'ಮತ ಕಳ್ಳತನʼದ ಸುಳ್ಳು ಆರೋಪಗಳಿಗೆ ಚುನಾವಣಾ ಆಯೋಗ ಹೆದರುವುದಿಲ್ಲ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್
ರಾಹುಲ್ ಗಾಂಧಿಯ ʼಮತ ಕಳ್ಳತನʼ ಆರೋಪದ ಕುರಿತು ಚುನಾವಣಾ ಆಯೋಗ ಪತ್ರಿಕಾಗೋಷ್ಠಿ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್
ಹೊಸದಿಲ್ಲಿ : "ಮತ ಕಳ್ಳತನ"ದ ಸುಳ್ಳು ಆರೋಪಗಳಿಗೆ ಚುನಾವಣಾ ಆಯೋಗ ಹೆದರುವುದಿಲ್ಲ. ಚುನಾವಣಾ ಆಯೋಗ ದೇಶದ ಮತದಾರರೊಂದಿಗೆ ದೃಢವಾಗಿ ನಿಲ್ಲುತ್ತದೆ. ಚುನಾವಣಾ ಆಯೋಗ ಸರಕಾರ ಮತ್ತು ವಿರೋಧ ಪಕ್ಷದ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡಿಲ್ಲ ಎಂದು ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್, ಮತಗಳ ಕಳ್ಳತನʼದ ಸುಳ್ಳು ಆರೋಪಗಳಿಗೆ ಚುನಾವಣಾ ಆಯೋಗ ಹೆದರುವುದಿಲ್ಲ. 'ಮತಗಳ ಕಳ್ಳತನ' ಆರೋಪಗಳು ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಹೇಳಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಮತಗಳ್ಳತನ ನಡೆದಿದ್ದು, 6.5 ಲಕ್ಷ ಮತಗಳ ಪೈಕಿ 1 ಲಕ್ಷಕ್ಕೂ ಅಧಿಕ ಮತಗಳ್ಳತನ ನಡೆದಿದೆಯೆಂದು ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು.
ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ನಕಲಿ ಮತದಾರರು, ಅಮಾನ್ಯವಾದ ವಿಳಾಸಗಳು ಹಾಗೂ ಮತದಾರರ ಸೇರ್ಪಡೆಯನ್ನು ಕಾಂಗ್ರೆಸ್ ಪಕ್ಷದ ಆಂತರಿಕ ಅಧ್ಯಯನವು ಪತ್ತೆ ಹಚ್ಚಿದೆಯೆಂದು ಹೇಳಿದ್ದರು. ಈ ಕುರಿತ ದಾಖಲೆಗಳನ್ನು ಅವರು ಪತ್ರಿಕಾಗೋಷ್ಟಿಯಲ್ಲಿ ಬಿಡುಗಡೆ ಮಾಡಿದ್ದರು.
ಇದಲ್ಲದೆ ಬಿಹಾರ ಎಸ್‌ಐಆರ್ ಮತ್ತು ಮತದಾರರ ಪಟ್ಟಿಯಲ್ಲಿನ ಅಕ್ರಮದ ಕುರಿತು ರಾಹುಲ್ ಗಾಂಧಿ ಬಿಹಾರದ ಸಸಾರಾಂನಲ್ಲಿ ‘ವೋಟ್ ಅಧಿಕಾರ ಯಾತ್ರಾ’ಗೆ ಚಾಲನೆ ನೀಡಿದ್ದಾರೆ.