ವೋಟ್ ಚೋರ್, ಗಾಧಿ ಛೋಡ್: ಕಾಂಗ್ರೆಸ್ ರಾಷ್ಟ್ರವ್ಯಾಪಿ ಆಂದೋಲನ
PC: x.com/ttindia
ಹೊಸದಿಲ್ಲಿ: ಮತಗಳ್ಳತನ ಮತ್ತು ಭಾರತದ ಪ್ರಜಾಪ್ರಭುತ್ವದ ಹತ್ಯೆ ವಿರುದ್ಧ ರಾಷ್ಟ್ರವ್ಯಾಪಿ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಮಂಗಳವಾರ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡಾ ಸಭೆಯಲ್ಲಿ ಭಾಗವಹಿಸಿದ್ದರು.
ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಿರುವ ಗಂಭೀರ ವಿಚಾರವನ್ನು ಬಹಿರಂಗಪಡಿಸುವಲ್ಲಿ ರಾಹುಲ್ ಗಾಂಧಿಯವರು ನಡೆಸುತ್ತಿರುವ ಕೆಚ್ಚೆದೆಯ ಹೋರಾಟವನ್ನು ಮತ್ತು ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಭೆ ಒಕ್ಕೊರಲಿನಿಂದ ಅಭಿನಂದಿಸಿತು.
ದೇಶಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಆ.14ರಂದು ರಾತ್ರಿ 8 ಗಂಟೆಗೆ 'ವೋಟ್ ಚೋರ್, ಗಾಧಿ ಛೋಡ್' ಮೊಂಬತ್ತಿ ಜಾಥಾ ಹಮ್ಮಿಕೊಳ್ಳಲು ಸಭೆ ನಿರ್ಣಯಿಸಿತು. ಆಗಸ್ಟ್ 22 ರಿಂದ ಸೆ. 7ರ ನಡುವೆ ಎಲ್ಲ ರಾಜ್ಯ ರಾಜಧಾನಿಗಳಲ್ಲಿ ಬೃಹತ್ ರ್‍ಯಾಲಿಗಳನ್ನು ನಡೆಸಲು ನಿರ್ಧರಿಸಲಾಯಿತು. ಈ ರ್‍ಯಾಲಿಗಳಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಗಳು ಲಕ್ಷಾಂತರ ಜನರನ್ನು ಒಗ್ಗೂಡಿಸಿ ಉತ್ತರದಾಯಿತ್ವವನ್ನು ಆಗ್ರಹಿಸಲು ಕೂಡಾ ಸಭೆ ನಿರ್ಧರಿಸಿತು.
ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರವರೆಗೆ ಸಹಿ ಅಭಿಯಾನ ಹಮ್ಮಿಕೊಂಡು, ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿರುವ ಬಿಜೆಪಿಯ ವಿರುದ್ಧ ಜನಮತಗಣನೆಯಾಗಿ 5 ಕೋಟಿ ಸಹ ಸಂಗ್ರಹಿಸಲು ನಿರ್ಧರಿಸಲಾಯಿತು. ಕೊನೆಯ ಉಸಿರು ಇರುವವರೆಗೂ ಸಂವಿಧಾನವನ್ನು ರಕ್ಷಿಸಲು ಮತ್ತು ಪ್ರತಿ ಮತದಾರರ ಹಕ್ಕುಗಳನ್ನು ರಕ್ಷಿಸಲು ಹೋರಾಟ ನಡೆಸುವುದಾಗಿ ಸಭೆ ನಿರ್ಣಯ ಕೈಗೊಂಡಿತು. ಇದು ರಾಜಕೀಯ ಹೋರಾಟವಲ್ಲ; ನಮ್ಮ ಪ್ರಜಾಪ್ರಭುತ್ವದ ಆತ್ಮವನ್ನು ರಕ್ಷಿಸುವ ಹೋರಾಟ ಎಂದು ನಿರ್ಣಯದಲ್ಲಿ ಸ್ಪಷ್ಟಪಡಿಸಲಾಗಿದೆ. ಎಲ್ಲ ಪ್ರದೇಶ ಕಾಂಗ್ರೆಸ್ ಸಮಿತಿಗಳ ಉಸ್ತುವಾರಿ ಹೊಂದಿರುವ ಮುಖಂಡರು ಮತ್ತು ಪ್ರಧಾನ ಕಾರ್ಯದರ್ಶಿಗಳು ವಿವಿಧ ಸ್ತರಗಳ ಪ್ರತಿಭಟನೆಯನ್ನು ಅನುಷ್ಠಾನಗೊಳಿಸುವರು ಎಂದು ತಿಳಿದು ಬಂದಿದೆ.