×
Ad

ವೃತ್ತಿಜೀವನದಲ್ಲಿ ‘ನಿರ್ಣಾಯಕ ವರ್ಷ’ನಷ್ಟಕ್ಕಾಗಿ ಸಾಕ್ಷಿ, ವಿನೇಶ್ ವಿರುದ್ಧ ಕಿರಿಯ ಕುಸ್ತಿಪಟುಗಳ ಪ್ರತಿಭಟನೆ

Update: 2024-01-03 22:48 IST

Photo: PTI 

ಹೊಸದಿಲ್ಲಿ: ಭಾರತೀಯ ಕುಸ್ತಿರಂಗದಲ್ಲಿನ ಪ್ರಸಕ್ತ ಬಿಕ್ಕಟ್ಟು ಬುಧವಾರ ಹೊಸ ತಿರುವೊಂದನ್ನು ಪಡೆದಿದೆ. ಅಗ್ರ ಕುಸ್ತಿಪಟುಗಳಾದ ಬಜರಂಗ ಪುನಿಯಾ,ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ರಿಂದಾಗಿ ತಾವು ತಮ್ಮ ವೃತ್ತಿಜೀವನದ ನಿರ್ಣಾಯಕ ವರ್ಷವೊಂದನ್ನು ಕಳೆದುಕೊಂಡಿದ್ದಾಗಿ ಆರೋಪಿಸಿ ನೂರಾರು ಕಿರಿಯ ಕುಸ್ತಿಪಟುಗಳು ಇಲ್ಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆಯನ್ನು ನಡೆಸಿದರು.

ಉತ್ತರ ಪ್ರದೇಶ, ಹರ್ಯಾಣ ಮತ್ತು ದಿಲ್ಲಿಯ ವಿವಿಧೆಡೆಗಳಿಂದ ಕಿರಿಯ ಕುಸ್ತಿಪಟುಗಳು ಬಸ್ ಗಳಲ್ಲಿ ಜಂತರ್ ಮಂತರ್ ಗೆ ಆಗಮಿಸಿದ್ದರು. ಇದು ಪೋಲಿಸರ ಗಮನಕ್ಕೆ ಬಂದಿರಲಿಲ್ಲ. ಪುನಿಯಾ, ಮಲಿಕ್ ಮತ್ತು ಫೋಗಟ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಕಿರಿಯ ಕುಸ್ತಿಪಟುಗಳನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗಳು ಪರದಾಡುವಂತಾಗಿತ್ತು.

‘ಯುಡಬ್ಲ್ಯುಡಬ್ಲ್ಯು (ಯುನೈಟೆಡ್ ವರ್ಲ್ಡ್ ರೆಸ್ಲಿಂಗ್) ಈ ಮೂವರು ಕುಸ್ತಿಪಟುಗಳಿಂದ ನಮ್ಮ ಕುಸ್ತಿಯನ್ನು ರಕ್ಷಿಸಿ’ ಎಂಬ ಬ್ಯಾನರ್ ಗಳನ್ನು ಪ್ರತಿಭಟನಾಕಾರರು ಹಿಡಿದುಕೊಂಡಿದ್ದರು.

ವಿಪರ್ಯಾಸವೆಂದರೆ ಪುನಿಯಾ, ಮಲಿಕ್ ಮತ್ತು ಫೋಗಟ್ ಸರಿಸುಮಾರು ಒಂದು ವರ್ಷದ ಹಿಂದೇ ಜಂತರ್ಮಂತರ್ ನಲ್ಲಿ ಆಗಿನ ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್ಐ)ದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ನಿಂದ ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು. ಅವರ ಹೋರಾಟಕ್ಕೆ ಬೃಹತ್ ಜನಬೆಂಬಲ ವ್ಯಕ್ತವಾಗಿತ್ತು. ಇಂದು ಅದೇ ಜಂತರ್ಮಂತರ್ ನಲ್ಲಿ ತಮ್ಮ ವೃತ್ತಿಜೀವನವನ್ನು ಹಾಳು ಮಾಡುತ್ತಿದ್ದಾರೆ ಎಂಬ ಆರೋಪದೊಂದಿಗೆ ಕಿರಿಯ ಕುಸ್ತಿಪಟುಗಳು ಈ ಅಗ್ರ ಕುಸ್ತಿಪಟುಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಡಬ್ಲ್ಯುಎಫ್ಐ ಅಮಾನತನ್ನು ಹಿಂದೆಗೆದುಕೊಳ್ಳಬೇಕು ಎಂದೂ ಬುಧವಾರ ಪ್ರತಿಭಟನಾಕಾರರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News