ಖ್ಯಾತ ಉರ್ದು ವಿದ್ವಾಂಸ ಸಿ.ಎಂ. ನಯೀಮ್ ನಿಧನ
ಪ್ರೊ. ಚೌಧರಿ ಮುಹಮ್ಮದ್ ನಯೀಮ್ (Photo: X/@microMAF)
ಹೊಸದಿಲ್ಲಿ: ಖ್ಯಾತ ಉರ್ದು ವಿದ್ವಾಂಸ ಮತ್ತು ದಕ್ಷಿಣ ಏಷ್ಯಾ ಕುರಿತು ಅಧ್ಯಯನ ಮಾಡಿರುವ ತಜ್ಞ ಪ್ರೊ. ಚೌಧರಿ ಮುಹಮ್ಮದ್ ನಯೀಮ್ ಅವರು 89ನೇ ವಯಸ್ಸಿನಲ್ಲಿ ನಿಧನರಾದರು.
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಜನಿಸಿದ ನಯೀಮ್ ಅವರು ಉರ್ದು ಸಾಹಿತ್ಯ, ಸಂಸ್ಕೃತಿ ಮತ್ತು ಭಾಷಾ ರಾಜಕೀಯ ಕ್ಷೇತ್ರದಲ್ಲಿ ವಿಶೇಷ ದನಿಯಾಗಿ ಗುರುತಿಸಿಕೊಂಡಿದ್ದರು
1955 ರಲ್ಲಿ ಲಕ್ನೋ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಅವರು, ಬಳಿಕ ಅಮೆರಿಕಗೆ ತೆರಳಿ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮುಂದುವರೆಸಿದರು. ಬಳಿಕ ಚಿಕಾಗೋ ವಿಶ್ವವಿದ್ಯಾಲಯದಲ್ಲಿ 1961ರಿಂದ 2001ರ ವರೆಗೆ ಸೇವೆ ಸಲ್ಲಿಸಿದರು. ಈ ವೇಳೆ ದಕ್ಷಿಣ ಏಷ್ಯಾ ಭಾಷೆಗಳು ಮತ್ತು ನಾಗರಿಕತೆಗಳ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಅವರು 1985ರಿಂದ 1991ರ ವರೆಗೆ ಆ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಅವರು ಶೈಕ್ಷಣಿಕ ಕ್ಷೇತ್ರವನ್ನಷ್ಟೆ ಅಲ್ಲದೆ, ಹಲವು ಶ್ರೇಷ್ಠ ಜರ್ನಲ್‌ಗಳಿಗೆ ಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತ ಉಪಖಂಡದಲ್ಲಿ ಉರ್ದು ಭಾಷೆಯ ಸ್ಥಿತಿ ಮತ್ತು ಅವನತಿ ಕುರಿತಾಗಿ ಅವರು ನೀಡಿದ ವಿಶ್ಲೇಷಣೆಗಳು ವ್ಯಾಪಕವಾಗಿ ಗಮನಸೆಳೆದಿದ್ದವು. ಭಾಷಾ ರಾಜಕೀಯ ಹಾಗೂ ಫೆಲೆಸ್ತೀನ್ ಗೆ ಸಂಬಂಧಿಸಿದಂತೆ ಅವರ ಆಳವಾದ ಚಿಂತನೆಗಳು ಬಹುಮಾನ್ಯವಾಗಿದ್ದು, 1989 ರಲ್ಲಿ ಫೆಲೆಸ್ತೀನ್ ಗೆ ಭೇಟಿ ನಂತರ ಅವರು ಬರೆದ ಲೇಖನಗಳು ಬಹಳಷ್ಟು ಪ್ರಶಂಸೆ ಪಡೆದಿದ್ದವು.
ನಯೀಮ್ ಅವರು ನ್ಯೂಯಾರ್ಕ್‌ನ ಏಷ್ಯಾ ಸೊಸೈಟಿಯ ಏಷ್ಯನ್ ಸಾಹಿತ್ಯ ಕಾರ್ಯಕ್ರಮದ ಸಲಹೆಗಾರರಾಗಿ, ಪ್ರಿನ್ಸ್‌ಟನ್ ಯೂನಿವರ್ಸಿಟಿ ಪ್ರೆಸ್ ಮತ್ತು ಚಿಕಾಗೋ ವಿಶ್ವವಿದ್ಯಾಲಯದ ಪ್ರೆಸ್ ಮುಂತಾದ ಪ್ರಕಟಣಾ ಸಂಸ್ಥೆಗಳಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಪಾಕಿಸ್ತಾನದಲ್ಲಿನ ಬರ್ಕ್ಲಿ ಉರ್ದು ಭಾಷಾ ಕಾರ್ಯಕ್ರಮ ಹಾಗೂ ಅಮೆರಿಕದ ಅಸೋಸಿಯೇಷನ್ ಫಾರ್ ಏಷ್ಯನ್ ಸ್ಟಡೀಸ್‌ನೊಂದಿಗೆ ಅವರು ನಿಕಟವಾಗಿ ಸಂಬಂಧ ಹೊಂದಿದ್ದರು.
2023 ರಲ್ಲಿ ಅವರು ಪ್ರಕಟಿಸಿದ ‘ಉರ್ದು ಕ್ರೈಮ್ ಫಿಕ್ಷನ್, 1890–1950: ಆನ್ ಇನ್‌ಫಾರ್ಮಲ್ ಹಿಸ್ಟರಿ’ ಎಂಬ ಕೃತಿ, ಉರ್ದು ಸಾಹಿತ್ಯದ ಅಪರೂಪದ ಶೈಲಿಯನ್ನು ಜಗತ್ತಿಗೆ ತೆರೆದಿಟ್ಟಿತು.
ನಯೀಮ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶ-ವಿದೇಶಗಳಿಂದ ವಿದ್ಯಾರ್ಥಿಗಳು, ವಿದ್ವಾಂಸರು ಮತ್ತು ಅಭಿಮಾನಿಗಳು ಶೋಕಸಂದೇಶ ವ್ಯಕ್ತಪಡಿಸಿದ್ದಾರೆ.