×
Ad

ರೈಲಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

Update: 2024-04-02 07:46 IST

ಮುಂಬೈ:  ರೈಲಿನಲ್ಲಿ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸಹ ಪ್ರಯಾಣಿಕರು ವ್ಯಕ್ತಿಯೊಬ್ಬನನ್ನು ಚೆನ್ನಾಗಿ ಥಳಿಸಿ ಪೊಲೀಸ್ ವಶಕ್ಕೆ ನೀಡಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಈ ಘಟನೆ ಶನಿವಾರ ರಾತ್ರಿ ದಾದರ್ ಮತ್ತು ಅಂಧೇರಿ ನಡುವಿನ ಪಶ್ಚಿಮ ಲೇನ್ ನಲ್ಲಿ ನಡೆದಿದೆ. ಆರೋಪಿಯನ್ನು ಕಾಮಟಿಪುರ ನಿವಾಸಿ ನೂರ್ (34) ಎಂದು ಗುರುತಿಸಲಾಗಿದೆ ಎಂದು ಬಾಂದ್ರಾ ಪೊಲೀಸ್ ಠಾಣೆ ಅಧಿಕಾರಿಗಳು ಹೇಳಿದ್ದಾರೆ.

"ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ. ತಂದೆಯ ಜತೆಗಿದ್ದ ಬಾಲಕಿಯನ್ನು ನೂರ್ ಅಸಭ್ಯವಾಗಿ ಸ್ಪರ್ಶಿಸಿದ್ದ ಎಂದು ಆಪಾದಿಸಲಾಗಿದೆ. ಬಾಲಕಿ ಕೂಗಿಕೊಂಡಾಗ ಸಹ ಪ್ರಯಾಣಿಕರು ಆರೋಪಿಯನ್ನು ಹಿಡಿದು ಥಳಿಸಿ ಅಂಧೇರಿ ರೈಲು ನಿಲ್ದಾಣದ ಪೊಲೀಸರ ವಶಕ್ಕೆ ಒಪ್ಪಿಸಿದರು" ಎಂದು ವಿವರಿಸಿದ್ದಾರೆ.

ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂಥದ್ದೇ ಅಪರಾಧಕ್ಕೆ ಮೊದಲು ಕೂಡಾ ಈತನನ್ನು ಬಂಧಿಸಲಾಗಿತ್ತು. ಈತ ಮಾದಕ ವಸ್ತು ವ್ಯಸನಿ ಎನ್ನಲಾಗಿದೆ. ಪರೇಲ್ ನಲ್ಲಿರುವ ಆಸ್ಪತ್ರೆಗೆ ಹೋಗುವ ಸಲುವಾಗಿ ಬಾಲಕಿ ದಾದರ್-ಬೊರಿವಿಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News