ಸಂಸತ್ತಿನಲ್ಲಿ ಹಮಾಸ್ ಕುರಿತು ಪ್ರಶ್ನೆಗೆ ಉತ್ತರವನ್ನು ಅನುಮೋದಿಸಿದ್ದನ್ನು ನಿರಾಕರಿಸಿದ ಕೇಂದ್ರ ಸಚಿವೆ
ಮೀನಾಕ್ಷಿ ಲೇಖಿ | Photo: PTI
ಹೊಸದಿಲ್ಲಿ : ಫೆಲೆಸ್ತೀನಿ ಬಂಡುಕೋರ ಗುಂಪು ಹಮಾಸ್‌ನ್ನು ಭಾರತದಲ್ಲಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವುದಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರವನ್ನು ಅನುಮೋದಿಸಿದ್ದನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಶನಿವಾರ ನಿರಾಕರಿಸಿದ್ದಾರೆ.
ಪತ್ರಕರ್ತ ಸಿದ್ಧಾಂತ ಸಿಬಲ್ ಅವರು ಶುಕ್ರವಾರ ಲೇಖಿಯವರ ಹೆಸರನ್ನು ಉಲ್ಲೇಖಿಸಿದ್ದ ಸಂಸತ್ ವೆಬ್‌ಸೈಟ್‌ನಲ್ಲಿಯ ಅಧಿಕೃತ ಉತ್ತರವನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಸಿಬಲ್ ಪೋಸ್ಟ್‌ಗೆ ಶನಿವಾರ ಪ್ರತಿಕ್ರಿಯಿಸಿರುವ ಲೇಖಿ,‘ಈ ಪ್ರಶ್ನೆ ಮತ್ತು ಈ ಉತ್ತರದೊಂದಿಗಿನ ಯಾವುದೇ ದಾಖಲೆಗೆ ನಾನು ಸಹಿ ಮಾಡಿಲ್ಲ. ನೀವು ತಪ್ಪು ಮಾಹಿತಿಯನ್ನು ಪಡೆದುಕೊಂಡಿದ್ದೀರಿ ’ ಎಂದು ಹೇಳಿದ್ದಾರೆ.
ಸಂಸತ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಪ್ರಶ್ನೆಯನ್ನು ಕಾಂಗ್ರೆಸ್‌ನ ಲೋಕಸಭಾ ಸದಸ್ಯ ಕೆ.ಸುಧಾಕರನ್ ಕೇಳಿದ್ದರು. ಭಾರತದಲ್ಲಿ ಹಮಾಸ್‌ನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ಯಾವುದೇ ಪ್ರಸ್ತಾವವಿದೆಯೇ ಎಂದು ಅವರು ಸರಕಾರವನ್ನು ಪ್ರಶ್ನಿಸಿದ್ದರು. ಹಮಾಸ್‌ನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸುವಂತೆ ಯಾವುದೇ ಬೇಡಿಕೆಯನ್ನು ಇಸ್ರೇಲ್ ಸರಕಾರವು ಭಾರತೀಯ ಅಧಿಕಾರಿಗಳ ಮುಂದೆ ಎತ್ತಿತ್ತೇ ಎಂದೂ ಸುಧಾಕರನ್ ಕೇಳಿದ್ದರು.
ಸಂಸತ್ತಿನ ವೆನ್‌ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ತನ್ನ ಪ್ರತಿಕ್ರಿಯೆಯಲ್ಲಿ ಸಂಘಟನೆಯೊಂದನ್ನು ಭಯೋತ್ಪಾದಕ ಎಂದು ಘೋಷಿಸುವುದು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯ ವ್ಯಾಪ್ತಿಯಲ್ಲಿದೆ ಎಂದು ಹೇಳಿರುವ ಲೇಖಿ,ಯಾವುದೇ ಸಂಘಟನೆಯನ್ನು ಭಯೋತ್ಪಾದಕ ಗುಂಪು ಎಂದು ಘೋಷಿಸುವುದನ್ನು ಸಂಬಂಧಿತ ಸರಕಾರಿ ಇಲಾಖೆಗಳು ಯುಎಪಿಎ ನಿಬಂಧನೆಗಳಡಿ ಪರಿಗಣಿಸುತ್ತವೆ ಎಂದು ತಿಳಿಸಿದ್ದಾರೆ.
ಅಧಿಕೃತ ಉತ್ತರಕ್ಕೆ ಸಹಿ ಹಾಕಿದ್ದನ್ನು ಲೇಖಿ ನಿರಾಕರಿಸಿದ ಬಳಿಕ ಸಾಮಾಜಿಕ ಮಾಧ್ಯಮ ಬಳಕೆದಾರರೋರ್ವರು,ನಿಮ್ಮ ಸ್ಥಾನದಲ್ಲಿ ಈ ಉತ್ತರವನ್ನು ನೀಡಿದ್ದು ಯಾರು ಎಂದು ಸಚಿವೆಯನ್ನು ಪ್ರಶ್ನಿಸಿದ್ದಾರೆ. ವಿಚಾರಣೆಯು ತಪ್ಪಿತಸ್ಥ ಯಾರು ಎನ್ನುವುದನ್ನು ಬಹಿರಂಗಗೊಳಿಸುತ್ತದೆ ಎಂದು ಲೇಖಿ ಟ್ವೀಟಿಸಿದ್ದಾರೆ.
ಲೇಖಿಯವರಿಗೆ ಗೊತ್ತಿಲ್ಲದೆ ಅವರ ಉತ್ತರವನ್ನು ಸಂಸತ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದು ಹೇಗೆ ಎಂದು ಪ್ರತಿಪಕ್ಷ ಸಂಸದೆ ಹಾಗೂ ಶಿವಸೇನೆ (ಠಾಕ್ರೆ ಬಣ) ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರೂ ಪ್ರಶ್ನಿಸಿದ್ದಾರೆ.
ತನ್ನದೆಂದು ಹೇಳಲಾಗಿರುವ ಉತ್ತರವನ್ನು ನಿರಾಕರಿಸುವ ಮೂಲಕ ಲೇಖಿ ಅದು ನಕಲಿ ಎಂದು ಪ್ರತಿಪಾದಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿರುವ ಚತುರ್ವೇದಿ, ಹೌದು ಎಂದಾದರೆ ಇದು ಅಸ್ತಿತ್ವದಲ್ಲಿರುವ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸ್ಪಷ್ಟನೆಯನ್ನು ನೀಡಬೇಕು ಎಂದು ಟ್ವೀಟಿಸಿದ್ದಾರೆ.