×
Ad

ಜಿ20 ಶೃಂಗಸಭೆ ಹಿನ್ನೆಲೆ: ದಿಲ್ಲಿಯ ಕೊಳೆಗೇರಿಗಳನ್ನು ಮುಚ್ಚಲು ಹಸಿರು ಹೊದಿಕೆ; ವಿಡಿಯೋ ವೈರಲ್‌

Update: 2023-09-07 13:35 IST

Photo | Screengrab: Twitter

ಹೊಸದಿಲ್ಲಿ: ಜಿ20 ಶೃಂಗಸಭೆಗಾಗಿ ಆಗಮಿಸುವ ಹಲವು ದೇಶಗಳ ಮುಖ್ಯಸ್ಥರನ್ನು ಸ್ವಾಗತಿಸಲು ರಾಷ್ಟ್ರ ರಾಜಧಾನಿ ಹೊಸದಿಲ್ಲಿಯನ್ನು ಶೃಂಗರಿಸಲಾಗಿದೆ. ಬಣ್ಣಬಣ್ಣದ ದೀಪಗಳು, ಅಲಂಕಾರಗಳು, ಕಾರಂಜಿಗಳು ಮತ್ತು ಪುಷ್ಪಾಲಂಕಾರಗಳು ನೋಡುಗರ ಕಣ್ಮನ ಸೆಳೆಯುತ್ತಿದೆ. ಇವೆಲ್ಲವುಗಳ ನಡುವೆ ರಾಜಧಾನಿಯ ಕೊಳೆಗೇರಿ ಪ್ರದೇಶಗಳನ್ನು ಮರೆಮಾಚಲು ಹಲವೆಡೆ ಹಸಿರು ಹೊದಿಕೆಗಳನ್ನೂ ಹಾಕಲಾಗಿದೆ. ಈ ಕುರಿತಾದ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ರಾಜಧಾನಿಯ ಸೇತುವೆಗಳು ಮತ್ತು ಫ್ಲೈಓವರ್‌ಗಳ ಅಡಿಯಲ್ಲಿ ವಾಸಿಸುವ ನಿರ್ವಸಿತರಿಗೆ ಅಲ್ಲಿಂದ ಬೇರೆ ಕಡೆ ತೆರಳುವಂತೆಯೂ ಸೂಚಿಸಲಾಗಿದೆ ಎಂದು timesnownews.com ವರದಿ ಮಾಡಿದೆ.

ರೈತ ನಾಯಕ ಹಾಗೂ ಭಾರತೀಯ ಕಿಸಾನ್‌ ಯೂನಿಯನ್‌ ಅಧ್ಯಕ್ಷ ಸುರ್ಜೀತ್‌ ಸಿಂಗ್‌ ಫೂಲ್‌ ಈ ಕುರಿತ ವೀಡಿಯೋಗಳನ್ನು ಶೇರ್‌ ಮಾಡಿದ್ದಾರೆ. “ಜಿ20 ಪ್ರತಿನಿಧಿಗಳನ್ನು ದಿಲ್ಲಿ ಸ್ವಾಗತಿಸುತ್ತದೆ,” “ಇಂಡಿಯಾದ ಅಧ್ಯಕ್ಷತೆಯ ಸಮಯ” ಎಂಬ ಬ್ಯಾನರ್‌ಗಳನ್ನೂ ಕಾಣಬಹುದಾಗಿದೆ.

ಈ ಕುರಿತು ಪೋಸ್ಟ್‌ ಒಂದನ್ನೂ ಮಾಡಿರುವ ಸಿಂಗ್‌ “ಗರೀಬಿ ಹಠಾವೋದಿಂದ ಗರೀಬಿ ಚುಪಾವೋ ತನಕ. ಈ ಬಡವರ ಪರ ಸರ್ಕಾರವು ದಿಲ್ಲಿಯ ಕೊಳೆಗೇರಿಗಳನ್ನು ಜಿ20 ಶೃಂಗಸಭೆಗಾಗಿ ಮರೆಮಾಚುತ್ತಿದೆ ಹಾಗೂ ಆರ್ಥಿಕ ಅಸಮಾನತೆಗಳನ್ನು ಮರೆಮಾಚಲು ಹತಾಶ ಯತ್ನ ನಡೆಸಿದೆ. ಬಡತನ ನಿರ್ಮೂಲನೆ ಮಾಡಲಾಗದೇ ಇದ್ದರೆ ಅದನ್ನು ಮರೆಮಾಚಿ, ಮದರ್‌ ಆಫ್‌ ಡೆಮಾಕ್ರೆಸಿ” ಎಂದು ಅವರು ಬರೆದಿದ್ದಾರೆ.

18ನೇ ಜಿ20 ಶೃಂಗಸಭೆ ರಾಜಧಾನಿಯ ಪ್ರಗತಿ ಮೈದಾನದಲ್ಲಿರುವ ಭಾರತ್‌ ಮಂಟಪಂನಲ್ಲಿ ಸೆಪ್ಟೆಂಬರ್‌ 9 ಮತ್ತು 10ರಂದು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News