ಪೂರ್ವ ಲಡಾಖ್ ನಲ್ಲಿ ಎಲ್ಎಸಿಯಲ್ಲಿಯ ಸ್ಥಿತಿ: ಭಾರತ-ಚೀನಾ ನಡುವೆ ಮಿಲಿಟರಿ ಮಾತುಕತೆ
Photo Credit : PTI
ಹೊಸದಿಲ್ಲಿ,ಅ.29: ಪೂರ್ವ ಲಡಾಖ್ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಶಾಂತಿ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳಲು ಗಮನವನ್ನು ಕೇಂದ್ರೀಕರಿಸಿ ಭಾರತ ಮತ್ತು ಚೀನಿ ಸೇನೆಗಳು ಹೊಸ ಸುತ್ತಿನ ಉನ್ನತ ಮಟ್ಟದ ಮಿಲಿಟರಿ ಮಾತುಕತೆಗಳನ್ನು ನಡೆಸಿವೆ.
ಚೀನಾದ ವಿದೇಶಾಂಗ ಸಚಿವಾಲಯವು ಬುಧವಾರ ಇದನ್ನು ದೃಢಪಡಿಸಿದೆ.
ಅ.25ರಂದು ಮುಂಚೂಣಿಯ ಭಾರತೀಯ ಗಡಿ ಪ್ರದೇಶದಲ್ಲಿಯ ಮೊಲ್ಡೊ-ಚುಶುಲ್ ಗಡಿ ಸಭೆ ತಾಣದಲ್ಲಿ 23ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳು ನಡೆದಿವೆ. ಚೀನಾ-ಭಾರತ ಗಡಿಯ ಪಶ್ಚಿಮ ವಿಭಾಗದ ನಿರ್ವಹಣೆ ಕುರಿತು ಉಭಯ ಕಡೆಗಳು ಸಕ್ರಿಯ ಮತ್ತು ಆಳವಾದ ಸಂವಹನದಲ್ಲಿ ತೊಡಗಿಕೊಂಡಿದ್ದವು ಎಂದು ಚೀನಿ ವಿದೇಶಾಂಗ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಈ ಸಭೆಯ ಬಗ್ಗೆ ಭಾರತೀಯ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ನಿರ್ಧರಿಸಿರುವಂತೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಹನ ಮತ್ತು ಸಂವಾದವನ್ನು ಕಾಯ್ದುಕೊಳ್ಳಲು ಹಾಗೂ ಚೀನಾ-ಭಾರತ ಗಡಿ ಪ್ರದೇಶಗಳಲ್ಲಿ ಜಂಟಿಯಾಗಿ ಶಾಂತಿ ಮತ್ತು ನೆಮ್ಮದಿ ಕಾಪಾಡಲು ಉಭಯ ಕಡೆಗಳು ನಿರ್ಧರಿಸಿವೆ ಎಂದು ಚೀನಿ ಹೇಳಿಕೆಯು ತಿಳಿಸಿದೆ.