×
Ad

‘‘ಸಸ್ಯಹಾರಿಯಾಗಿರುವುದರಿಂದ ಚಮಚ ಕೊಂಡೊಯ್ಯುತ್ತೇನೆ’’: ವಿವಾದಕ್ಕೀಡಾದ ಸುಧಾಮೂರ್ತಿ ಹೇಳಿಕೆ

Update: 2023-07-26 21:37 IST

 ಸುಧಾ ಮೂರ್ತಿ | Photo: PTI

ಬೆಂಗಳೂರು,  : ಚಮಚವನ್ನು ಮಾಂಸಾಹಾರಕ್ಕೆ ಬಳಸುವ ಸಾಧ್ಯತೆ ಇರುವುದರಿಂದ, ನಾನು ಯಾವಾಗಲೂ ನನ್ನದೇ ಚಮಚ ಕೊಂಡೊಯ್ಯುತ್ತೇನೆ ಎಂದು ಹೇಳುವ ಮೂಲಕ ಲೇಖಕಿ, ಸಮಾಜ ಸೇವಕಿ ಹಾಗೂ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ತನ್ನನ್ನು ‘ಶುದ್ಧ ಸಸ್ಯಹಾರಿ’ ಎಂದು ಕರೆದುಕೊಂಡಿರುವ ಅವರು, ತಾನು ಕೆಲಸದಲ್ಲಿ ಸಾಹಸಿ. ಆದರೆ, ಆಹಾರದಲ್ಲಿ ಅಲ್ಲ ಎಂದು ಅವರು ಹೇಳಿದ್ದಾರೆ. ಲೇಖಕ ಕುನಾಲ್ ವಿಜಯಕರ್ ನಡೆಸಿಕೊಡುವ ಯುಟ್ಯೂಬ್ ಶೋ ‘ಖಾನೆ ಮೈನ್ ಕೌನ್ ಕ್ಯಾ’ದ ಇತ್ತೀಚೆಗಿನ ಎಪಿಸೋಡ್‌ನಲ್ಲಿ ಸುಧಾ ಮೂರ್ತಿ ಅವರು, ‘‘ನಾನು ನಿಜವಾಗಿಯೂ ಹೆದರಿದ್ದೇನೆ.

ನಾನು ಶುದ್ಧ ಸಸ್ಯಾಹಾರಿ. ನಾನು ಮೊಟ್ಟೆ ಅಥವಾ ಬೆಳ್ಳುಳ್ಳಿ ಕೂಡ ತಿನ್ನುವುದಿಲ್ಲ. ಸಸ್ಯಾಹಾರ ಹಾಗೂ ಮಾಂಸಾಹಾರಕ್ಕೆ ಒಂದೇ ಚಮಚ ಬಳಸಬಹುದು ಎಂದು ನಾನು ಹೆದರಿದ್ದೇನೆ. ಆದುದರಿಂದ ನಾವು ಹೊರಗೆ ಹೋಗುವಾಗ ಸಸ್ಯಾಹಾರಿ ರೆಸ್ಟೋರೆಂಟ್ ಅನ್ನು ಮಾತ್ರ ಹುಡುಕುತ್ತೇನೆ. ಅಥವಾ ಒಂದು ಬ್ಯಾಗ್ ತುಂಬ ತಿನಿಸುಗಳನ್ನು ಕೊಂಡೊಯ್ಯುತ್ತೇನೆ’’ ಎಂದು ಹೇಳಿದ್ದಾರೆ.

ಅವರ ಹೇಳಿಕೆಯ ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ‘ಶುದ್ಧ ಸಸ್ಯಹಾರ’ವು ಹೆಚ್ಚಾಗಿ ಬ್ರಾಹ್ಮಣ ಧರ್ಮದೊಂದಿಗೆ ಸಂಬಂಧ ಹೊಂದಿರುವುದರಿಂದ ಕೆಲವರು ಈ ಹೇಳಿಕೆ ಜಾತಿವಾದಿ ಎಂದು ಪರಿಗಣಿಸಿದ್ದಾರೆ. ಇತರರು ಒಬ್ಬರ ಆಹಾರ ಪದ್ಧತಿ ಹಾಗೂ ಅಭ್ಯಾಸದಲ್ಲಿ ಮಧ್ಯಪ್ರವೇಶಿಸಬಾರದು ಎಂದು ಅಭಿಪ್ರಾಯಿಸಿದ್ದಾರೆ.

ಸುಧಾ ಮೂರ್ತಿ ಅವರ ಹೇಳಿಕೆಯೊಂದಿಗೆ ಲೇಖನವೊಂದನ್ನು ಟ್ವೀಟ್ ಮಾಡಿರುವ ಪತ್ರಕರ್ತರಾದ ರಿತುಪರ್ಣ ಚಟರ್ಜಿ, ‘‘ಒಬ್ಬರು ವ್ಯಕ್ತಿಯನ್ನು ತಿಳಿಯಲು ಬಯಸಿದರೆ ಅವರನ್ನು ಹೆಚ್ಚು ಮಾತನಾಡಲು ಬಿಡಿ ಎಂದು ಹೇಳುತ್ತಾರೆ. ಅವರು (ನಾರಾಯಣಮೂರ್ತಿ ದಂಪತಿ) ಹೆಚ್ಚು ಮಾತನಾಡಿದಷ್ಟು ವಿಕ್ಷಿಪ್ತ ಹಾಗೂ ಜಾತಿವಾದಿಯಂತೆ ಕಾಣುತ್ತದೆ’’ ಎಂದಿದ್ದಾರೆ. ಓರ್ವ ಟ್ವಿಟರ್ ಬಳಕೆದಾರರು ಸುಧಾಮೂರ್ತಿ ಅವರ ಅಳಿಯ ಹಾಗೂ ಬ್ರಿಟನ್‌ನ ಪ್ರಧಾನಿ ರಿಷಿ ಸುನಕ್ ಅವರ ಕೈಯಲ್ಲಿ ಮಾಂಸಾಹಾರದ ತಟ್ಟೆ ಹಿಡಿದುಕೊಂಡಿರುವ ಚಿತ್ರ ಶೇರ್ ಮಾಡಿದ್ದಾರೆ.

ಅಲ್ಲದೆ, ರಿಷಿ ಸುನಕ್ ಅವರು ತನ್ನ ಅತ್ತೆಗೆ ಪ್ರತ್ಯೇಕ ತಟ್ಟೆ, ಪಾತ್ರೆಗಳನ್ನು ಇರಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ‘‘ಸುಧಾಮೂತಿ ಹಾಗೂ ರಿಷಿ ಸುನಕ್, ನೀವು ನಿಮ್ಮ ಅತ್ತೆಗೆ ಪತ್ಯೇಕ ಪಾತ್ರೆಗಳನ್ನು ಇರಿಸಿದ್ದೀರಾ? ಅಲ್ಲದೆ, ನಿಮ್ಮ ಮಕ್ಕಳಿಗೆ ಅವರ ಅಜ್ಜಿಯನ್ನು ಮುಟ್ಟಲು ಅವಕಾಶ ನೀಡುವುದಿಲ್ಲವೇ?’’ ಎಂದು ಪ್ರಶ್ನಿಸಿದ್ದಾರೆ.

ಇನ್ನೋರ್ವ ಟ್ವಿಟರ್ ಬಳಕೆದಾರ, ಸುಧಾ ಮೂರ್ತಿ ಅವರು ಬ್ರಿಟನ್‌ನಲ್ಲಿರುವ ಅಳಿಯನನ್ನು ಭೇಟಿಯಾಗಲು ತೆರಳಿದ ಸಂದರ್ಭ ಕೂಡ ಚಮಚಗಳನ್ನು ಕೊಂಡೊಯುತ್ತಾರೆಯೇ? ಅಥವಾ ಇದು ಭಾರತೀಯರಿಗೆ ಮಾತ್ರ ಅನ್ವಯವೇ ಎಂದು ಅವರು ಪ್ರಶ್ನಿಸಿದ್ದಾರೆ. ‘‘ಆದುದರಿಂದ ಸುಧಾ ಮೂರ್ತಿ ಅವರು ಮಾಂಸಾಹಾರಿ ಭಾರತೀಯರ ಮನೆಯಲ್ಲಿ ಆಹಾರ ಸೇವಿಸುವುದಿಲ್ಲವೇ ? ಅಥವಾ ಯಾವುದೇ ಭಾರತೀಯರು ಅವರಂತೆ ಶುದ್ಧರಲ್ಲವೇ ? ಅಥವಾ ಅವರ ಶುದ್ಧತೆ ನಿಯಂತ್ರಣ ನೀತಿ ವಿದೇಶಿಯರಿಗೆ ಮಾತ್ರ ಅನ್ವಯವೇ? ರಿಷಿ ಸುನಕ್ ಸಸ್ಯಾಹಾರಿಯೇ? ಅವರು ತಮ್ಮ ಹೆತ್ತವರೊಂದಿಗೆ ಆಹಾರ ಸೇವಿಸುವುದಿಲ್ಲವೇ’’ ಎಂದು ಪ್ರಶ್ನಿಸಿದ್ದಾರೆ.

ಇನ್ನೋರ್ವ ಟ್ವಿಟರ್ ಬಳಕೆದಾರ, ಸುಧಾ ಮೂರ್ತಿ ಅವರು ಯಾವ ರೀತಿಯ ಆಹಾರ ತಿನ್ನಬೇಕು ಎಂಬುದನ್ನು ನಿರ್ಧರಿಸಲು ಮುಕ್ತರು. ಇದರಲ್ಲಿ ಜಾತಿವಾದಿ ಮನಸ್ಥಿತಿ ಇಲ್ಲ. ‘‘ಈ ವಿಷಯದ ಕುರಿತಂತೆ ಜನರು ಸುಧಾ ಮೂರ್ತಿಯವರನ್ನು ಯಾಕೆ ವಿರೋಧಿಸುತ್ತಾರೆ ಎಂಬುದು ನನಗೆ ತಿಳಿಯುತ್ತಿಲ್ಲ. ಸಸ್ಯಾಹಾರಿಗಳಾದ ಹೆಚ್ಚಿನವರು ಈ ವಿಷಯದ ಕುರಿತು ನಿಜವಾಗಿಯೂ ಸಂವೇದನಾಶೀಲರಾಗಿರುತ್ತಾರೆ. ಇದರಲ್ಲಿ ಜಾತಿವಾದ ಎಲ್ಲಿದೆ?. ಇದಲ್ಲದೆ, ಹಲವು ಮಾಂಸಾಹಾರಿಗಳು ನಿರ್ದಿಷ್ಟ ಮಾಂಸದ ಬಗ್ಗೆ ಕೂಡ ಸಂವೇದನಾಶೀಲರಾಗಿರುತ್ತಾರೆ’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News