“ಇದು Ai ವೀಡಿಯೊ ಅಲ್ಲ”: ಇಂಗ್ಲೀಷ್‌ನಲ್ಲೂ ಬಂತು ರವೀಶ್ ಕುಮಾರ್ ವಿಡಿಯೋ
ರವೀಶ್ ಕುಮಾರ್ | Photo Credit : youtube.com
“ನಾನು ರವೀಶ್ ಕುಮಾರ್. ನಾನೇ ಮಾತನಾಡುತ್ತಿದ್ದೇನೆ. ಇದು Ai ವೀಡಿಯೊ ಅಲ್ಲ. ಇದು ನಿಜವಾದ ವೀಡಿಯೊ…” ಎಂದು ಆರಂಭವಾಗುವ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಅವರ ವೀಡಿಯೊ ಶುಕ್ರವಾರ ಮಧ್ಯಾಹ್ನ ಬಿಡುಗಡೆಯಾಯಿತು. ಈ ವೀಡಿಯೊದ ವಿಶೇಷವೆಂದರೆ, ಅದು ಹಿಂದಿ ಭಾಷೆಯಲ್ಲಿ ಅಲ್ಲ; ಇದೇ ಮೊದಲ ಬಾರಿ ರವೀಶ್ ಕುಮಾರ್ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದ್ದಾರೆ.
ಯೂಟ್ಯೂಬ್‌ನಲ್ಲಿನ ಪತ್ರಕರ್ತರ ಪೈಕಿ ಅತ್ಯಂತ ಜನಪ್ರಿಯರಾಗಿರುವ ರವೀಶ್ ಕುಮಾರ್, ದಶಕಗಳ ಕಾಲ ಹಿಂದಿ ಪತ್ರಕರ್ತರಾಗಿ ದೇಶಾದ್ಯಂತ ಹಾಗೂ ವಿದೇಶಗಳಲ್ಲೂ ವ್ಯಾಪಕ ಜನಮನ್ನಣೆ ಗಳಿಸಿದ್ದಾರೆ. NDTVಗೆ ರಾಜೀನಾಮೆ ನೀಡಿದ ಬಳಿಕ ಅವರು ಯೂಟ್ಯೂಬ್ ಮೂಲಕ ಜನರನ್ನು ತಲುಪುತ್ತಿದ್ದಾರೆ.
ರವೀಶ್ ಕುಮಾರ್ ಅವರ ಅಧಿಕೃತ ಯೂಟ್ಯೂಬ್ ಚಾನಲ್ Ravish Kumar Officialಗೆ ಪ್ರಸ್ತುತ ಒಂದು ಕೋಟಿ ನಲವತ್ತೆರಡು ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳಿದ್ದಾರೆ. ವಿಶಿಷ್ಟ ಶೈಲಿಯ ವಿಶ್ಲೇಷಣೆ ಹಾಗೂ ನಿರೂಪಣೆಯೊಂದಿಗೆ, ಹಿಂದಿ ಭಾಷೆಯನ್ನು ಬಳಸುವ ಅವರ ಮಾತಿನ ಶೈಲಿ ಅಪಾರ ಜನಪ್ರಿಯತೆ ಪಡೆದಿದೆ. ಹಿಂದಿಯಲ್ಲಿ ಅವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ.
ಇಂಗ್ಲೀಷ್‌ನಲ್ಲಿ ಬಿಡುಗಡೆಯಾದ ಈ ವೀಡಿಯೊದಲ್ಲಿ ಅವರು ಯಾವುದೇ ನಿರ್ದಿಷ್ಟ ರಾಜಕೀಯ ಅಥವಾ ಸಾಮಾಜಿಕ ವಿಷಯದ ವಿಶ್ಲೇಷಣೆ ಮಾಡಿಲ್ಲ. ಬದಲಾಗಿ, ಇಂಗ್ಲೀಷ್‌ನಲ್ಲಿ ಮಾತನಾಡಬೇಕೆಂಬ ವೀಕ್ಷಕರ ಬೇಡಿಕೆ, ಆ ಭಾಷೆಯಲ್ಲಿ ಮಾತನಾಡುವಾಗ ಎದುರಾಗುವ ಸವಾಲುಗಳು ಹಾಗೂ ಅದಕ್ಕಾಗಿ ಅಗತ್ಯವಿರುವ ತಯಾರಿ ಕುರಿತು ಮಾತನಾಡಿದ್ದಾರೆ. ಇಂಗ್ಲೀಷ್‌ನಲ್ಲಿ ಮಾತನಾಡುವ ತಮ್ಮ ಶೈಲಿ ವೀಕ್ಷಕರಿಗೆ ಇಷ್ಟವಾಗುತ್ತದೆಯೇ ಎಂಬುದನ್ನೂ ಅವರು ಪ್ರಶ್ನಿಸಿದ್ದಾರೆ.
NDTV ಹಿಂದಿ ಚಾನಲ್ ಮೂಲಕ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡ ರವೀಶ್ ಕುಮಾರ್, ಆರಂಭದಲ್ಲಿ ತಮ್ಮ ವಿಶಿಷ್ಟ ವರದಿಗಾರಿಕೆಯಿಂದ, ನಂತರ ವಿಶ್ಲೇಷಣಾ ಕಾರ್ಯಕ್ರಮಗಳ ಮೂಲಕ ವ್ಯಾಪಕ ಜನಪ್ರಿಯತೆ ಗಳಿಸಿದ್ದರು. ಅವರ ಪತ್ರಿಕೋದ್ಯಮ ಸೇವೆಗೆ ಪ್ರತಿಷ್ಠಿತ ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ ಲಭಿಸಿದೆ.
ಇಂಗ್ಲೀಷ್‌ನಲ್ಲಿ ವೀಡಿಯೊ ಪ್ರಕಟಿಸಿರುವುದು, ರವೀಶ್ ಕುಮಾರ್ ಅವರ ಪತ್ರಿಕೋದ್ಯಮ ವೃತ್ತಿಯಲ್ಲಿನ ಹೊಸ ಪ್ರಯೋಗವಾಗಿ ಗಮನ ಸೆಳೆದಿದೆ.