×
Ad

ಭಾವಾಪುರ ರೈತನ ಕೈ ಹಿಡಿದ ಕೋಲ್ಕತಾ ಸೇವಂತಿ

Update: 2026-02-02 14:28 IST

ಹೊಸಕೋಟೆ: ತಾಲೂಕಿನ ಭಾವಾಪುರ ಗ್ರಾಮದ ಪ್ರಗತಿಪರ ರೈತ ಮುನೇಗೌಡ 20 ಗುಂಟೆ ಜಮೀನಿನ ಪಾಲಿಹೌಸ್‌ನಲ್ಲಿ ಕೋಲ್ಕತಾ ‘ಮುಸ್ಕಿನ್ ವೈಟ್’ ಹಾಗೂ ತಮಿಳುನಾಡಿನ ರಾಯಕೋಟೆಯ ‘ಐಶ್ವರ್ಯ’ ತಳಿಯ ಸೇವಂತಿ ಬೆಳೆಯುತ್ತಿದ್ದು, ಮೊದಲ ಫಸಲಿನಲ್ಲಿಯೇ ಕೈ ತುಂಬಾ ಹಣ ಗಳಿಸಿದ್ದಾರೆ.

‘ತರಕಾರಿ ಬೆಳೆಯಿಂದ ನಿರೀಕ್ಷಿತ ಲಾಭ ಸಿಗಲಿಲ್ಲ. ತೋಟದಲ್ಲಿ ಮೂರು ವರ್ಷ ಸೇವಂತಿ ಬೆಳೆದೆ. ಅದೂ ಕೂಡ ಪ್ರಯೋಜನ ಆಗಿಲ್ಲ. ಆಗ ಪಕ್ಕದೂರಿನ ತೋಟ ನೋಡಿ ಕೋಲ್ಕತ್ತಾ ಹಾಗೂ ತಮಿಳುನಾಡಿನ ರಾಯಕೋಟಿ ಸೇವಂತಿಗೆ ತಳಿ ಸಸಿ ತರಿಸಿಕೊಂಡು ಪಾಲಿಹೌಸ್‌ನಲ್ಲಿ ಹೂ ಬೆಳೆಯುವ ಪ್ರಯೋಗಕ್ಕೆ ಮೊದಲ ಬಾರಿಗೆ ಕೈ ಹಾಕಿದೆ. ಇದು ನನ್ನ ಕೈ ಹಿಡಿದಿದೆ’ ಎನ್ನುತ್ತಾರೆ ಮುನೇಗೌಡ.

ಸೇವಂತಿ ಬೆಳೆಯಲು 1.50 ಲಕ್ಷ ರೂ. ಖರ್ಚು ಮಾಡಿದ್ದೇನೆ. ವರ್ಷದಲ್ಲಿ ನಾಲ್ಕು ಬೆಳೆ ಬರಲಿದ್ದು, ಉತ್ತಮ ಲಾಭ ಗಳಿಸಬಹುದು. ಮೊದಲ ಬೆಳೆ ಉತ್ತಮ ಇಳುವರಿ ನೀಡಿದ್ದು, ಇದರಿಂದ 2 ಲಕ್ಷ ರೂ. ಲಾಭ ಬಂದಿದೆ. ಇನ್ನೂ ಮೂರು ಬೆಳೆಬಾಕಿ ಇದೆ ಎಂದು ಮುನೇಗೌಡ ತಿಳಿಸಿದರು.

ಕೆ.ಸತ್ಯವಾರದಲ್ಲಿ ರಸ್ಕಿನ್ ವೈಟ್ ಸೇವಂತಿ ಬೆಳೆಯುತ್ತಿದ್ದನ್ನು ಕಂಡು ಕೋಲ್ಕತ್ತಾದಿಂದ ಮುಸ್ಕಿನ್ ವೈಟ್ ಮತ್ತು ತಮಿಳುನಾಡಿನ ಐಶ್ವರ್ಯ ಸಸಿಯನ್ನು ಆನ್‌ಲೈನ್ ಮೂಲಕ ತರಿಸಿಕೊಂಡೆ. 20 ಗುಂಟೆಯಲ್ಲಿದ್ದ ಪಾಲಿಹೌಸ್‌ನಲ್ಲಿ ನಾಟಿ ಮಾಡಿಸಿದೆ. ಅಲ್ಲದೆ ಎರಡು ವರ್ಷಗಳ ಹಿಂದೆ 20 ಲೋಡ್ ತಿಪ್ಪೆ ಗೊಬ್ಬರ ಮತ್ತು ಆರು ತಿಂಗಳ ಹಿಂದೆ ಸಂಗ್ರಹಿಸಿದ್ದ ಎರಡು ಲೋಡ್ ಕೋಳಿ ಗೊಬ್ಬರ ಹಾಕಿದ್ದೆ. ಊಹೆಗಿಂತಲೂ ಸಂಪಾಗಿ ಬೆಳೆದು ನಿಂತಿವೆ. ದಿನಕ್ಕೆ 60 ಕೆ.ಜಿ. ಹೂ ಕಟಾವು ಮಾಡುತ್ತಿದ್ದೇನೆ. ಒಂದು ಬೆಳೆಗೆ 2 ರಿಂದ 2.50 ಲಕ್ಷ ರೂ. ಸಿಗುತ್ತದೆ ಎಂದು ಮುನೇಗೌಡ ಹರ್ಷ ವ್ಯಕ್ತಪಡಿಸಿದರು.

ಆರೈಕೆ ಹೇಗೆ

ಮುಸ್ಕಿನ್ ವೈಟ್ ಮತ್ತು ಐಶ್ವರ್ಯ ತಳಿಯ ಸಸಿಗಳನ್ನು ಪಾಲಿಹೌಸ್‌ನಲ್ಲಿ ಮಾತ್ರನಾಟಿ ಮಾಡಿಸಿದೆ. ನಾಟಿ ಮಾಡಿದ ಒಂದು ತಿಂಗಳು ರಾತ್ರಿ ಸಂದರ್ಭದಲ್ಲಿ ಸಸಿಗೆ ಉಷ್ಣ ವಾತಾವರಣ ಇರಲೆಂದು ಸುಮಾರು 9 ವೋಲ್ಸ್‌ನ 120 ಎಲ್ ಇಡಿ ಬಲ್ಬ್ ಅಳವಡಿಸಿದೆ. ಪ್ರತಿ ದಿನ 10 ನಿಮಿಷ ಮಾತ್ರ ಸಸಿಗೆ ನೀರು ಬಿಡುತ್ತಿದ್ದೆ. ಸಸಿ ರಕ್ಷಣೆಗಾಗಿ ಒಮ್ಮೆ ಮಾತ್ರ ಬೂಸ್ಟರ್ ಗೊಬ್ಬರ ಬಳಸಲಾಗಿತ್ತು. ನಂತರ ಅಗಾಗ ಸೊಳ್ಳೆ ಔಷಧ ಸಿಂಪಡಿಸುತ್ತಿದ್ದೆ. ನೀರಿನ ಜೊತೆ ಯಾವಾಗಲಾದರೂ ಒಮ್ಮೆ ಗೊಬ್ಬರ ಹಾಕುತ್ತಿದ್ದೆ. ಸಾವಯವ ಗೊಬ್ಬರ ಹೆಚ್ಚಾಗಿ ಬಳಸಿದ್ದು ಕೈಹಿಡಿದೆ ಎಂದು ಮುನೇಗೌಡ ತಿಳಿಸಿದರು.

ವರ್ಷ ಪೂರ್ತಿ ಬೇಡಿಕೆ

ವೈಟ್ ಮಷಿನ್ ಸೇವಂತಿ ಹೂ ಬಹುತೇಕ ಸಭೆ ಸಮಾರಂಭಗಳಲ್ಲಿನ ಅಲಂಕಾರಕ್ಕೆ ಬಳಸಲಾಗುತ್ತದೆ. ಇದಕ್ಕೆ ವರ್ಷ ಪೂರ್ತಿ ಬೇಡಿಕೆ ಇದ್ದೇ ಇರುತ್ತೆ. ತಾಂತ್ರಿಕ ಬೇಸಾಯ ಮಾಡಿದರೆ ಕೇವಲ 10ರಿಂದ 20 ಗುಂಟೆ ಇದ್ದರೂ ಸಾಕು. ಕನಿಷ್ಠ ಎರಡು ಟನ್ ಹೂ ಬೆಳೆಯುತ್ತದೆ. ಈ ತಳಿಯಲ್ಲಿ ಸಾಮಾನ್ಯವಾಗಿ ವರ್ಷದಲ್ಲಿ ನಾಲ್ಕು ಬೆಳೆ ತೆಗೆಯಬಹುದು. ಇದರಿಂದ ಎಂಟು ಟನ್‌ಗೂ ಹೆಚ್ಚಿನ ಹೂ ಕಟಾವಿಗೆ ಬರುತ್ತದೆ. ವರ್ಷಕ್ಕೆ ಖರ್ಚು ವೆಚ್ಚ ತೆಗೆದರೆ 27ರಿಂದ 8 ಲಕ್ಷ ರೂ. ಲಾಭಗಳಿಸಬಹುದು.

ಗೊಬ್ಬರ, ರಾಸಾಯನಿಕ ಮತ್ತಿತರ ಕೃಷಿ ಸಾಮಗ್ರಿಯ ಪ್ರತಿ ವಸ್ತುವಿಗೂ ಒಂದು ಬೆಲೆ ಮೊದಲೇ ನಿಗದಿ ಆಗಿರುತ್ತದೆ. ಅವುಗಳಿಗೆ ಬೇಡಿಕೆ ಹೆಚ್ಚಿದರೆ ಬೆಲೆಯೂ ಹೆಚ್ಚಾಗುತ್ತದೆ. ಆದರೆ ನಾವು ಬೆಳೆದ ಬೆಳೆಗೆ ಒಂದು ಬೆಲೆ ಎಂದು ನಿಗದಿ ಇರುವುದೇ ಇಲ್ಲ. ಮಾರುಕಟ್ಟೆಯಲ್ಲಿ ಒಂದು ರೀತಿ, ದಲ್ಲಾಳಿಗಳಿಗೆ ಒಂದು ರೀತಿ, ಜನರಿಗೆ ಒಂದು ರೀತಿಯ ಬೆಲೆಯಲ್ಲಿ ಮರಾಟಮಾಡಬೇಕಾದ ಸ್ಥಿತಿ ಇದೆ.

-ಮುನೇಗೌಡ, ಸೇವಂತಿ ಹೂ ಬೆಳೆಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾರಾಯಣಸ್ವಾಮಿ ಸಿ.ಎಸ್.

contributor

Similar News