿ ಗುರುವಾರ ನಡೆದಿದೆ.

ಚಾಲಕ ಪ್ರದುಮಾನ್ ಕುಮಾರ್ ಪ್ರಯಾಣಿಕರನ್ನು ಶೇಖ್‌ಪುರ ಜಿಲ್ಲೆಯ ಮೆಹುಸ್ ಗ್ರಾಮದಲ್ಲಿ ಬಿಟ್ಟ ಬಳಿಕ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘‘ನಾನು ಇಂಟರ್‌ಸೆಕ್ಷನ್‌ಲ್ಲಿ ಇದ್ದಾಗ ಮೆಹುಸ್ ಪೊಲೀಸ್ ಠಾಣೆಯ ಉಸ್ತುವಾರಿ ಪ್ರವೀಣ್ ಚಂದ್ರ ದಿವಾಕರ್ ಅವರು ನನ್ನ ರಿಕ್ಷಾವನ್ನು ತಡೆದರು ಹಾಗೂ ನಿಂದಿಸಲು ಆರಂಭಿಸಿದರು’’ ಎಂದು ಪ್ರದುಮಾನ್ ಕುಮಾರ್ ತಿಳಿಸಿದ್ದಾರೆ.

‘‘ದಿವಾಕರ್ ಅವರು ಬೈಕ್ ಚಲಾಯಿಸುತ್ತಿದ್ದರು. ಸಾಮಾನ್ಯ ಉಡುಪು ಧರಿಸಿದ್ದರು. ಆದುದರಿಂದ ನನಗೆ ಆರಂಭದಲ್ಲಿ ಅವರನ್ನು ಪೊಲೀಸ್ ಅಧಿಕಾರಿ ಎಂದು ಗುರುತು ಹಿಡಿಯಲು ಸಾಧ್ಯವಾಗಲಿಲ್ಲ. ವಾಗ್ವಾದದ ಬಳಿಕ ಅವರು ಪೊಲೀಸ್ ವಾಹನಕ್ಕೆ ಕರೆ ನೀಡಿದರು ಹಾಗೂ ನನ್ನನ್ನು ಬಂಧಿಸಿದರು’’ ಎಂದು ಅವರು ಆರೋಪಿಸಿದ್ದಾರೆ.

‘‘ನನ್ನನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗುವ ಮುನ್ನ ದಿವಾಕರ್ ನನಗೆ ರಸ್ತೆಯಲ್ಲೇ ಲಾಠಿಯಲ್ಲಿ ಕನಿಷ್ಠ 50ರಿಂದ 60 ಬಾರಿ ಥಳಿಸಿದ್ದಾರೆ. ಇದರಿಂದ ನಾನು ಗಾಯಗೊಂಡೆ. ನಾನು ಮದ್ಯಪಾನ ಮಾಡಿರುವುದಾಗಿ ಕೂಡ ಅವರು ಆರೋಪಿಸಿದರು. ಆದರೆ, ಯಾವುದೇ ವಾಸನೆ ಬರದೇ ಇದ್ದಾಗ, ಅವರು ನನಗೆ ಥಳಿಸಿದರು ಹಾಗೂ ಪೊಲೀಸ್ ಠಾಣೆಗೆ ಕರೆದೊಯ್ದರು’’ ಎಂದು ಕುಮಾರ್ ಹೇಳಿದ್ದಾರೆ.

ಪೊಲೀಸ್ ಠಾಣೆಗೆ ತಲುಪಿದ ಬಳಿಕ ದಿವಾಕರ್ ಅವರು ತನ್ನನ್ನು ನಿಂದಿಸಿದರು ಹಾಗೂ ಮತ್ತಷ್ಟು ಥಳಿಸಿದರು. ಅನಂತರ ತನ್ನ ಜಾತಿ ಕೇಳಿದರು. ತಾನು ಬ್ರಾಹ್ಮಣ ಎಂದು ಹೇಳಿದ. ಅದಕ್ಕೆ ದಿವಾಕರ್, ‘‘ನನಗೆ ಬ್ರಾಹ್ಮಣ ಸಮುದಾಯದ ಜನರನ್ನು ನೋಡಲು ಕೂಡ ಇಷ್ಟಪಡುವುದಿಲ್ಲ’’ ಎಂದು ಹೇಳಿದರು. ಅನಂತರ ಅವರು ನೆಲದಲ್ಲಿ ಉಗುಳಿದರು ಹಾಗೂ ಅದನ್ನು ನೆಕ್ಕಿಸಿದರು ಎಂದು ಕುಮಾರ್ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News