ಚುನಾವಣಾ ಆಯೋಗದಿಂದ ಮೊದಲ ಐದು ಹಂತಗಳ ಕ್ಷೇತ್ರವಾರು ಮತದಾನದ ಅಂಕಿ ಅಂಶ ಬಿಡುಗಡೆ

Update: 2024-05-25 15:53 GMT

ಸಾಂದರ್ಭಿಕ ಚಿತ್ರ | PC : PTI 

ಹೊಸದಿಲ್ಲಿ : ಮೊದಲ ಐದು ಹಂತಗಳಲ್ಲಿ ಚಲಾವಣೆಯಾದ ಮತಗಳ ಅಂಕಿ ಅಂಶಗಳ ಕುರಿತು ಕ್ಷೇತ್ರವಾರು ದತ್ತಾಂಶಗಳನ್ನು ಚುನಾವಣಾ ಆಯೋಗವು ಶನಿವಾರ ಬಿಡುಗಡೆಗೊಳಿಸಿದೆ.

ಚುನಾವಣೆಗಳಲ್ಲಿ ಚಲಾವಣೆಯಾದ ಮತಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಆಯೋಗವು, ಚುನಾವಣಾ ಪ್ರಕ್ರಿಯೆಯನ್ನು ಹಾಳುಗೆಡವಲು ಸುಳ್ಳು ನಿರೂಪಣೆಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆದಿವೆ ಎಂದು ಹೇಳಿದೆ.

ಅಂತಿಮ ಮತದಾನ ಪ್ರಮಾಣದ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸುವಲ್ಲಿ ವಿಳಂಬಕ್ಕಾಗಿ ಚುನಾವಣಾ ಆಯೋಗವನ್ನು ಟೀಕಿಸಿದ್ದ ಪ್ರತಿಪಕ್ಷಗಳು, ಪ್ರತಿ ಲೋಕಸಭಾ ಕ್ಷೇತ್ರದಲ್ಲಿನ ಒಟ್ಟು ಮತದಾರರ ಸಂಖ್ಯೆಯನ್ನು ಪ್ರಕಟಿಸುವಂತೆ ಆಗ್ರಹಿಸಿದ್ದವು.

ಮತಗಟ್ಟೆವಾರು ಮತದಾನದ ದತ್ತಾಂಶಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಎನ್‌ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ಬೇಡಿಕೆಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿತ್ತು. ಇದರ ಬೆನ್ನಿಗೇ ಶನಿವಾರ ಚುನಾವಣಾ ಆಯೋಗವು ತಾನಾಗಿಯೇ ಮತದಾರರ ಸಂಪೂರ್ಣ ಸಂಖ್ಯೆಗಳನ್ನು ಪ್ರಕಟಿಸಿದೆ.

ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಸಂಪೂರ್ಣ ಸಂಖ್ಯೆಯನ್ನು ಸೇರಿಸಲು ಮತದಾನದ ದತ್ತಾಂಶಗಳ ಸ್ವರೂಪವನ್ನು ವಿಸ್ತರಿಸಲು ತಾನು ನಿರ್ಧರಿಸಿರುವುದಾಗಿ ಚುನಾವಣಾ ಆಯೋಗವು ತಿಳಿಸಿದೆ.

ಆಯೋಗವು ಶನಿವಾರ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳಂತೆ ಮೊದಲ ಐದು ಹಂತಗಳಲ್ಲಿ ದೇಶದಲ್ಲಿಯ 428 ಲೋಕಸಭಾ ಕ್ಷೇತ್ರಗಳಲ್ಲಿ 76.40 ಕೋಟಿ ಅರ್ಹ ಮತದಾರರ ಪೈಕಿ 50.72 ಕೋಟಿ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ.

ಹಂತವಾರು ಮತದಾರರ ಸಂಖ್ಯೆ

ಕ್ಷೇತ್ರಗಳು ಮತದಾರರು ಮತ ಚಲಾಯಿಸಿದವರು ಪ್ರಮಾಣ

ಹಂತ 1:102 16.63 ಕೋಟಿ 11 ಕೋಟಿ ಶೇ.66.14

ಹಂತ 2:88 15.86 ಕೋಟಿ 10.58 ಕೋಟಿ ಶೇ.66.71

ಹಂತ 3:93 17.24 ಕೋಟಿ 11.32 ಕೋಟಿ ಶೇ.65.68

ಹಂತ 4:96 17.70 ಕೋಟಿ 12.24 ಕೋಟಿ ಶೇ.69.16

ಹಂತ 5:49 8.95 ಕೋಟಿ 5.57 ಕೋಟಿ ಶೇ.62.20

ಸ್ಪರ್ಧಿಸಿರುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ಬಳಿಕ ಮತದಾರರ ಅಂತಿಮ ಪಟ್ಟಿಯನ್ನು ಅಭ್ಯರ್ಥಿಗಳಿಗೆ ಒದಗಿಸಲಾಗಿದೆ ಮತ್ತು ಎಲ್ಲ ಅಭ್ಯರ್ಥಿಗಳ ಅಧಿಕೃತ ಏಜೆಂಟರು 543 ಲೋಕಸಭಾ ಕ್ಷೇತ್ರಗಳಲ್ಲಿಯ ಅಂದಾಜು 10.5 ಲಕ್ಷ ಮತಗಟ್ಟೆಗಳಲ್ಲಿ ನಿರ್ದಿಷ್ಟವಾಗಿ ಪ್ರತಿ ಮತಗಟ್ಟೆಯ ಮತದಾರರ ವಿವರಗಳಿರುವ ಫಾರ್ಮ್ 17ಸಿ ಅನ್ನು ಪಡೆಯಲಿದ್ದಾರೆ ಎಂದು ಚುನಾವಣಾ ಆಯೋಗವು ಹೇಳಿದೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News