×
Ad

ತ್ರಿಪುರಾ: ಗಡಿಯೊಳಗೆ ನುಸುಳಿದ ಮೂವರು ಬಾಂಗ್ಲಾ ಪ್ರಜೆಗಳನ್ನು ಹತ್ಯೆ ಮಾಡಿದ ಗ್ರಾಮಸ್ಥರು

Update: 2025-10-17 21:16 IST

ಸಾಂದರ್ಭಿಕ ಚಿತ್ರ | Photo Credit : PTI 

ಆಗರ್ತಲಾ,ಅ.16: ಮೂವರು ಬಾಂಗ್ಲಾ ಪ್ರಜೆಗಳನ್ನು ಸ್ಥಳೀಯರ ಗುಂಪೊಂದು ಮಾರಕಾಯುಧಗಳಿಂದ ಕಡಿದು ಹತ್ಯೆಗೈದ ಘಟನೆ ತ್ರಿಪುರಾದ ಖೊವಾಯಿ ಜಿಲ್ಲೆಯಲ್ಲಿ ನಡೆದಿದೆ.

ಬುಧವಾರ ಭಾರತದ ಗಡಿಯೊಳಗೆ ನುಸುಳಿದ ಬಾಂಗ್ಲಾದ ಮೂವರು ಪ್ರಜೆಗಳನ್ನು ಹತ್ತಿರದ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಗ್ರಾಮಸ್ಥರು ಗಮನಿಸಿದ್ದರು.

ದನಗಳ್ಳರೆಂಬ ಶಂಕೆಯಲ್ಲಿ ಅವರನ್ನು ಸ್ಥಳೀಯರು ಅವರನ್ನು ಪ್ರಶ್ನಿಸಿದರು. ಆಗ ಉದ್ರಿಕ್ತಗೊಂಡ ಬಾಂಗ್ಲಾ ಪ್ರಜೆಗಳು ಘರ್ಷಣೆಗಿಳಿದು, ತಮ್ಮಲ್ಲಿದ್ದ ಹರಿತವಾದ ಆಯುಧಗಳಿಂದ ಗ್ರಾಮಸ್ಥರ ಮೇಲೆ ದಾಳಿ ನಡೆಸಿದರು.

ಗಾಯಗೊಂಡ ಗ್ರಾಮಸ್ಥರು ತಪ್ಪಿಸಿಕೊಂಡು ಬಂದು, ಆ ಪ್ರದೇಶದ ಇತರರನ್ನು ಎಚ್ಚರಿಸಿದರು. ಆಗ ಸ್ಥಳೀಯ ನಿವಾಸಿಗಳ ಗುಂಪಾಗಿ ಸ್ಥಳಕ್ಕೆ ಧಾವಿಸಿ ಬಂದು, ಒಳನುಸುಳುಕೋರರೊಂದಿಗೆ ಹೊಡೆದಾಟಕ್ಕಿಳಿದು, ಮೂವರನ್ನೂ ಬರ್ಬರವಾಗಿ ಮಾರಕಾಯುಧಗಳಿಂದ ಕಡಿದು ಹತ್ಯೆಗೈದಿದ್ದಾರೆೆಂದು ವರದಿಯಾಗಿದೆ.

ಆನಂತರ ಸ್ಥಳಕ್ಕೆ ಬಂದ ಪೊಲೀಸರ ಬಾಂಗ್ಲಾ ಒಳನುಸುಳುಕೋರರ ಮೃತದೇಹಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ಖೋವಾಯಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ಗಾಯಗೊಂಡ ಗ್ರಾಮಸ್ಥರನ್ನು ಬೆಹೆಲಾಬಾರಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಮೃತಪಟ್ಟ ಬಾಂಗ್ಲಾ ಪ್ರಜೆಗಳನ್ನು ಜುವಾಲ್ ಮಿಯಾ, ಸಾಜಲ್ ಮಿಯಾ ಹಾಗೂ ಪಂಡಿತ್ ಮಿಯಾ ಎಂದು ಗುರುತಿಸಲಾಗಿದೆ.

*ಬಾಂಗ್ಲಾ ತೀವ್ರ ಖಂಡನೆ: ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ತ್ರಿಪುರಾದಲ್ಲಿ ಮೂರು ಬಾಂಗ್ಲಾ ಪ್ರಜೆಗಳನ್ನು ಸ್ಥಳೀಯರ ಗುಂಪೊಂದು ಬರ್ಬರವಾಗಿ ಕಡಿದು ಹತ್ಯೆಗೈದ ಘಟನೆಯನ್ನು ಬಾಂಗ್ಲಾ ಸರಕಾರ ತೀವ್ರವಾಗಿ ಖಂಡಿಸಿದ್ದು, ಇದೊಂದು ಹೇಯ ಹಾಗೂ ಅಸ್ವೀಕಾರಾರ್ಹ ಕೃತ್ಯವೆಂದು ಬಣ್ಣಿಸಿದೆ.

ಈ ವಿಷಯವಾಗಿ ಭಾರತ ಸರಕಾರವು ತಕ್ಷಣವೇ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾದ ತನಿಖೆಯನ್ನು ನಡೆಸಬೇಕೆಂದು ಅದು ಆಗ್ರಹಿಸಿದೆ. ಗಡಿಯುದ್ದಕ್ಕೂ ಇತಹ ಘಟನೆಗಳು ಮರುಕಳಿಸುವುದನ್ನು ತಡೆಯಲು ಭಾರತವು ದೃಢವಾದ ಕ್ರಮಗಳನ್ನು ಕೈಗೊಳ್ಳುವಂತೆ ಬಾಂಗ್ಲಾ ಸರಕಾರದ ಹೇಳಿಕೆ ತಿಳಿಸಿದೆ.

ಈ ಖಂಡನಾರ್ಹ ಕೃತ್ಯದ ಕುರಿತು ಬಾಂಗ್ಲಾ ಸರಕಾರವು ಗಂಭೀರ ಕಳವಳವನ್ನು ವ್ಯಕ್ತಪಡಿಸುತ್ತದೆ ಹಾಗೂ ಈ ಕೃತ್ಯವನ್ನು ಎಸಗಿದವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂದು ಕರೆ ನೀಡುತ್ತದೆ. ಎಲ್ಲಾ ವ್ಯಕ್ತಿಗಳು ಅವರು ಯಾವುದೇ ದೇಶದವರಾಗಲಿ, ಅವರು ಅಜಾಗರೂಕತೆಯಿಂದ ಅಂತಾರಾಷ್ಟ್ರೀಯ ಗಡಿದಾಟಿ ಬಂದಿದ್ದರೂ ರಕ್ಷಣೆ ಹಾಗೂ ಘನತೆಯನ್ನು ಪಡೆಯುವುದು ಅವರ ಮೂಲಭೂತ ಹಕ್ಕಾಗಿದೆ ಎಂದು ಸಚಿವಾಲಯ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News