ತೆಲಂಗಾಣ | ‘ಕಾಂಗ್ರೆಸ್ ಇಲ್ಲದೆ ನೀವು ಏನೂ ಅಲ್ಲ’: ಮುಸ್ಲಿಂ ಸಮುದಾಯದ ಬಗ್ಗೆ ಸಿಎಂ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ
ಎ. ರೇವಂತ್ ರೆಡ್ಡಿ | PC : PTI
ಹೈದರಾಬಾದ್, ನ.5: “ಕಾಂಗ್ರೆಸ್ ಇದ್ದರೆ ಮಾತ್ರ ಮುಸ್ಲಿಮರು ಇದ್ದಾರೆ... ಕಾಂಗ್ರೆಸ್ ಇಲ್ಲದಿದ್ದರೆ ನೀವು ಏನೂ ಅಲ್ಲ” ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಜುಬಿಲಿ ಹಿಲ್ಸ್ ವಿಧಾನಸಭಾ ಉಪಚುನಾವಣೆಯ ಮುನ್ನ ನಡೆದ ಮುಸ್ಲಿಂ ಮತದಾರರ ಸಭೆಯಲ್ಲಿ ರೇವಂತ್ ರೆಡ್ಡಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮುಸ್ಲಿಂ ಸಮುದಾಯದ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಬಿಜೆಪಿ, ಬಿಆರ್‌ಎಸ್ ಹಾಗೂ ವಿಎಚ್‌ಪಿ ಪಕ್ಷಗಳು ಈ ಹೇಳಿಕೆಯನ್ನು ಖಂಡಿಸಿದೆ. “ಕೋಮುವಾದಿ ರಾಜಕಾರಣದ ನವ ರೂಪ” ಎಂದು ಟೀಕಿಸಿವೆ.
ತಮ್ಮ ಭಾಷಣದಲ್ಲಿ ಸಿಎಂ ರೇವಂತ್ ರೆಡ್ಡಿ ಅವರು ಕಾಂಗ್ರೆಸ್ ಸರ್ಕಾರ ಕೈಗೊಂಡ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳು ಮುಸ್ಲಿಮರಿಗೆ ಸಹಕಾರಿಯಾಗಿದೆ. ಹಿಂದಿನ ಬಿಆರ್‌ಎಸ್ ಸರ್ಕಾರವು ಮುಸ್ಲಿಂ ಸಮುದಾಯದ ಹಿತಾಸಕ್ತಿಯನ್ನು ನಿರ್ಲಕ್ಷಿಸಿದೆ ಎಂದು ಟೀಕಿಸಿದರು.
ಆದರೆ ರೇವಂತ್ ರೆಡ್ಡಿ ಅವರ “ಕಾಂಗ್ರೆಸ್ ಇಲ್ಲದೆ ಮುಸ್ಲಿಮರು ಏನೂ ಅಲ್ಲ” ಎಂಬ ಹೇಳಿಕೆ ಬಿಜೆಪಿ ನಾಯಕರ ಟೀಕೆಗೆ ಗುರಿಯಾಗಿದೆ.
“ದಶಕಗಳಿಂದ ಕಾಂಗ್ರೆಸ್ ಸಮುದಾಯದ ವಿಭಜನೆಯ ರಾಜಕಾರಣ ನಡೆಸುತ್ತಿದೆ. ಈಗ ಸಿಎಂ ರೇವಂತ್ ರೆಡ್ಡಿಯವರ ಮಾತು ಅದಕ್ಕೆ ಸಾಕ್ಷಿ. ಜುಬಿಲಿ ಹಿಲ್ಸ್‌ನ ಮತದಾರರು ನವೆಂಬರ್ 11ರಂದು ಮತದಾನದ ಮೂಲಕ ಉತ್ತರ ನೀಡಲಿದ್ದಾರೆ” ಎಂದು
ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್. ರಾಮಚಂದರ್ ರಾವ್ ಹೇಳಿದರು.
ಬಿಜೆಪಿ ವಕ್ತಾರ ವಿನೋದ್ ಬನ್ಸಾಲ್, “ಮುಖ್ಯಮಂತ್ರಿ ಮತಗಳಿಗಾಗಿ ಮುಸ್ಲಿಮರನ್ನು ಹೆದರಿಸುತ್ತಿದ್ದಾರೆ. ಕಾಂಗ್ರೆಸ್ ಯಾವಾಗಲೂ ಮುಸ್ಲಿಂ ಸಮುದಾಯವನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿದೆ, ಆದರೆ ಅವರ ಅಭಿವೃದ್ಧಿಗೆ ಯಾವುದೇ ಪ್ರಯತ್ನ ಮಾಡಿಲ್ಲ” ಎಂದು ಆರೋಪಿಸಿದರು.
ವಿಎಚ್‌ಪಿ ನಾಯಕರು ಈ ಹೇಳಿಕೆಯನ್ನು “ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸುವ ರಾಜಕೀಯದ ತಂತ್ರ” ಎಂದು ಟೀಕಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಬಿಆರ್‌ಎಸ್ ಕಾರ್ಯಕಾರಿ ಅಧ್ಯಕ್ಷ ಕೆ.ಟಿ. ರಾಮರಾವ್, “ಕಾಂಗ್ರೆಸ್ ಹುಟ್ಟುವ ಮುನ್ನ ಮುಸ್ಲಿಮರು ಇದ್ದರು. ನಾಳೆ ಕಾಂಗ್ರೆಸ್ ಕಣ್ಮರೆಯಾದರೂ ಮುಸ್ಲಿಮರು ಉಳಿಯುತ್ತಾರೆ. ಕಾಂಗ್ರೆಸ್ ನಾಯಕರು ಈ ಭ್ರಮೆಯಿಂದ ಹೊರಬರಬೇಕು” ಎಂದು ವ್ಯಂಗ್ಯವಾಡಿದ್ದಾರೆ.
ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 1.3 ಲಕ್ಷ ಮುಸ್ಲಿಂ ಮತದಾರರಿದ್ದು, ಈ ಉಪಚುನಾವಣೆಯನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಯ ಹೋರಾಟವೆಂದು ಪರಿಗಣಿಸಿದೆ. ಬಿಆರ್‌ಎಸ್ ನ ಮೃತ ಶಾಸಕ ಮಾಗಂಟಿ ಗೋಪಿನಾಥ್ ಅವರ ಪತ್ನಿ ಮಾಗಂಟಿ ಸುನಿತಾ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ಬಿಜೆಪಿ ತನ್ನ ಹಿಂದಿನ ಅಭ್ಯರ್ಥಿ ಲಂಕಲ ದೀಪಕ್ ರೆಡ್ಡಿ ಅವರನ್ನು ಮತ್ತೆ ಕಣಕ್ಕಿಳಿಸಿದೆ.
ಉಪಚುನಾವಣೆಯು ನ. 11 ರಂದು ನಡೆಯಲಿದೆ.